ಶ್ರವಣಬೆಳಗೊಳ: ಬನ್ನಿ ಪತ್ರೆ, ಅಕ್ಷತೆ ವಿತರಿಸಿದ ಚಾರುಕೀರ್ತಿಶ್ರೀ

ಶ್ರವಣಬೆಳಗೊಳ: ಬನ್ನಿ ಪತ್ರೆ, ಅಕ್ಷತೆ ವಿತರಿಸಿದ ಚಾರುಕೀರ್ತಿಶ್ರೀ

ಶ್ರವಣಬೆಳಗೊಳ: ಬನ್ನಿ ಪತ್ರೆ, ಅಕ್ಷತೆ ವಿತರಿಸಿದ ಚಾರುಕೀರ್ತಿಶ್ರೀ

ಶ್ರವಣಬೆಳಗೊಳ: ವಿಜಯದಶಮಿ ಅಂಗವಾಗಿ ಕ್ಷೇತ್ರದ ಚಾವುಂಡರಾಯ ಉದ್ಯಾನದಲ್ಲಿ ಬುಧವಾರ ಬನ್ನಿಮರಕ್ಕೆ ಪೂಜೆ ಸಲ್ಲಿಸುವ ಸಕಲ ಧಾರ್ಮಿಕ ವಿಧಿ ವಿಧಾನಗಳು ಕ್ಷೇತ್ರದ ಪೀಠಾಧಿಪತಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ನೆರವೇರಿತು.

ಜೈನಮಠದ ಮುಂಭಾಗದಲ್ಲಿ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿದ್ದ ಸರ್ವಾಹ್ಣ ಯಕ್ಷ ಕ್ಷೇತ್ರದ ಅಧಿದೇವತೆ ಕೂಷ್ಮಾಂಡಿನಿ ದೇವಿಗೆ ಪೂಜೆ ಸಲ್ಲಿಸಿದ ನಂತರ ಶ್ರೀಗಳು ಮೇನೆಯಲ್ಲಿ ಆಸೀನರಾಗಿ, ವಿಜಯದಶಮಿಯ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಮೆರವಣಿಗೆಯ ಮುಂಭಾಗದಲ್ಲಿ ತೀರ್ಥಂಕರರ ಲಾಂಛನ, ಆಯುಧಗಳು, ಧರ್ಮಧ್ವಜ, ಮಂಗಲ ವಾಧ್ಯ ಕಾಳಲಾದೇವಿ ಕನ್ಯಾಶ್ರಮದ ಮತ್ತು ಗೊಮ್ಮಟೇಶ್ವರ ವಿದ್ಯಾಪೀಠದ ವಿದ್ಯಾರ್ಥಿಗಳು ಹಾಗೂ ಭಕ್ತರು ಸಾಗಿದರು. ಬನ್ನಿ ಮರದ ಮುಂಭಾಗದಲ್ಲಿ ಶಾಂತಿ ಕಲಶ ಪ್ರತಿಷ್ಠಾಪಿಸಿ ಅಷ್ಟವಿಧಾರ್ಚನೆಯನ್ನು ನೆರವೇರಿಸಲಾಯಿತು. ಚಾರುಕೀರ್ತಿ ಶ್ರೀಗಳು ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು. ಶಾಂತಿಧಾರದೊಂದಿಗೆ ಮಂಗಳಾರತಿ ಮಾಡಲಾಯಿತು.

ಈಡುಗಾಯಿ ಹಾಕಿದ ನಂತರ ಬನ್ನಿ ಮರದಿಂದ ಬನ್ನಿಯನ್ನು ಕತ್ತರಿಸಲಾಯಿತು. ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಜನರಿಗೆ ಶ್ರೀಗಳು ಬನ್ನಿ, ಶ್ರೀಫಲ, ಅಕ್ಷತೆ ನೀಡಿ ಆಶೀರ್ವದಿಸಿದರು. ಮೆರವಣಿಗೆಯು ಮೈಸೂರು ರಸ್ತೆ, ವಿಂಧಯಗಿರಿ ಚಂದ್ರಗಿರಿ ರಸ್ತೆ, ಕಲ್ಯಾಣಿ ರಸ್ತೆ, ಮಠದ ರಸ್ತೆಯಲ್ಲಿ ಸಾಗಿದಾಗ ಬನ್ನಿ ಅಕ್ಷತೆಯನ್ನು ಶ್ರೀಗಳು ಭಕ್ತರಿಗೆ ವಿತರಿಸಿದರು.

