ಕಲಬುರಗಿ: ತೇವಾಂಶ ಕೊರತೆ, ಚಿಗುರಿನಲ್ಲೇ ಬಾಡುತ್ತಿವೆ ಬೆಳೆ

ಕಲಬುರಗಿ: ತೇವಾಂಶ ಕೊರತೆ, ಚಿಗುರಿನಲ್ಲೇ ಬಾಡುತ್ತಿವೆ ಬೆಳೆ

ಕಲಬುರಗಿ: ತೇವಾಂಶ ಕೊರತೆ, ಚಿಗುರಿನಲ್ಲೇ ಬಾಡುತ್ತಿವೆ ಬೆಳೆ

ಕಲಬುರಗಿ: ಜಿಲ್ಲೆಯಲ್ಲಿ ಬರಗಾಲದಿಂದಾಗಿ ಮುಂಗಾರು ಬೆಳೆಗಳು ಕೈಕೊಟ್ಟಿವೆ. ಇದೀಗ ಹಿಂಗಾರು ಬೆಳೆಗಳೂ ಕೈತಪ್ಪುವ ಸಂಕಟ ಜಿಲ್ಲೆಯ ಅನ್ನದಾತರನ್ನು ಕಾಡುತ್ತಿದೆ.‌

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಹಿಂಗಾರು ಅವಧಿಯಲ್ಲಿ 1,29,979 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈ ಪೈಕಿ 21,015 ಹೆಕ್ಟೇರ್‌ ನೀರಾವರಿ ಕ್ಷೇತ್ರ ಹಾಗೂ ಇನ್ನುಳಿದ 1,08,964 ಹೆಕ್ಟೇರ್‌ ಮಳೆಯಾಶ್ರಿತ ಪ್ರದೇಶವಾಗಿದೆ.

87,525 ಹೆಕ್ಟೇರ್‌ನಲ್ಲಿ ಜೋಳ, ಗೋಧಿ, ಸಜ್ಜೆಯಂಥ ಏಕದಳ ಧಾನ್ಯಗಳು, 28,650 ಹೆಕ್ಟೇರ್‌ ಪ್ರದೇಶದಲ್ಲಿ ಕಡಲೆ, ಹೆಸರಿನಂಥ ದ್ವಿದಳ ಧಾನ್ಯಗಳು ಹಾಗೂ ಶೇಂಗಾ, ಕುಸುಬೆಯಂಥ ಎಣ್ಣೆಕಾಳು ಬೆಳೆಗಳನ್ನು 12,104 ಹೆಕ್ಟೇರ್ ಪ್ರದೇಶ ಹಾಗೂ ಹತ್ತಿ, ಕಬ್ಬು ಸೇರಿದಂತೆ 1,700 ಹೆಕ್ಟೇರ್‌ ಪ್ರದೇಶದಲ್ಲಿ ವಾಣಿಜ್ಯ ಬೆಳೆಗಳ ಬಿತ್ತನೆ ಗುರಿ ಹೊಂದಲಾಗಿದೆ.

ಆದರೆ, ಅಕ್ಟೋಬರ್‌ 25ರವರೆಗೇ ಬರೀ 9,994 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರವೇ ಬಿತ್ತನೆಯಾಗಿದೆ. ಇದು ಒಟ್ಟು ಗುರಿಯ ಶೇ 7.69ರಷ್ಟು ಮಾತ್ರ. ಜಿಲ್ಲೆಯ 11 ತಾಲ್ಲೂಕುಗಳ ಪೈಕಿ ಚಿತ್ತಾಪುರದಲ್ಲಿ 3,835 ಹೆಕ್ಟೇರ್‌, ಕಾಳಗಿಯಲ್ಲಿ 1,628 ಹೆಕ್ಟೇರ್‌, ಅಫಜಲಪುರದಲ್ಲಿ 1,361 ಹೆಕ್ಟೇರ್‌ ಹಾಗೂ ಶಹಾಬಾದ್‌ನಲ್ಲಿ 855 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಇನ್ನುಳಿದ ತಾಲ್ಲೂಕುಗಳಲ್ಲಿ ಬಿತ್ತನೆ ಪ್ರಮಾಣ ಶೇ 9ಕ್ಕಿಂತಲೂ ಕಡಿಮೆ ಇದೆ.

