
ಕುಷ್ಟಗಿಯ ಜನಪದ ಕಲಾವಿದ ದಾವಲಸಾಬ್ ಅತ್ತಾರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ
ಕುಷ್ಟಗಿ: ತಾಲ್ಲೂಕಿನ ಹಾಬಲಕಟ್ಟಿ ಗ್ರಾಮದ ಜನಪದ ಕಲಾವಿದ ದಾವಲಸಾಬ್ ಅತ್ತಾರ ಅವರನ್ನು ಈ ಬಾರಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಅರಸಿ ಬಂದಿದೆ.
ಪ್ರಶಸ್ತಿ, ಸಂಭಾವನೆ, ಮಾನ-ಸನ್ಮಾನಗಳ ನಿರೀಕ್ಷೆಯಿಲ್ಲದೆ ನಾಲ್ಕು ದಶಕಗಳಿಂದಲೂ ಹೃದಯಾಂತರಾಳದಲ್ಲಿ ಹುದುಗಿದ್ದ ಕಲೆಯನ್ನೇ ಆರಾಧಿಸುತ್ತ, ಸಮಾಜಕ್ಕೂ ಉಣಬಡಿಸುತ್ತ ಬಂದಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ದಾವಲಸಾಬ್ ತಮ್ಮ ಅನುಭವದ ಬುತ್ತಿಯನ್ನು ‘ಪ್ರಜಾವಾಣಿ’ ಬಳಿ ಬಿಚ್ಚಿಟ್ಟಿದ್ದು ಹೀಗೆ.
‘ಹಿಂದಿನ ಕಾಲ್ದಾಗ ಕಲಾವಿದರಿಗೆ ಯಾವ ರೊಕ್ಕಪಕ್ಕಾ ಇದ್ದಿಲ್ರಿ, ಮೃತಪಟ್ಟವರ ಮನೆ ಮುಂದೆ, ಜಾತ್ರಿ ಇತರೆ ಕಾರ್ಯಕ್ರಮ ಇದ್ದಾಗ ರಾತ್ರಿಯಿಂದ ಬೆಳತನಕ ಗೀಗಿಪದ ಹಾಡಿ ಮನೆಗೆ ಬರುತ್ತಿದ್ದೆ. ಚುಟ್ಟ ಮತ್ತ ಚಹದ ಜೋಡಿ ಒಂದಷ್ಟು ಚೂಡಾ ಇದು.... ನಮ್ಮ ಸಂಭಾವನೆ ನೋಡ್ರಿ. ಸರ್ಕಾರಿ ಕಾರ್ಯಕ್ರಮಕ್ಕ ಹೋದ್ರ ಐದು ನೂರು ಕೊಡ್ತಿದ್ರು. ನಮ್ಗ ಎಮ್ಮೆಲ್ಲೆ, ಎಂಪಿ ಯಾರೂ ಗೊತ್ತಿಲ್ರಿ, ಆದ್ರೂ ಹಳ್ಳಿ ಮೂಲ್ಯಾಗಿದ್ದ ನನ್ನಂಥವ್ರನ್ನ ಸರ್ಕಾರ ಗುರ್ತಿಸೈತೆಲ್ರಿ ಅದ ನನ್ಗ ಭಾಳಾ ಖುಷಿ ತಂದೈತ್ನೋಡ್ರಿ’.
