ಸಿದ್ದರಾಮಯ್ಯ ಚಾರಿತ್ರ್ಯವಧೆಗೆ ‘ಸ್ಟಿಂಗ್’: ಕುರುಬ ಸಮುದಾಯದ ಮುಖಂಡರ ಆಕ್ರೋಶ
ಕಲಬುರಗಿ: ‘ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಚಾರಿತ್ರ್ಯವಧೆ ಹಾಗೂ ರಾಜಕೀಯವಾಗಿ ಹಿನ್ನೆಡೆ ಉಂಟು ಮಾಡಲು ಅವರ ವಿರುದ್ಧ ಸ್ಟಿಂಗ್ ಕಾರ್ಯಾಚರಣೆ ನಡೆಸಲಾಗಿದೆ’ ಎಂದು ಕುರುಬ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಸಮಾಜದ ಹಿರಿಯ ಮುಖಂಡ ಬೈಲಪ್ಪ ನೆಲೋಗಿ ಮಾತನಾಡಿ, ‘ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯದಲ್ಲಿರುವ ಸರ್ಕಾರವು ಕೊತ್ವಾಲ ರಾಮಚಂದ್ರನ ಶಿಷ್ಯರ ಕೈಯಲ್ಲಿ ಸಿಕ್ಕಂತಾಗಿದೆ. ಸಿದ್ದರಾಮಯ್ಯ ಅವರನ್ನು ವ್ಯವಸ್ಥಿತವಾಗಿ ಸಂಚು ರೂಪಿಸಿ ಅಧಿಕಾರದಿಂದ ಇಳಿಸಲಾಯಿತು. ಅವರನ್ನು ಕೆಣಕುವುದು ಜೇನುಗೂಡಿಗೆ ಕಲ್ಲು ಹೊಡೆದಂತೆ’ ಎಂದು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.
‘ಕಾಂಗ್ರೆಸ್ ಪಕ್ಷವು ಸಿದ್ದರಾಮಯ್ಯ ಅವರ ಮುಖವನ್ನು ಮುಂದಿಟ್ಟು ಅಧಿಕಾರಕ್ಕೆ ಬಂದಿದೆ. ಇದೀಗ ಅವರನ್ನೇ ಕಡೆಗಣಿಸುತ್ತಿದೆ. ಕಾಂಗ್ರೆಸ್‌ನಲ್ಲಿ ಕುತಂತ್ರಿಗಳೇ ತುಂಬಿದ್ದಾರೆ. ರಾಜ್ಯದಲ್ಲಿ ಶೇ 75ರಷ್ಟು ಹಾಗೂ ಹೈಕಮಾಂಡ್‌ನಲ್ಲಿ ಶೇ 25ರಷ್ಟು ಇಂಥವರಿದ್ದಾರೆ. ಕಾಂಗ್ರೆಸ್ ಪಕ್ಷವು ಕುರುಬ ಸಮುದಾಯವನ್ನು ಕಡೆಗಣಿಸುತ್ತಿದೆ. ಹೀಗಾಗಿ 2028ರಲ್ಲಿ ಯಾವ ಹಾದಿ ತುಳಿಯಬೇಕು ಎಂಬುದನ್ನು ಸಿದ್ದರಾಮಯ್ಯ ಅವರೊಂದಿಗೆ ಶೀಘ್ರವೇ ಚರ್ಚಿಸಿ ನಿರ್ಧರಿಸಲಾಗುವುದು’ ಎನ್ನುವ ಮೂಲಕ ಕಾಂಗ್ರೆಸ್ ಪಕ್ಷ ತೊರೆಯುವ ಸುಳಿವು ನೀಡಿದರು.
ಕೊಮಾಮ ಭೀಮಗೊಂಡ ಕುರುಬ ಸಮಾಜದ ಜಿಲ್ಲಾಧ್ಯಕ್ಷ ಬಸವರಾಜ ಮದ್ರಿಕಿ ಮಾತನಾಡಿ, ‘ಸಿದ್ದರಾಮಯ್ಯ ಅವರು ಮಾಸ್ ಲೀಡರ್. ಅಂಥವರನ್ನು ಸ್ಟಿಂಗ್ ಮೂಲಕ ಹೆದರಿಸುವ ಕೆಲಸ ನಡೆಯುತ್ತಿದೆ. ಸಿದ್ದರಾಮಯ್ಯ ಅವರಿಂದ ಅಧಿಕಾರ ಪಡೆದವರೂ ಇದನ್ನು ಖಂಡಿಸುತ್ತಿಲ್ಲ. ಸ್ಟಿಂಗ್ ಹಿಂದೆ ಕಾಂಗ್ರೆಸ್‌ನ ಮಹಾನಾಯಕರೇ ಇದ್ದಾರೆ. ಸಿದ್ದರಾಮಯ್ಯ ಅವರನ್ನು ಅವಹೇಳನಕರವಾಗಿ ನಡೆಸಿಕೊಳ್ಳುತ್ತಿರುವ ಕಾಂಗ್ರೆಸ್ 2028ರ ಚುನಾವಣೆಯಲ್ಲಿ ಧೂಳೀಪಟವಾಗಲಿದೆ’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಶಿವಾಜಿ ಖಂಡೋಜಿ, ಹುಣಚಾರಾಯ ಪೂಜಾರಿ, ರಾಜಶೇಖರ ಮುಚಖೇಡ, ಮರೆಪ್ಪ ಪೂಜಾರಿ, ಸಿದ್ದಪ್ಪ ಪೂಜಾರಿ, ಶಂಕರಲಿಂಗ ಕರಕ್ಕಳ್ಳಿ ಸೇರಿದಂತೆ ಹಲವರಿದ್ದರು.