ಒಂದೆಡೆ ಮಳೆ ಕೊರತೆ, ಮತ್ತೊಂದೆಡೆ ಮಣ್ಣಿನಲ್ಲಿರುವ ತೇವಾಂಶ ಕೊರತೆಯಿಂದ ಹಿಂಗಾರು ಬಿತ್ತನೆಗೆ ಹೊಡೆತ ಬಿದ್ದಿದೆ. ಸೆಪ್ಟೆಂಬರ್‌ ಕೊನೆಯ ವಾರದಲ್ಲಿ ಹಸ್ತ–ಚಿತ್ತಾ ಮಳೆ ನೆಚ್ಚಿ ಅನ್ನದಾತರು ಭೂಮಿಗೆ ಬೀಜ ಹಾಕಿದ್ದರು. ಅದೂ ಕೂಡ ಸಂಪೂರ್ಣ ನಾಟಿಲ್ಲ. ನಾಟಿದ್ದ ಬೆಳೆಗಳೂ ಬಾಡುತ್ತಿವೆ.

‘ಹಿಂಗಾರಿನಲ್ಲಿ ಐದು ಎಕರೆಯಲ್ಲಿ ಜೋಳ ಬಿತ್ತಿ‌ದ್ದೆ. ತೇವಾಂಶ ಕೊರತೆಯಿಂದ ಮೊಳಕೆಯೊಡಿದಿದ್ದೇ ಕಡಿಮೆ. ಜೊತೆಗೆ ಮಿಡತೆಗಳ ಕಾಟದಿಂದ ಸಂಪೂರ್ಣ ಜೋಳದ ಬೆಳೆಯೇ ಹಾಳಾಗಿದೆ. ಬೀಜ, ಗೊಬ್ಬರ ಸೇರಿದಂತೆ ಬಿತ್ತನೆಗೆ ₹35 ಸಾವಿರ ವೆಚ್ಚ ಮಾಡಿದ್ದೆ. ಹಾಕಿದ ಬಂಡವಾಳವೂ ಮೈಮೇಲೆ ಬಿದ್ದಿದೆ. ಇನ್ನೂ ಏಳೆಂಟು ದಿನಗಳಲ್ಲಿ ಮಳೆ ಸುರಿದರೆ ಕುಸುಬೆಯನ್ನು ಮರುಬಿತ್ತನೆ ನಡೆಸುವ ಚಿಂತನೆಯಿದೆ’ ಎಂದು ಚಿಂಚೋಳಿಯ ಪ್ರಗತಿಪರ ರೈತ ದಶರಥ ನಾಯನೂರ ಹೇಳುತ್ತಾರೆ.‌

‘ಹಿಂಗಾರು ಬೆಳೆಗಳಾಗಿ ಒಂದು ತಿಂಗಳ ಹಿಂದೆ 20 ಎಕರೆಯಲ್ಲಿ ಕಡಲೆ, 10 ಎಕರೆಯಲ್ಲಿ ಬಿಳಿ ಕುಸುಬೆ ಹಾಗೂ ಐದು ಎಕರೆಯಲ್ಲಿ ಜೋಳ ಬಿತ್ತನೆ ಮಾಡಿರುವೆ. ಕಳೆದ ವರ್ಷ ಜೋಳ ಇಷ್ಟೊತ್ತಿಗೆ ಬೆಳೆಗಳು ಒಂದು ಅಡಿ ಎತ್ತರ ಬೆಳೆದು ನಳನಳಿಸುತ್ತಿದ್ದವು. ಈ ಸಲ ಬರೀ ಜೋಳ ನಾಲ್ಕೈದು ಇಂಚು ಎತ್ತರವಿದೆ. ಅದೂ ಅಲ್ಲಲ್ಲಿ ಬಾಡುತ್ತಿದೆ. ಕಡಲೆ ಕಳೆದ ಸಲ ಪಲ್ಲೆ ಸೋಸುವಷ್ಟು ಎತ್ತರ ಬೆಳೆದಿತ್ತು. ಈ ಸಲ ನೆಲಬಿಟ್ಟು ಎದ್ದಿಲ್ಲ. ಹೆಚ್ಚೆಂದರೆ ಎರಡಿಂಚು ಇರಬಹುದು. ಒಂದಂಚಿನಷ್ಟು ಬೆಳೆದಿರುವ ಕುಸುಬೆ ಈಗಷ್ಟೇ ಎಲೆಗಳನ್ನು ಬಿಡುತ್ತಿದೆ’ ಎಂದು ಚಿತ್ತಾಪುರ ತಾಲ್ಲೂಕಿನ ಹೊಸೂರಿನ ರೈತ ರಾಮಲಿಂಗಪ್ಪ ಬಾನರ ಭೂಮಿಯಲ್ಲಿನ ವಸ್ತುಸ್ಥಿತಿ ಬಿಚ್ಚಿಡುತ್ತಾರೆ.

