
ಎಂಎಸ್‌ಪಿ ಆಧರಿಸಿ ಕಬ್ಬಿಗೆ ದರ ನಿಗದಿಗೆ ಕಾರ್ಖಾನೆಯವರ ತೀರ್ಮಾನ:ಡಿ.ಕೆ.ಶಿವಕುಮಾರ್
ಬೆಳಗಾವಿ: ‘ಕೇಂದ್ರ ಸರ್ಕಾರವು ಸಕ್ಕರೆಯ ಕನಿಷ್ಠ ಮಾರಾಟ ಬೆಲೆ(ಎಂಎಸ್‌ಪಿ) ನಿಗದಿಗೊಳಿಸಲಿದೆ. ಅದನ್ನು ಆಧರಿಸಿ ಕಬ್ಬಿಗೆ ದರ ನಿಗದಿಪಡಿಸಲು ಸಕ್ಕರೆ ಕಾರ್ಖಾನೆಯವರು ತೀರ್ಮಾನಿಸಿದ್ದಾರೆ. ಪ್ರತಿ ಟನ್‌ಗೆ ಎಷ್ಟು ದರ ನೀಡುತ್ತೇವೆ ಎಂದು ಕಾರ್ಖಾನೆಯವರೇ ತಿಳಿಸುತ್ತಾರೆ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಳೆದ 10 ವರ್ಷಗಳಿಂದ ಸಕ್ಕರೆಯ ಎಂಎಸ್‌ಪಿಯನ್ನು ಕೇಂದ್ರ ಹೆಚ್ಚಿಸದ ಕಾರಣ, ಕಬ್ಬು ಬೆಳೆಗಾರರ ಸಮಸ್ಯೆ ಉದ್ಭವವಾಗಿದೆ. ರೈತರ ಸಂಕಷ್ಟ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೂ ಅರ್ಥವಾಗಿದೆ. ಎಂಎಸ್‌ಪಿ ಹೆಚ್ಚಿಸುವುದಾಗಿ ಜೋಶಿ ಆಶ್ವಾಸನೆ ನೀಡಿದ್ದಾರೆ. ಸಮಿತಿಯನ್ನೂ ರಚಿಸಿದ್ದಾರೆ. ರೈತರಿಗೆ ಕೊಟ್ಟ ಮಾತಿನಂತೆ ಬೆಳಗಾವಿಗೆ ಬಂದು ಎರಡು ದಿನ ಸಭೆ ಮಾಡಿದ್ದೇನೆ. ಹೋರಾಟ ಸುಖಾಂತ್ಯ ಹಂತಕ್ಕೆ ಬಂದಿದೆ’ ಎಂದರು.
‘ದರ ನಿಗದಿ ವಿಚಾರವಾಗಿ ರೈತರು ಮತ್ತು ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು ತೀರ್ಮಾನಿಸುತ್ತಾರೆ. ರೈತರು, ಕಾರ್ಖಾನೆಯವರು ಹಾಗೂ ಸರ್ಕಾರದ ಮಧ್ಯೆ ತ್ರಿಪಕ್ಷೀಯ ಒಪ್ಪಂದಕ್ಕೆ ತೀರ್ಮಾನಿಸಲಾಗಿದೆ. ಕರ್ನಾಟಕ ಬಂದ್ ವಾಪಸ್ ಪಡೆದಿದ್ದಕ್ಕೆ ರೈತರಿಗೆ ಧನ್ಯವಾದ ಹೇಳುತ್ತೇನೆ. ಕೇಂದ್ರ ಸಚಿವ ಜೋಶಿ ಅವರು ರಾಜ್ಯದ ರೈತರನ್ನು ಬದುಕಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದು ತಿಳಿಸಿದರು.
‘ರೈತರು ಈ ದೇಶದ ಆಸ್ತಿ. ಅವರನ್ನು ಬದುಕಿಸಬೇಕು. ಅವರಿಗೆ ನ್ಯಾಯ ಒದಗಿಸಬೇಕು ಎಂಬ ಆಶಯದಿಂದ ಎರಡು ದಿನ ಹಗಲು–ರಾತ್ರಿ ಸಭೆ ಮಾಡಿ, ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದೇನೆ. ರೈತರ ಪ್ರತಿನಿಧಿಗಳಾದ ಸಚಿವರು, ಶಾಸಕರು ಅಹವಾಲು ಆಲಿಸಿದ್ದೇನೆ. 80 ಸಕ್ಕರೆ ಕಾರ್ಖಾನೆಗಳ ಮಾಲೀಕರು ತಮ್ಮ ಪರಿಸ್ಥಿತಿ ವಿವರಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ ವಿವಿಧ ವಸ್ತುಗಳ ದರ ಹೆಚ್ಚಿದೆ. ಆದರೆ, ಸಕ್ಕರೆ ಬೆಲೆ ಹೆಚ್ಚಿಲ್ಲ. ಹಾಗಾಗಿ ರೈತರು ಕಬ್ಬಿಗೆ ಹೆಚ್ಚಿನ ದರಕೇಳುವುದರಲ್ಲಿ ತಪ್ಪಿಲ್ಲ’ ಎಂದರು.