ಪೂಜೆಯ ನೇತೃತ್ವವನ್ನು ನಂದಕುಮಾರ್‌ ಶಾಸ್ತ್ರಿ, ಜಿನೇಶ್‌ ಕುಮಾರ್‌, ಜೀವೇಂದ್ರಕುಮಾರ್‌ ಶಾಸ್ತ್ರಿ, ಮತ್ತು ತಂಡದವರು ವಹಿಸಿದ್ದರು.

ಗ್ರಾ.ಪಂ.ಸದಸ್ಯ ಎಸ್.ಬಿ.ಯಶಸ್‌, ಕಾರ್ಯದರ್ಶಿ ಎಸ್.ಪಿ.ಮಹೇಶ್‌, ಬಬನ್‌ ಪಿ.ಡಿ, ಎಚ್.ಪಿ.ಅಶೋಕ್‌ ಕುಮಾರ್‌, ಸದಸ್ಯರಾದ ಭರತೇಶ್‌, ಶ್ರೇಯಸ್‌, ಹೇಮಂತ್‌, ಮಹೀಲಾ ಸಮಾಜದ ಪದಾಧಿಕಾರಿಗಳು ಭಾಗವಹಿಸಿದ್ದರು.

ಕುಂದೂರು ಮಠದಲ್ಲಿ ಶಮಿಪೂಜೆ

ಚನ್ನರಾಯಪಟ್ಟಣ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ದಂಡಿಗನಹಳ್ಳಿ ಹೋಬಳಿ ಶ್ರೀಕ್ಷೇತ್ರ ಕುಂದೂರು ಆದಿಚುಂಚನಗಿರಿ ಮಠದಲ್ಲಿ ಕ್ಷೇತ್ರದ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಬುಧವಾರ ಶಮಿ ಪೂಜೆ ನೆರವೇರಿಸಿದರು.

ಕ್ಷೇತ್ರದ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಿಂದ ಅಧಿದೇವತೆಗಳಾದ ರಂಗನಾಥಸ್ವಾಮಿ, ಆದಿಶಕ್ತಿ ಮೆಳೆಯಮ್ಮ ದೇವಿಯನ್ನು ಅಲಂಕೃತ ವಾಹನದಲ್ಲಿ ನಾದಸ್ವರದೊಂದಿಗೆ ಮೆರವಣಿಗೆ ಮೂಲಕ ಸುಬ್ರಹ್ಮಣ್ಯೇಶ್ವರಸ್ವಾಮಿ ದೇಗುಲದ ಮುಂಭಾಗ ಹಾಕಿದ್ದ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು.

