ಕೋಲಾರ: ಹಳೆ ಬಸ್ ನಿಲ್ದಾಣಕ್ಕೆ ಸಿಗುವುದೇ ಹೊಸ ಸ್ಪರ್ಶ?
ಕೋಲಾರ: ನಗರದ ಹೃದಯ ಭಾಗದಲ್ಲಿರುವ ಹಳೆ ಬಸ್ ನಿಲ್ದಾಣಕ್ಕೆ ಹೊಸ ಸ್ಪರ್ಶ ನೀಡಲು ಜಿಲ್ಲಾಡಳಿತ ಹಾಗೂ ಕೋಲಾರ ನಗರಸಭೆ ಯೋಜನೆ ರೂಪಿಸುತ್ತಲೇ ಇವೆ. ಆದರೆ ಅದಕ್ಕಿನ್ನೂ ಕಾಲ ಕೂಡಿಬಂದಿಲ್ಲ.
ಹೈಟೆಕ್ ವಾಣಿಜ್ಯ ಮಳಿಗೆ ನಿರ್ಮಾಣ, ಹೈಟೆಕ್ ಬಸ್ ನಿಲ್ದಾಣ ನಿರ್ಮಾಣದ ಯೋಜನೆ ಇವೆ. ಡೆಲ್ಟ್ ಯೋಜನೆಯಡಿ ಕಾಂಪ್ಲೆಕ್ಸ್ ನಿರ್ಮಿಸಲು ನಗರಸಭೆ ಚಿಂತಿಸುತ್ತಿದೆ. ಈ ನಿಟ್ಟಿನಲ್ಲಿ ಶೀಘ್ರವೇ ನಿರ್ಧಾರ ಹೊರಬೀಳುವ ನಿರೀಕ್ಷೆ ಇದೆ. ಹಳೆ ಬಸ್ ನಿಲ್ದಾಣ ನವೀಕರಣ ಮಾಡುವುದಾಗಿ ಶಾಸಕ ಕೊತ್ತೂರು ಮಂಜುನಾಥ್ ಕೂಡ ಭರವಸೆ ನೀಡಿದ್ದಾರೆ.
ಹಳೆ ಬಸ್ ನಿಲ್ದಾಣ ದಶಕಗಳಿಂದ ಹೂವಿನ ಮಾರುಕಟ್ಟೆಯಾಗಿ ಪರಿವರ್ತಿತವಾಗಿದೆ. ಸುಮಾರು 100 ಹೂವಿನ ಮಳಿಗೆಗಳು ಇಲ್ಲಿವೆ. ಕೆಲವರು ಜೋಪಡಿ ರೀತಿ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಂಡು ದಶಕಗಳಿಂದ ವ್ಯಾಪಾರ ನಡೆಸುತ್ತಿದ್ದಾರೆ. ಇನ್ನು ಕೆಲವರು ನೇತಾಜಿ ವಾಣಿಜ್ಯ ಸಂಕೀರ್ಣದಲ್ಲಿ ನಗರಸಭೆಯಿಂದ ಹರಾಜಿನಲ್ಲಿ ಮಳಿಗೆ ಪಡೆದು ಹೂವು, ಹಣ್ಣಿನ ವಹಿವಾಟು ನಡೆಸುತ್ತಿದ್ದಾರೆ.
ಇದೇ ಪ್ರದೇಶವನ್ನು ಖಾಸಗಿ ಬಸ್ ನಿಲ್ದಾಣವನ್ನಾಗಿಯೂ ಮಾಡಿಕೊಳ್ಳಲಾಗಿದೆ. ಪಕ್ಕದಲ್ಲೇ ಪಕ್ಕದಲ್ಲಿ ಇಂದಿರಾ ಕ್ಯಾಂಟೀನ್, ಬೃಹತ್ ಓವರ್ ಹೆಡ್ ನೀರಿನ ಟ್ಯಾಂಕ್ ಕೂಡ ಇದೆ.
ಪ್ರಮುಖವಾಗಿ ಇಲ್ಲಿರುವ ಗಡಿಯಾರ ಗೋಪುರ ಗಮನ ಸೆಳೆಯುತ್ತಿದೆ. ಆದರೆ, ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ. ಗೋಪುರದ ಕೆಳಗೆ ತಂಗುದಾಣವೂ ಇದೆ. ಗಡಿಯಾರ ಗೋಪುರವೆಂದು ಹೆಸರಿದ್ದರೂ ಗಡಿಯಾರವೇ ಇಲ್ಲ! ನವೀಕರಣಕ್ಕೆ ನಾಗರಿಕರಿಂದಲೂ ಒತ್ತಾಯ ವ್ಯಕ್ತವಾಗುತ್ತಿದ್ದು, ಕನ್ನಡ ಧ್ವಜದ ಬಣ್ಣ ಬಳಿಯುವಂತೆ ಸಲಹೆಗಳು ಬರುತ್ತಿವೆ. ಈ ಸಂಬಂಧ ನಗರಸಭೆಯ ಈಗಿನ ಆಯುಕ್ತ ವೆಂಕಟೇಶ್ ನಾಗನೂರು ಆಸಕ್ತಿ ವಹಿಸಿದ್ದು, ಗಡಿಯಾರ ಅಳವಡಿಸಿ ನವೀಕರಣ ಮಾಡಲು ಮುಂದಾಗಿದ್ದಾರೆ.