ಹೌದು, ದಾವಲಸಾಬ್ ಹದಿಹರೆಯದಿಂದಲೇ ಜನಪದ ಕಲೆಯೊಂದಿಗೆ ಬೆಳೆದಿದ್ದಾರೆ. ತಾತ, ತಂದೆ ರಿವಾಯತ್ ಪದ, ಜನಪದ ಹಾಡು, ಭಜನೆಯಲ್ಲಿ ತೊಡಗಿದ್ದರೆ ದಾವಲಸಾಬ್ಗೆ ಅದರ ಬಳುವಳಿಯಾಗಿದೆ. ಅಷ್ಟೇ ಅಲ್ಲ ಗೀಗೀ ಪದದಲ್ಲಿ ಅವರ ಸಾಧನೆ ಅನನ್ಯವಾದುದು. ಇಡಿ ರಾತ್ರಿ ಹಾಡಿದರೂ ಅವರ ಜನಪದ ಕಲೆಯ ಬುತ್ತಿ ಖಾಲಿಯಾಗುವುದಿಲ್ಲ. ಮೂಲ ಜನಪದ ಕಲಾ ಪರಂಪರೆಯನ್ನುಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅವಿರತ ಸೇವೆ ಸಲ್ಲಿಸುತ್ತಿರುವ ದಾವಲಸಾಬ್ ಅವರದು 70ರ ಹರೆಯದಲ್ಲೂ ಬತ್ತದ ಉತ್ಸಾಹ. ಜೊತೆಗೆ ಮನೆಯವರ ಸಹಕಾರ ಇಲ್ಲದಿದ್ದರೆ ತಾವು ಈ ಮಟ್ಟಕ್ಕೆ ಗುರುತಿಸಿಕೊಳ್ಳಲು ಹೇಗೆ ಸಾಧ್ಯವಾಗುತ್ತಿತ್ತು? ಎನ್ನುವ ಕೃತಜ್ಞತಾ ಭಾವ ದಾವಲಸಾಬ್ ಅವರಲ್ಲಿದೆ.
ಕುಟುಂಬಕ್ಕೆ ಕೃಷಿ ಭೂಮಿ ಇಲ್ಲ, ತಂದೆ ಊದು ಬತ್ತಿ ಮಾರಿ ಹೊಟ್ಟೆ ಹೊರೆಯುತ್ತಿದ್ದರು. ಈಗ ದಾವಲಸಾಬ್ ಕುಟುಂಬ ಊದುಬತ್ತಿ ಮತ್ತು ಬಳೆ ವ್ಯಾಪಾರದಲ್ಲಿ ಬದುಕು ಕಟ್ಟಿಕೊಂಡಿದೆ. ನಾಲ್ಕನೆ ತಲೆಮಾರಿನಲ್ಲಿ ಅಂದರೆ ಇವರ ಪುತ್ರ ಖಾಜಾಹುಸೇನ್ ಸಹ ಜನಪದ ಕಲೆಯನ್ನು ಪ್ರವೃತ್ತಿಯಾಗಿಸಿಕೊಂಡಿದ್ದಾರೆ. ಗೀಗೀ ಪದ ಕಲೆಯ ಮೂಲಕ ದಾವಲಸಾಬ್ ಅವರು ಸಾಮಾಜಿಕ, ಐತಿಹಾಸಿಕ ಹಾಡುಗಳ ಜೊತೆಗೆ ದೇಶದ ಸ್ವಾತಂತ್ರ್ಯ ಚಳವಳಿಯನ್ನು ಕುರಿತು ಗಾಂಧೀಜಿ ಸೇರಿ ಇತರೆ ದೇಶದ ನಾಯಕರ, ಹೋರಾಟಗಾರರ ಯಶೋಗಾಥೆಯನ್ನು ಬಿಂಬಿಸುತ್ತ ಬಂದಿದ್ದಾರೆ.
ಫಲಾಪೇಕ್ಷೆ ಇಲ್ಲದೆ ಜನಪದ ಕಲೆಯನ್ನು ಉಳಿಸಿ ಬೆಳೆಸುತ್ತ ಬಂದಿರುವ ದಾವಲಸಾಬ್ ಎಂದರೆ ಹಾಬಲಕಟ್ಟಿ ಗ್ರಾಮಸ್ಥರಿಗೆ ಅಭಿಮಾನದ ಸಂಗತಿ. ತಮ್ಮ ಬಗ್ಗೆ ತಂದೆಗೆ ಎಲ್ಲಿಲ್ಲದ ಪ್ರೀತಿ ಇತ್ತಂತೆ. 'ಈ ಪ್ರಶಸ್ತಿ ಬಂದಾಗ ನಮ್ಮ ಅಪ್ಪ ಇರಬೇಕಿತ್ರಿ' ಎನ್ನುವಾಗ ದಾವಲಸಾಬ್ ಅತ್ತಾರ ಅವರಲ್ಲಿ ವಿಷಾದ ಭಾವ ಆವರಿಸಿತ್ತು.