ಕ್ಷೇತ್ರಕ್ಕೆ ಆಗಮಿಸಿದ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಚಂಡೆವಾದ್ಯ, ಮಂಗಳವಾದ್ಯದೊಂದಿಗೆ ಬರಮಾಡಿಕೊಳ್ಳಲಾಯಿತು. ಮಠದ ಈಶಾನ್ಯ ದಿಕ್ಕಿನಲ್ಲಿರುವ ಸುಬ್ರಹ್ಮಣ್ಯೇಶ್ವರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಶಮಿವೃಕ್ಷದವರೆಗೆ ಮೆರವಣಿಗೆಯಲ್ಲಿ ಸ್ವಾಮೀಜಿ ಅವರನ್ನು ಕರೆತರಲಾಯಿತು. ಮಠದ ಸಂಪ್ರದಾಯದಂತೆ ನಿರ್ಮಲಾನಂದನಾಥ ಸ್ವಾಮೀಜಿ ಆಭರಣ ಧರಿಸಿ ಮಂಗಳವಾದ್ಯದೊಂದಿಗೆ ಮೆರವಣಿಗೆಯಲ್ಲಿ ಸಾಗಿದರು. ಇವರೊಂದಿಗೆ ಹಾಸನ ಆದಿಚುಂಚನಗಿರಿ ಶಾಖಾಮಠಾಧೀಶ ಶಂಭುನಾಥಸ್ವಾಮಿ ಮತ್ತು ವಿವಿಧ ಶಾಖಾ ಮಠಾಧೀಶರಾದ ಚೈತನ್ಯನಾಥ ಸ್ವಾಮೀಜಿ, ಮನಸ್ವಿನಾಥ ಸ್ವಾಮೀಜಿ, ಸೋಮೇಶ್ವರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಬನ್ನಿ ಮಂಟಪದಲ್ಲಿದ್ದ ಸುಬ್ರಹ್ಮಣ್ಯೇಶ್ವರಸ್ವಾಮಿ ಮತ್ತು ರಂಗನಾಥಸ್ವಾಮಿಗೆ ಪೂಜೆ ಸಲ್ಲಿಸಿದ ಬಳಿಕ ಸ್ವಾಮೀಜಿ, ಬನ್ನಿ ಮರದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ನಂತರ ಬನ್ನಿ ಕಡಿದರು. ಭಕ್ತರು ಬನ್ನಿ ಸ್ವೀಕರಿಸಿ ಮರಕ್ಕೆ ಪ್ರದಕ್ಷಿಣೆ ಹಾಕಿದರು. ಸುತ್ತಲಿನ ಗ್ರಾಮಗಳ ಭಕ್ತಾಧಿಗಳು ಮತ್ತು ಜಿಲ್ಲೆಯ ಆದಿಚುಂಚನಗಿರಿ, ಬಿಜಿಎಸ್ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ನಾಡಿನ ಶ್ರೇಷ್ಠ ಆಚರಣೆಗಳಲ್ಲಿ ನವರಾತ್ರಿ ಹಬ್ಬ ಪ್ರಮುಖವಾದುದು. ನಮ್ಮ ಬದುಕಿನಲ್ಲಿ ಶ್ರೇಷ್ಠತೆ ಮತ್ತು ಶಕ್ತಿಬರಬೇಕಾದರೆ 9 ದಿನ ವ್ರತ ಅನುಷ್ಠಾನಗೊಳಿಸಿದರೆ ಅಂತಿಮ ದಿನ ನಮಗೆ ಯಶಸ್ಸು ಸಿಗುತ್ತದೆ. ದೇವಿಯನ್ನು ಆರಾಧಿಸುವ ಮೂಲಕ ನಮ್ಮ ಮನಸಿನ ಕ್ಲೇಶ, ದ್ವೇಷ, ದೋಷ ಹೋಗಲಾಡಿಸಿದರೆ ಹತ್ತನೆ ದಿನ ಯಶಸ್ಸು ಕಟ್ಟಿಟ್ಟ ಬುತ್ತಿ. ಆಧ್ಯಾತ್ಮಿಕ ತಾಪ, ಆದಿಭೌತಿಕ ಮತ್ತು ಆದಿದೈವಿಕ ತಾಪವನ್ನು ದೂರ ಮಾಡಿದರೆ ಯಶಸ್ಸು ನಮ್ಮದಾಗುತ್ತದೆ’ ಎಂದು ಹೇಳಿದರು.

ನಂತರ ಮೆಳೆಯಮ್ಮ ದೇವಸ್ಥಾನಕ್ಕೆ ತೆರಳಿ ಮೆಳೆಯಮ್ಮದೇವಿಗೆ ಷೋಡಶೋಪಚಾರ ಪೂಜೆ ಸಲ್ಲಿಸಿದ ಬಳಿಕ ಬಾಲಗಂಗಾಧರನಾಥ ಸ್ವಾಮೀಜಿ, ಪರದೇಶಿರಾಮಯ್ಯ ಸ್ವಾಮೀಜಿ ಹಾಗು ನವದುರ್ಗೆಯರಿಗೆ ಪೂಜೆ ಮಾಡಿದರು.