ಸೌಂದರ್ಯೀಕರಣ ನಿಟ್ಟಿನಲ್ಲಿ ಅವರು ಈ ಗೋಪುರದ ಅಡಿಯಲ್ಲಿರುವ ಹೂವಿನ ಮಳಿಗೆಗಳನ್ನು ತೆರವು ಮಾಡಲು ಮುಂದಾಗಿದ್ದಾರೆ. ತೆರವು ಮಾಡಲು ವ್ಯಾಪಾರಿಗಳಿಗೆ ಸೂಚನೆ ಕೂಡ ನೀಡಿದ್ದಾರೆ. ಇದಕ್ಕೆ ವ್ಯಾಪಾರಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. 50 ವರ್ಷಗಳಿಂದ ಇಲ್ಲಿ ರೈತರು ತರುವ ಹೂವು ಹರಾಜು ಹಾಕಿ ವಹಿವಾಟು ನಡೆಸುತ್ತಿದ್ದಾರೆ.
ಕೆಲ ತಿಂಗಳ ಹಿಂದೆ ಸಂಸದ ಎಂ.ಮಲ್ಲೇಶ್ ಬಾಬು ಭೇಟಿ ನೀಡಿ ಹೂವು ವ್ಯಾಪಾರಿಗಳ ಪರವಾಗಿ ನಿಂತಿದ್ದರು. ಹೂ ಮಾರಾಟಗಾರರಿಗೆ ಯಾವುದೇ ರೀತಿ ತೊಂದರೆ ನೀಡದಂತೆ ಹಾಗೂ ಮಾರುಕಟ್ಟೆಗೆ ಮೂಲ ಸೌರ್ಕಯ ಒದಗಿಸುವಂತೆ ನಗರಸಭೆ ಅಧಿಕಾರಿಗಳ ಜೊತೆ ಚರ್ಚಿಸಿದ್ದರು.
ಹಿಂದೆಯೂ ಇದ್ದ ಆಯುಕ್ತರು ಮಳಿಗೆಗಳನ್ನು ಸ್ಥಳಾಂತರ ಮಾಡಲು ಪ್ರಯತ್ನಿಸಿದ್ದರು. ಆದರೆ, ಸ್ಥಳಾಂತರ ಕಾರ್ಯಾಚರಣೆ ಬರೀ ಮಾತಿಗೆ ಸೀಮಿತವಾಗಿತ್ತು.
ಗಬ್ಬುನಾರುತ್ತಿರುವ ಪ್ರದೇಶ: ಹೂವಿನ ಮಾರಾಟಗಾರರು ಅಲ್ಲಲೇ ಹೂವು ಹಾಗೂ ಇತರ ವಸ್ತುಗಳನ್ನು ಸುರಿದಿದ್ದು, ತ್ಯಾಜ್ಯ ರಾಶಿಯೇ ನಿರ್ಮಾಣವಾಗಿದೆ. ಇದರಿಂದ ಈ ಪ್ರದೇಶ ದುರ್ವಾಸನೆ ಹೊಡೆಯುತ್ತಿದೆ. ಹಳೆ ಬಸ್ ನಿಲ್ದಾಣದಿಂದ ಎಂ.ಬಿ.ರಸ್ತೆಗೆ ಸಂಪರ್ಕ ಕಲ್ಪಿಸುವ ಸಣ್ಣ ರಸ್ತೆಯೂ ಕೆಸರು ಗದ್ದೆಯಂತಾಗಿದೆ. ಎಲ್ಲಿ ಬೇಕೆಂದರಲ್ಲಿ ಮಲ ಮೂತ್ರ ವಿಸರ್ಜನೆ
ಬಸ್ ನಿಲ್ದಾಣದ ಸೌಂದರ್ಯೀಕರಣ
ಕೋಲಾರ ನಗರದ ಹಳೆ ಬಸ್ ನಿಲ್ದಾಣವನ್ನು ಡೆಲ್ಟ್ ಯೋಜನೆಯಡಿ ಸೌಂದರ್ಯೀಕರಣಗೊಳಿಸಲಾಗುತ್ತದೆ. ಈ ಪ್ರದೇಶದಲ್ಲಿ ಮಾರುಕಟ್ಟೆ ಹಾಗೂ ಕಾಂಪ್ಲೆಕ್ಸ್ ತಲೆ ಎತ್ತಲಿವೆ. 'ಎಲ್' ಸ್ವರೂಪದಲ್ಲಿ ನಿರ್ಮಾಣವಾಗಲಿದೆ. ಉದ್ಯಾನ ಹಾಗೂ ಮಳಿಗೆಗಳು ಇರಲಿವೆ. ಸದ್ಯಕ್ಕೆ ಗಡಿಯಾರ ಗೋಪುರಕ್ಕೆ ಹೊಸ ಸ್ಪರ್ಶ ನೀಡಲಾಗುವುದು. ಗಡಿಯಾರ ಅಳವಡಿಸಿ, ಪೇಂಟಿಂಗ್ ಮಾಡಲಾಗುವುದು.