‘ಹಿಂಗಾರಿನಲ್ಲಿ ಬಿತ್ತನೆ ಮಾಡಿರುವ ಒಟ್ಟು 35 ಎಕರೆ ಪೈಕಿ 11 ಎಕರೆ ಮಾತ್ರವೇ ಸ್ವಂತದ್ದು. ಇನ್ನುಳಿದ 24 ಎಕರೆ ಜಮೀನು ಕಡತಕ್ಕೆ ಹಾಕಿಕೊಂಡಿರುವ ನೆಲೆ. ಈಗಿನ ವಾತಾವರಣ, ಮಳೆಯ ಪ್ರಮಾಣ ನೋಡಿದರೆ ಬೆಳೆಗಳು ಕೈಗೆ ಹತ್ತುವುದು ಕಷ್ಟ. ಬೆಳೆಗಳು ಬೆಳೆದರೂ ಇಳುವರಿ ಸಿಗುವುದು ಕಷ್ಟ. ಒಂದೆಡೆ ದಿನೇದಿನೆ ಬಿಸಿಲು ಹೆಚ್ಚುತ್ತಿರುವುದು ನೋಡಿದರೆ, ಹಿಂಗಾರು ಬೆಳೆಗಳು ಕೈಗೆ ಹತ್ತುವ ವಿಶ್ವಾಸವೇ ಉಳಿಯುತ್ತಿಲ್ಲ. ಮತ್ತೊಂದೆಡೆ ಮಳೆ ಬರಲಿ ಬಿಡಲಿ, ಹೊಲ ಬೆಳೆಯಲಿ ಬಿಡಲಿ, ಕಡತಕ್ಕೆ ಹಾಕಿಕೊಂಡಿರುವ ಹೊಲಗಳ ಮಾಲೀಕರಿಗೆ ಹಣ ಪಾವತಿಸಲೇಬೇಕು. ಅದನ್ನು ಹೊಂದಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ’ ಎಂಬುದು ರಾಮಲಿಂಗಪ್ಪ ಒಡಲಾಳದ ನೋವು ತೋಡಿಕೊಂಡರು.

ಜಿಲ್ಲೆಯಲ್ಲಿ ಮುಂಗಾರು ಅವಧಿಯಲ್ಲಿ ಕಾಡಿದಂತೆಯೇ ಹಿಂಗಾರಿನಲ್ಲೂ ಮಳೆ ಕೊರತೆ ಕಾಡುತ್ತಿದೆ.

ಜೂನ್‌ನಿಂದ ಸೆಪ್ಟೆಂಬರ್‌ ತನಕ ಮುಂಗಾರು ಅವಧಿಯಲ್ಲಿ ಜಿಲ್ಲೆಯಲ್ಲಿ ವಾಡಿಕೆಯಂತೆ 576.1 ಮಿಮಿ ಮಳೆಯಾಗಬೇಕಿತ್ತು. ಆದರೆ, ವಾಸ್ತವವಾಗಿ 284.9 ಮಿಮಿ ಮಳೆ ಮಾತ್ರವೇ ಸುರಿದಿದ್ದು, ಶೇ 51ರಷ್ಟು ಕೊರತೆಯಾಗಿತ್ತು.

ಹಿಂಗಾರು ಅವಧಿಯ ಅಕ್ಟೋಬರ್‌ 25ರ ತನಕ ವಾಡಿಕೆಯಂತೆ ಜಿಲ್ಲೆಯಲ್ಲಿ 90.2 ಮಿಮಿ ಮಳೆ ಸುರಿಯಬೇಕಿತ್ತು. ಆದರೆ, ಬರೀ 3.6 ಮಿಮಿ ಮಳೆಯಾಗಿದ್ದು, ಶೇ 96ರಷ್ಟು ಕೊರತೆಯಾಗಿದೆ. ಇದು ಅನ್ನದಾತರ ಆತಂಕ ಹೆಚ್ಚಿಸಿದೆ.