ಹಳೇಬೀಡು: ಪುಷ್ಪಗಿರಿಯಲ್ಲಿ ಬುಧವಾರ ಸಂಜೆ ವಿಜಯದಶಮಿ ಅಂಗವಾಗಿ ಬನ್ನಿ ಮುಡಿಯುವ ಕಾರ್ಯಕ್ರಮ ಹಾಗೂ ಗಜವಾಹನೋತ್ಸವ ಧಾರ್ಮಿಕ ವಿಧಿವಿಧಾನದೊಂದಿಗೆ ಸಂಭ್ರಮದಿಂದ ನೆರವೇರಿತು.

ಪುಷ್ಪಗಿರಿ ಬೆಟ್ಟದಲ್ಲಿ ಗರ್ಭಗುಡಿಯ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಪಾರ್ವತಮ್ಮನವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ಗಜವಾಹನದಲ್ಲಿ ಕೂರಿಸಿದ ಪಾರ್ವತಿ ಪರಮೇಶ್ವರರ ಉತ್ಸವ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಆರೋಹಣ ಮಾಡಲಾಯಿತು. ವಾದ್ಯದೊಂದಿಗೆ ದೇವಾಲಯದ ಸುತ್ತ ಮೆರವಣಿಗೆ ನಡೆಸಲಾಯಿತು. ನಂತರ ಗಜವಾಹನ ಸಹಿತ ಪಾರ್ವತಿ, ಪರಮೇಶ್ವರರನ್ನು ಬೆಟ್ಟದ ತಪ್ಪಲಿನ ಮಂಟಪದ ಬಳಿಗೆ ಕರೆತರಲಾಯಿತು. ಮಂಟಪದ ಸುತ್ತ ಅಡ್ಡೆಯಲ್ಲಿ ಉತ್ಸವ ಮೂರ್ತಿಗಳ ಪ್ರದಕ್ಷಣೆ ನಡೆಸಲಾಯಿತು.

ದೇವತೆಗಳನ್ನು ಮಂಟಪದಲ್ಲಿ ಕೂರಿಸಿ ಪೂಜೆ ನೆರವೇರಿಸಿದ ನಂತರ ಅಂಬು ಹೊಡೆಯುವ ಪೂಜೆ ನೆರವೇರಿತು. ಗಣಮಗ ಬಂಡಾರಿಕಟ್ಟೆ ವಿರೂಪಾಕ್ಷ ಬಾಳೆ ಗೊನೆಗೆ ಬಿಲ್ಲಿನಿಂದ ಬಾಣ ಬಿಟ್ಟರು. ನೂರಾರು ಜನರು ಅಂಬು ಹೊಡೆಯುವ ಆಚರಣೆಯನ್ನು ಭಕ್ತಿ ಭಾವದಿಂದ ವಿಕ್ಷಿಸಿದರು. ನಂತರ ನೆರದಿದ್ದ ಭಕ್ತರು ಬನ್ನಿ ಪತ್ರೆಯ ಪ್ರಸಾದ ಸ್ವೀಕರಿಸಿದರು.‘ಬನ್ನಿ ಮುಡಿಯುವುದು ದಸರಾದ ಕೊನೆಯ ಆಚರಣೆ. ನಾಡಿನ ಪ್ರತಿ ಊರಿನಲ್ಲಿಯೂ ಆಚರಿಸುವ ಪವಿತ್ರವಾದ ಧಾರ್ಮಿಕ ಆಚರಣೆಯಾಗಿದೆ. ಆಧರ್ಮದ ವಿರುದ್ಧ ಧರ್ಮದ ವಿಜಯವನ್ನು ಸಾರುವ ಆಚರಣೆಯಾಗಿದೆ’ ಎಂದು ಮುಖಂಡ ಸಿದ್ದಾಪುರ ಸಂಗಮ್ ಹೇಳಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