ಮೈಸೂರು ರಾಜವಂಶಸ್ಥರಿಗೆ ಗೌರವ ಕೊಟ್ಟಿದ್ದೇವೆ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಬೆಳಗಾವಿ: ‘ಮೈಸೂರಿನಲ್ಲಿ ರಾಜವಂಶಸ್ಥರಿಗೆ ಏನು ಗೌರವ ಕೊಡಬೇಕಿತ್ತೋ, ಅದನ್ನು ಸರ್ಕಾರದಿಂದ ಕೊಟ್ಟಿದ್ದೇವೆ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
‘ದಸರಾ ಮಹೋತ್ಸವ ನಡೆಸುವಲ್ಲಿ ಸರ್ಕಾರದ ವಿವಿಧ ಇಲಾಖೆಗಳ ನಡುವೆ ಸಮನ್ವಯ ಕೊರತೆ ಕಂಡುಬಂದಿತು’ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿದ ವಿಚಾರಕ್ಕೆ, ಇಲ್ಲಿ ಮಂಗಳವಾರ ಸುದ್ದಿಗಾರರಿಗೆ ಅವರು ಹೀಗೆ ಪ್ರತಿಕ್ರಿಯಿಸಿದರು.
‘ನಾನು ಪ್ರಮೋದಾದೇವಿ ಅವರ ಹೇಳಿಕೆ ನೋಡಿಲ್ಲ. ಮೊದಲಿನಿಂದಲೂ ಅಲ್ಲಿ ಇರುವ ಪರಂಪರೆಯನ್ನೇ ಮುಂದುವರಿಸಿದ್ದೇವೆ. ಹೊಸ ಆನೆ ‘ಪ್ರಶಾಂತ’ ಮೇಲೆ ಜಂಬೂಸವಾರಿ ನಡೆಸಿದ್ದೇವೆ. ಆದರೂ, ಅವರ ಹೇಳಿಕೆ ಗಮನಿಸಿ ಚರ್ಚಿಸುತ್ತೇವೆ. ಇದು ನನ್ನ ವೈಯಕ್ತಿಕ ವಿಚಾರವಲ್ಲ. ಪ್ರಮೋದಾದೇವಿ ಅವರ ವಿಚಾರವಲ್ಲ. ಇದು ಇಡೀ ರಾಜ್ಯದ ವಿಚಾರ' ಎಂದರು.
‘ಮೈಸೂರು ದಸರಾ ನಾಡಿನ ಹಬ್ಬ. ನಾಡಿನ ದೇವತೆಗೆ ಗೌರವ ಕೊಟ್ಟಿದ್ದೇವೆ. ಕೊಪ್ಪಳದ ಶ್ರೀಗಳು ಉದ್ಘಾಟಿಸಿದ್ದಾರೆ. ಇದು ಸರ್ಕಾರದ ಕಾರ್ಯಕ್ರಮವೇ ಹೊರತು, ಡಿಕೆಶಿ ಕಾರ್ಯಕ್ರಮ ಅಲ್ಲ. ಮೈಸೂರು ದಸರಾದಲ್ಲಿ ಪ್ರತಿ ಸಚಿವರಿಗೆ ಒಂದೊಂದು ಜವಾಬ್ದಾರಿ ವಹಿಸಿದ್ದೆವು. ಎಲ್ಲರೂ ತಮಗೆ ವಹಿಸಿದ ಕೆಲಸ ಮಾಡಿದ್ದಾರೆ. ನಮ್ಮ ಕಡೆಯಿಂದ ತಪ್ಪಾಗಿದ್ದರೆ ತಿದ್ದುಕೊಳ್ಳುತ್ತೇವೆ ಬಿಡಿ. ನನಗೆ ಇತಿಹಾಸ ಗೊತ್ತಿಲ್ಲ. ಹಿಂದಿನ ಪರಂಪರೆಯಂತೆ ಕಾರ್ಯಕ್ರಮ ಮಾಡಿದ್ದೇವೆ’ ಎಂದು ಸಮರ್ಥಿಸಿಕೊಂಡರು.