‘‌ಸಾಮಾನ್ಯವಾಗಿ ವಾರ್ಷಿಕ ಮಳೆ ಪ್ರಮಾಣದಲ್ಲಿ ಶೇ 85ರಷ್ಟು ಮಳೆ ಮುಂಗಾರಿನಲ್ಲೂ, ಶೇ 10ರಷ್ಟು ಮಳೆ ಹಿಂಗಾರಿನಲ್ಲೂ ಹಾಗೂ ಶೇ5ರಷ್ಟು ಮಳೆ ಮುಂಗಾರು ಪೂರ್ವ ಅವಧಿಯಲ್ಲೂ ಸುರಿಯುತ್ತದೆ. ಈ ಸಲ ಬರ ಇರುವುದರಿಂದ ಹಿಂಗಾರಿನಲ್ಲೂ ಮಳೆ ಕೊರತೆಯಾಗಿದೆ. ಅದಾಗ್ಯೂ, ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತಕಂಡಿದ್ದು, ಮುಂದಿನ ಏಳೆಂಟು ದಿನಗಳಲ್ಲಿ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯಾಗಲಿದೆ’ ಎಂಬುದು ಹವಾಮಾನ ಇಲಾಖೆ ಅಧಿಕಾರಿಗಳ ಅಭಿಮತ.

ಮುಗಿಯುತ್ತಿದೆ ಬಿತ್ತನೆ ಅವಧಿ...

‘ಜಿಲ್ಲೆಯಲ್ಲಿ ಹಿಂಗಾರು ಅವಧಿಯಲ್ಲಿ ಸಹಜವಾಗಿ ಜೋಳ, ಕಡಲೆ, ಶೇಂಗಾ ಹಾಗೂ ಕುಸುಬೆ ಬಿತ್ತನೆ ನಡೆಯುತ್ತದೆ. ಜೋಳ, ಶೇಂಗಾ ಬಿತ್ತನೆ ಅವಧಿ ಈಗಾಗಲೇ ಮುಗಿದಿದೆ. ಬಿತ್ತನೆಯ ಹದದಷ್ಟು ಮಣ್ಣಿನಲ್ಲಿ ತೇವಾಂಶವಿದ್ದರೆ, ನವೆಂಬರ್‌ ಮೊದಲ ವಾರದ ತನಕ ಕಡಲೆ, ಕುಸುಬೆ ಬಿತ್ತಬಹುದು. ವಿಳಂಬವಾದಷ್ಟೂ ಬೆಳೆ ಬೆಳವಣಿಗೆ ಕುಂಠಿತವಾಗಿ ಇಳಿವರಿಗೂ ಹೊಡೆತ ಬೀಳುತ್ತದೆ’ ಎನ್ನುತ್ತಾರೆ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್‌.

‘ಕುಸುಬೆ, ಶೇಂಗಾ ಎಣ್ಣೆಕಾಳು ಬೆಳೆಗಳು. ಇವುಗಳಲ್ಲಿ ಎಣ್ಣೆ ಇರುತ್ತದೆ. ತೇವಾಂಶ ಕೊರತೆ ಕಾಡಿದರೆ, ಹುಳುಗಳು ಇಡೀ ಬೀಜವನ್ನೇ ತಿಂದುಹಾಕುತ್ತವೆ. ಶೇಂಗಾ ಬೀಜದ ಸಿಪ್ಪೆ ತೀರಾ ತೆಳು. ನೀರು ಬೀಜದ ತನಕ ತಲುಪದಿದ್ದರೆ ಮೊಳಕೆಗೂ ಮುನ್ನವೇ ಕೊಳೆತು ಹೋಗುತ್ತದೆ. ಇಲ್ಲವೇ ಕೀಟಗಳ ಪಾಲಾಗುತ್ತದೆ. ಕುಸುಬೆ ಬೀಜದ ಸಿಪ್ಪೆ ಗಟ್ಟಿ. ಸಾಕಷ್ಟು ತೇವಾಂಶ ಇಲ್ಲದಿದ್ದರೆ, ಅದು ಕೂಡ ಮೊಳಕೆಯೇ ಬರಲ್ಲ’ ಎನ್ನುತ್ತಾರೆ ಅವರು.

ಹಿಂಗಾರು ಬಿತ್ತನೆ ಕ್ಷೇತ್ರ ಕುಸಿತ

2025ರಲ್ಲಿ ಹಿಂಗಾರು ಬಿತ್ತನೆಗೆ ಜಿಲ್ಲೆಯಲ್ಲಿ 2.38 ಲಕ್ಷ ಹೆಕ್ಟರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. 2023 ಹಾಗೂ 2024ರಲ್ಲಿ ತಲಾ 1.72 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ದೊರೆತಿತ್ತು. ಈ ಸಲ 1.29 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಹಿಂಗಾರು ಬಿತ್ತನೆಗೆ ಗುರಿ ಸಿಕ್ಕಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಕ್ಷೇತ್ರ ಕುಸಿತವಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