
8.5 ಲಕ್ಷಕ್ಕೂ ಅಧಿಕ ಭಕ್ತರಿಂದ ಹಾಸನಾಂಬ ದೇವಿ ದರ್ಶನ, ₹8.5 ಕೋಟಿ ಆದಾಯ: ಸಚಿವ
ಹಾಸನ: ಅಧಿದೇವತೆ ಹಾಸನಾಂಬ ದೇವಿಯ ದರ್ಶನೋತ್ಸವಕ್ಕೆ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈವರೆಗೆ ಸುಮಾರು 8.5 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ದರ್ಶನದ ಮೂಲಕ ಸುಮಾರು ₹8ಕೋಟಿಯಿಂದ ₹8.5 ಕೋಟಿ ಆದಾಯ ಸಂಗ್ರಹವಾಗಿರುವ ಮಾಹಿತಿ ಲಭ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ತಿಳಿಸಿದರು.
ಹಾಸನಾಂಬೆ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ದರ್ಶನೋತ್ಸವದಲ್ಲಿ ಜಿಲ್ಲಾಡಳಿತ ಉತ್ತಮ ವ್ಯವಸ್ಥೆ ಕಲ್ಪಿಸಿದ್ದು, ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ ಎಂದರು.
ದರ್ಶನೋತ್ಸವದ ವ್ಯವಸ್ಥೆಗಳಲ್ಲಿ ಕಂಡುಬಂದ ಲೋಪದೋಷಗಳನ್ನು ಮಾಧ್ಯಮದವರು ತಮ್ಮ ಗಮನಕ್ಕೆ ತಂದಿದ್ದಾರೆ. ಒಳ್ಳೆಯ ಕೆಲಸಗಳನ್ನು ಪ್ರಶಂಸಿಸುವುದರ ಜತೆಗೆ ತಪ್ಪುಗಳನ್ನೂ ಎತ್ತಿ ತೋರಿಸಿದ್ದಾರೆ. ಇದರಿಂದ ಅಗತ್ಯ ತಿದ್ದುಪಡಿ ಮಾಡಿಕೊಳ್ಳಲು ಸಾಧ್ಯವಾಗಿದೆ. ಮಾಧ್ಯಮದವರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ರಾತ್ರಿ 12 ಗಂಟೆಯ ವೇಳೆಯಲ್ಲಿಯೂ ಮಾಧ್ಯಮದವರು ಕರೆ ಮಾಡಿ ತಣ್ಣೀರುಹಳ್ಳದ ಕ್ರೀಡಾಂಗಣದ ಸಮೀಪ ಭಕ್ತರ ದಟ್ಟಣೆ ಹೆಚ್ಚಿರುವುದನ್ನು ಗಮನಕ್ಕೆ ತಂದಿದ್ದರು. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ನಿರೀಕ್ಷೆಗೂ ಮೀರಿ ಜನರು ಬಂದಿರುವುದು ಕಂಡುಬಂತು. ಇಷ್ಟೊಂದು ಜನಸಂದಣಿಯ ನಡುವೆಯೂ ಅರ್ಚಕರು ಶಾಂತವಾಗಿ ಪೂಜೆ ಹಾಗೂ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಅಧಿಕಾರಿಗಳು ಹಗಲಿರುಳು ಶ್ರಮಿಸಿದ್ದಾರೆ. ಅನೇಕರು ರಾತ್ರಿ ನಿದ್ರೆಯನ್ನೂ ಮಾಡದೆ ಕರ್ತವ್ಯ ನಿರ್ವಹಿಸಿದ್ದಾರೆ. ಅವರೆಲ್ಲರಿಗೂ ಧನ್ಯವಾದ ಸಲ್ಲಿಸುವುದು ನಮ್ಮ ಕರ್ತವ್ಯ ಎಂದರು.
ಭಕ್ತರ ಅನುಕೂಲಕ್ಕೆ ಸರತಿ ಸಾಲು ವಿಸ್ತರಣೆ: ಮುಂದಿನ ಮೂರು ದಿನಗಳಲ್ಲಿ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಸರದಿ ಸಾಲುಗಳನ್ನು ವಿಸ್ತರಿಸಲಾಗಿದೆ. ₹300 ವಿಶೇಷ ದರ್ಶನದ ಸರತಿ ಸಾಲು ಬಸ್ ನಿಲ್ದಾಣದವರೆಗೆ ತಲುಪಿದ್ದು, ಧರ್ಮದರ್ಶನದ ಸಾಲನ್ನು ಧರ್ಮಸ್ಥಳ ಆಸ್ಪತ್ರೆ ಸಮೀಪದವರೆಗೆ ವಿಸ್ತರಿಸಲಾಗಿದೆ. ₹1ಸಾವಿರ ಟಿಕೆಟ್ ವಿಶೇಷ ದರ್ಶನಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ ಎಂದು ಹೇಳಿದರು.
ರಾಜ್ಯಮಟ್ಟದ ನಾಯಕರು, ಮಾಜಿ ಶಾಸಕರು, ಹಾಲಿ ಶಾಸಕರು, ಸಚಿವರು ಹಾಗೂ ಇತರ ಗಣ್ಯರಿಗೆ ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ವಿಶೇಷ ದರ್ಶನಕ್ಕೆ ಸಮಯ ನಿಗದಿಪಡಿಸಲಾಗಿದೆ. ನಿಗದಿತ ಸಮಯದೊಳಗೆ ಗಣ್ಯರು ದರ್ಶನ ಪಡೆದು ತೆರಳುವ ವ್ಯವಸ್ಥೆ ಮಾಡಲಾಗಿದೆ ಎಂದರು.
ರೇವಣ್ಣ ಅವರ ವಿಚಾರದಲ್ಲಿ ಭಿನ್ನಮತವಿಲ್ಲ
ಶಾಸಕ ಎಚ್.ಡಿ. ರೇವಣ್ಣ ಅವರಿಗೆ ಆಹ್ವಾನ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಶಿವಲಿಂಗೇಗೌಡ, ಜಿಲ್ಲೆಯಲ್ಲಿ ಯಾವುದೇ ಭಿನ್ನಮತವಿಲ್ಲ. ಶಿಷ್ಟಾಚಾರದ ಪ್ರಕಾರ ಅಧಿಕಾರಿಗಳನ್ನು ಕಳುಹಿಸಿ ಆಹ್ವಾನಿಸುವ ವ್ಯವಸ್ಥೆ ಮಾಡಲಾಗಿತ್ತು. ತಹಶೀಲ್ದಾರ್ ಅವರೇ ಖುದ್ದಾಗಿ ತೆರಳಿ ಆಹ್ವಾನ ನೀಡಿದ್ದರು. ಪಾಸ್ಗಳನ್ನು ಕಳುಹಿಸಿಕೊಟ್ಟಾಗ ಅವು ಸಾಕಾಗುವುದಿಲ್ಲ ಎಂದು ವಾಪಸ್ ಕಳುಹಿಸಿರುವುದು ನಿಜ. ಬಳಿಕ ಅಧಿಕಾರಿಗಳು ಮತ್ತೊಮ್ಮೆ ತೆರಳಿ ಮನವಿ ಮಾಡಿದ್ದಾರೆ. ಹಾಸನಾಂಬ ಉತ್ಸವಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂಬುದೇ ನಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದರು.