
ಗುಳೇದಗುಡ್ಡ ತಾಲ್ಲೂಕಿನ 10 ಗ್ರಾಮಗಳಲ್ಲಿ ಬಸ್ ನಿಲ್ದಾಣಗಳೇ ಇಲ್ಲ
ಗುಳೇದಗುಡ್ಡ: ತಾಲ್ಲೂಕಿನ ಒಟ್ಟು 38 ಗ್ರಾಮಗಳ ಪೈಕಿ 10 ಗ್ರಾಮಗಳಲ್ಲಿ ಬಸ್ ನಿಲ್ದಾಣಗಳೇ ಇಲ್ಲ. ಇನ್ನು ಐದಕ್ಕೂ ಹೆಚ್ಚು ಗ್ರಾಮಗಳಲ್ಲಿ ಬಸ್ ನಿಲ್ದಾಣಗಳನ್ನು ಗ್ರಾಮದಿಂದ ಸುಮಾರು 2 ಕಿ.ಮೀ. ದೂರದಲ್ಲಿ ನಿರ್ಮಿಸಲಾಗಿದೆ.
ಮತ್ತೊಂದೆಡೆ ಐದಕ್ಕೂ ಹೆಚ್ಚು ಗ್ರಾಮಗಳಲ್ಲಿನ ಬಸ್ ನಿಲ್ದಾಣಗಳು ಶಿಥಿಲಾವಸ್ಥೆ ತಲುಪಿವೆ. ಹೀಗಾಗಿ ತಾಲ್ಲೂಕಿನಲ್ಲಿ ಬಸ್ ನಿಲ್ದಾಣಗಳ ಅವ್ಯವಸ್ಥೆ ತೀವ್ರಗೊಂಡಿದ್ದು, ಪ್ರಯಾಣಿಕರು ನಿತ್ಯ ಪರದಾಡುವಂತಾಗಿದೆ. ಈ ಸಮಸ್ಯೆಗಳನ್ನು ಪರಿಹರಿಸಲು ಸಂಬಂಧಿಸಿದ ಅಧಿಕಾರಿಗಳು ಹಾಗೂ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ನಿಲ್ದಾಣಗಳೇ ಇಲ್ಲದ ಗ್ರಾಮಗಳು: ತಾಲ್ಲೂಕಿನ ಹಳದೂರು, ಪಾದನಕಟ್ಟಿ, ಅಲ್ಲೂರು ಎಸ್.ಪಿ., ಸಬ್ಬಲಹುಣಸಿ, ಪರ್ವತಿ, ಗುಳೇದಗುಡ್ಡ ರೈಲ್ವೆ ಸ್ಟೇಷನ್, ಹಿರೇಬೂದಿಹಾಳ, ಖಾಜಿಬೂದಿಹಾಳ ಹಾಗೂ ಹಂಗರಗಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಬಸ್ಗಳು ಸಂಚರಿಸುತ್ತಿದ್ದರೂ ಪ್ರಯಾಣಿಕರಿಗೆ ಕಾದು ನಿಲ್ಲುವುದಕ್ಕೆ ಬಸ್ ನಿಲ್ದಾಣಗಳಿಲ್ಲ. ಇದರಿಂದ ಬಿಸಿಲು, ಮಳೆ ಎನ್ನದೆ ರಸ್ತೆ ಬದಿಯಲ್ಲಿಯೇ ನಿಲ್ಲಬೇಕಿದೆ.
ಪಟ್ಟಣದ ಭಂಡಾರಿ ಕಾಲೇಜು ವೃತ್ತದ ಮೂಲಕ ಕಮತಗಿ ಹಾಗೂ ಬಾಗಲಕೋಟೆಗೆ ತೆರಳುವ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಂದಲೇ ಬಸ್ ಹತ್ತುತ್ತಾರೆ. ಆದರೆ ಇಲ್ಲಿ ಸೂಕ್ತ ಬಸ್ ನಿಲ್ದಾಣವಿಲ್ಲದೆ ಪ್ರಯಾಣಿಕರು ಬಿಸಿಲಿನಲ್ಲಿಯೇ ಕಾಯಬೇಕಾಗಿದೆ. ಸುಮಾರು 10 ವರ್ಷಗಳ ಹಿಂದೆ ಇದ್ದ ಹಳೆಯ ಬಸ್ ನಿಲ್ದಾಣವನ್ನು ಕೆಡವಿ, ಅಭಿವೃದ್ಧಿ ನೆಪದಲ್ಲಿ ರಸ್ತೆ ನಿರ್ಮಿಸಲಾಗಿದೆ. ಆದರೆ ಇದುವರೆಗೆ ಹೊಸ ಬಸ್ ನಿಲ್ದಾಣ ನಿರ್ಮಿಸಿಲ್ಲ. ಕೂಡಲೇ ಇಲ್ಲಿ ನಿಲ್ದಾಣ ನಿರ್ಮಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
ಗ್ರಾಮದಿಂದ ದೂರದಲ್ಲಿ ನಿಲ್ದಾಣ: ಹಳದೂರು, ಹಿರೇಬೂದಿಹಾಳ, ಹಂಗರಗಿ, ಖಾಜಿಬೂದಿಹಾಳ ಹಾಗೂ ಸಬ್ಬಲಹುಣಸಿ ಸೇರಿದಂತೆ ಐದಕ್ಕೂ ಹೆಚ್ಚು ಗ್ರಾಮಗಳಲ್ಲಿ ಬಸ್ ನಿಲ್ದಾಣಗಳನ್ನು ಗ್ರಾಮದಿಂದ ಸುಮಾರು 2 ಕಿ.ಮೀ. ದೂರದಲ್ಲಿ ನಿರ್ಮಿಸಲಾಗಿದೆ. ಗ್ರಾಮಕ್ಕೆ ಬಸ್ಗಳು ಬಂದು ಹೋಗುತ್ತಿದ್ದರೂ ನಿಲ್ದಾಣ ದೂರದಲ್ಲಿರುವುದರಿಂದ ಪ್ರಯಾಣಿಕರಿಗೆ ಅನುಕೂಲವಾಗುತ್ತಿಲ್ಲ.
ಶಿಥಿಲಾವಸ್ಥೆಯಲ್ಲಿ ನಿಲ್ದಾಣಗಳು: ಹುಲ್ಲಿಕೇರಿ, ಹುಲ್ಲಿಕೇರಿ ಎಸ್.ಪಿ., ಮಂಗಳಗುಡ್ಡ, ನಾಗರಾಳ ಎಸ್.ಪಿ. ಹಾಗೂ ಖಾಜಿಬೂದಿಹಾಳ ಸೇರಿದಂತೆ ಹಲವು ಗ್ರಾಮಗಳ ಬಸ್ ನಿಲ್ದಾಣಗಳು ಶಿಥಿಲಾವಸ್ಥೆಯಲ್ಲಿವೆ. ಇವುಗಳಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ಹಾಗೂ ಮಳೆ, ಬಿಸಿಲಿನಿಂದ ರಕ್ಷಣೆ ಪಡೆಯಲು ಸೂಕ್ತ ವ್ಯವಸ್ಥೆಯಿಲ್ಲ.
‘ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಬಸ್ ನಿಲ್ದಾಣಗಳಿಲ್ಲ. ಇರುವ ನಿಲ್ದಾಣಗಳೂ ಹಾಳಾಗಿವೆ. ಹೊಸ ನಿಲ್ದಾಣ ನಿರ್ಮಿಸುವುದರ ಜತೆಗೆ ಹಳೆಯ ನಿಲ್ದಾಣಗಳನ್ನು ದುರಸ್ತಿ ಮಾಡಬೇಕು’ ಎಂದು ಪಾದನಕಟ್ಟಿ ಗ್ರಾಮದ ಮಹಾಂತೇಶ ಕುರಿ ಆಗ್ರಹಿಸಿದ್ದಾರೆ.
‘ಹುಲ್ಲಿಕೇರಿ ಎಸ್.ಪಿ. ಗ್ರಾಮದ ಬಸ್ ನಿಲ್ದಾಣ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಕೂಡಲೇ ಹೊಸ ಬಸ್ ನಿಲ್ದಾಣ ನಿರ್ಮಿಸಲು ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮದ ಯುವ ಮುಖಂಡ ಶಿವು ಹುಲ್ಲಿಕೇರಿ ಒತ್ತಾಯಿಸಿದ್ದಾರೆ.
‘ಹಲವೆಡೆ ಬಸ್ ನಿಲ್ದಾಣಗಳಿಲ್ಲ. ಹೊಸ ನಿಲ್ದಾಣ ನಿರ್ಮಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ’ ಎಂದು ಗುಳೇದಗುಡ್ಡ ಬಸ್ ಘಟಕದ ವ್ಯವಸ್ಥಾಪಕಿ ಸೈರಾಬಾನು ಅತ್ತಾರ ತಿಳಿಸಿದ್ದಾರೆ.