‘ಬರ ಪರಿಸ್ಥಿತಿಯಿಂದಾಗಿ ರಾಜ್ಯದಲ್ಲಿ ಈ ವರ್ಷ ಕಬ್ಬಿನ ಉತ್ಪಾದನೆ ಕಡಿಮೆಯಾಗಿದೆ. ಮತ್ತೊಂದೆಡೆ, ಇನ್ನೂ ಕಬ್ಬು ನುರಿಸುವ ಹಂಗಾಮು ಆರಂಭವಾಗಿಲ್ಲ. ಇನ್ನೂ ಕೆಲವು ದಿನಗಳಲ್ಲೇ ಕಬ್ಬು ಅರೆಯುವಿಕೆ ಆರಂಭ ಆಗದಿದ್ದರೆ, ಕಬ್ಬು ಬೆಳೆ ಒಣಗುವ ಆತಂಕವಿದೆ. ಕಾರ್ಖಾನೆಗಳ ಆರಂಭ ತಡವಾದಷ್ಟು ರೈತರು ಬಹಳ ನಷ್ಟ ಅನುಭವಿಸಬೇಕಾಗುತ್ತದೆ’ ಎಂದರು.
‘ಈಗ ಕಾರ್ಖಾನೆ ನಡೆಸುವುದು ಕಷ್ಟವಿದೆ. ನಮಗೆ ರಾಷ್ಟ್ರೀಕೃತ ಬ್ಯಾಂಕ್‌ನವರು ಸಾಲ ನೀಡುವುದಿಲ್ಲ. ಹೆಚ್ಚಿನ ಬಡ್ಡಿಗೆ ಸಹಕಾರ ಕ್ಷೇತ್ರದಲ್ಲಿ ಸಾಲ ಪಡೆಯುತ್ತೇವೆ. ನಮ್ಮ ಬ್ಯಾಂಕ್ ಬ್ಯಾಲೆನ್ಸ್ ಶೀಟ್ ನೋಡಿ ಎಂದು ಕಾರ್ಖಾನೆಗಳ ಮಾಲೀಕರು ಸಮಸ್ಯೆ ಹೇಳಿಕೊಂಡಿದ್ದಾರೆ. ಬೇಕಾದರೆ ನಾವು ಸರ್ಕಾರಕ್ಕೇ ನಾಲ್ಕೈದು ಕಾರ್ಖಾನೆ ಬಿಟ್ಟುಕೊಡುತ್ತೇವೆ. ನೀವೇ ನಡೆಸಿ ನೋಡಿ ಎಂದು ಹೇಳಿದ್ದಾರೆ. ಈ ಹಿಂದೆ ಮಂಡ್ಯದಲ್ಲಿ ರೈತರೇ ಕಾರ್ಖಾನೆ ನಡೆಸಿ ಸಮಸ್ಯೆ ಎದುರಿಸಿದ್ದನ್ನು ನೋಡಿದ್ದೇನೆ. ಕಾರ್ಖಾನೆಗಳಿದ್ದರೆ ರೈತರಿಗೆ ಮತ್ತು ರೈತರಿದ್ದರೆ ಕಾರ್ಖಾನೆಗಳಿಗೆ ಅನುಕೂಲ. ಇಬ್ಬರ ಹಿತ ಕಾಯುತ್ತೇವೆ’ ಎಂದು ತಿಳಿಸಿದರು.
‘ರಾಜ್ಯದ ಕಾರ್ಖಾನೆಗಳಿಗೆ ವಿದ್ಯುತ್ ಸೇರಿ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿದ್ದೇವೆ. ಬೇರೆ ರಾಜ್ಯ ಸರ್ಕಾರಗಳು ಅಲ್ಲಿನ ಕಾರ್ಖಾನೆಗಳಿಗೆ ನಮ್ಮಂತೆ ಸೌಲಭ್ಯ ಕೊಟ್ಟಿಲ್ಲ. ಹಾಗಾಗಿ ಬೇರೆ ರಾಜ್ಯಗಳ ಕಾರ್ಖಾನೆಗಳು ನೀಡುತ್ತಿರುವ ದರವನ್ನು ಇಲ್ಲಿಗೆ ಹೋಲಿಕೆ ಮಾಡಬಾರದು’ ಎಂದರು.
‘ಗೃಹಬಳಕೆ ಮತ್ತು ವಾಣಿಜ್ಯ ಉದ್ದೇಶಕ್ಕಾಗಿ ಬಳಸುವ ಸಕ್ಕರೆ ದರದ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಬೇಕು’ ಎಂದ ಅವರು, ‘ಕಬ್ಬು ಬೆಳೆಗಾರರಿಗೆ ರಾಜ್ಯ ಸರ್ಕಾರದಿಂದ ಸಹಾಯ ಮಾಡುವುದು ಕಷ್ಟ’ ಎಂದೂ ಅಸಹಾಯಕತೆ ವ್ಯಕ್ತಪಡಿಸಿದರು.
‘ರೈತರಿಗಾಗಿ ಕೇಂದ್ರ ಸರ್ಕಾರ ಭೇಟಿಯಾಗುತ್ತೇನೆ’ ಎಂದೂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.