_ವೆಂಕಟೇಶ್ ನಾಗನೂರ, ನಗರಸಭೆ ಆಯುಕ್ತ, ಕೋಲಾರ
ಮಳಿಗೆ ಸ್ಥಳಾಂತರಕ್ಕೆ ಸೂಚನೆ
ಹಳೆ ಬಸ್ ನಿಲ್ದಾಣದ ಗಡಿಯಾರ ಗೋಪುರ ನವೀಕರಣ ಮಾಡಲು ಗೋಪುರದ ಕೆಳ ಭಾಗದಲ್ಲಿರುವ ಹೂವು, ಹಣ್ಣಿನ ಮಳಿಗೆಗಳನ್ನು ತೆರವುಗೊಳಿಸಲು ನಗರಸಭೆ ಮುಂದಾಗಿದೆ. ಈ ಸಂಬಂಧ ವ್ಯಾಪಾರಿಗಳಿಗೆ ಸೂಚನೆ ನೀಡಲಾಗಿದೆ. ಇದಕ್ಕೆ ವ್ಯಾಪಾರಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
'ಗಡಿಯಾರ ಗೋಪುರದ ಕೆಳಗೆ ಇರುವ ಹೂವು, ಹಣ್ಣಿನ ಅಂಗಡಿಗಳನ್ನು ತಾತ್ಕಾಲಿಕವಾಗಿ ಇಂದಿರಾ ಕ್ಯಾಂಟೀನ್ ಮುಂಭಾಗದ ಜಾಗಕ್ಕೆ ಸ್ಥಳಾಂತರಿಸಲಾಗುವುದು. ಈ ಸಂಬಂಧ ಸೂಚನೆ ನೀಡಲಾಗಿದೆ' ಎಂದು ನಗರಸಭೆ ಆಯುಕ್ತ ವೆಂಕಟೇಶ್ ನಾಗನೂರ 'ಪ್ರಜಾವಾಣಿ'ಗೆ ತಿಳಿಸಿದರು.
ಖಾಸಗಿ ಬಸ್ ನಿಲ್ದಾಣ ಮೇಲ್ದರ್ಜೆಗೆ?
ಹಳೆ ಬಸ್ ನಿಲ್ದಾಣವು ಹಲವಾರು ವರ್ಷಗಳಿಂದ ಖಾಸಗಿ ಬಸ್ ನಿಲ್ದಾಣವಾಗಿದೆ. ವಿವಿಧ ತಾಲ್ಲೂಕುಗಳ ಕಡೆಗೆ ಹೋಗುವ ಖಾಸಗಿ ಬಸ್ಗಳ ಪಯಣ ಇಲ್ಲಿಂದಲೇ ಶುರುವಾಗುತ್ತದೆ.
ಖಾಸಗಿ ಬಸ್ಗಳಿಗೆ ಈಗಿರುವ ಪ್ರದೇಶದಲ್ಲಿಯೇ ಸುಸಜ್ಜಿತ ನಿಲ್ದಾಣ ನಿರ್ಮಿಸುವ ಬಗ್ಗೆ ಹಲವಾರು ಬಾರಿ ಚರ್ಚೆ ನಡೆದಿದೆ. ಆದರೆ, ಸದ್ಯ ಈ ಭಾಗದಲ್ಲಿ ಹೂವು, ಹಣ್ಣಿನ ಮಾರುಕಟ್ಟೆ ಇರುವ ಕಾರಣ ವಿಪರೀತ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಅದರಲ್ಲೂ ಹಬ್ಬಗಳ ಅವಧಿಯಲ್ಲಿ ಹೇಳತೀರದು. ಇದು ಜಿಲ್ಲಾಡಳಿತ ಹಾಗೂ ನಗರಸಭೆಗೆ ತಲೆನೋವಾಗಿ ಪರಿಣಮಿಸಿದೆ.