ಮುಂಡರಗಿ: ಕಾಮಾಲೆ ರೋಗದಿಂದ ಚಿರತೆ ಸಾವು
ಮುಂಡರಗಿ (ಗದಗ ಜಿಲ್ಲೆ): ತಾಲ್ಲೂಕಿನ ಶಿಂಗಟರಾಯನಕೇರಿ ತಾಂಡಾದಲ್ಲಿ ಕಾಣಿಸಿಕೊಂಡಿದ್ದ ಚಿರತೆಯು ಕಾಮಾಲೆ ರೋಗದಿಂದ ಮಂಗಳವಾರ ಮೃತಪಟ್ಟಿದೆ.
ತಾಂಡಾದ ಹನುಮಂತ ಪವಾರ ಎಂಬುವರ ಜಮೀನಿನ ಕೃಷಿ ಹೊಂಡದ ಬಳಿ ಬೃಹತ್ ಪೈಪ್ ಒಳಗೆ ಚಿರತೆ ಅಡಗಿ ಕೂತಿತ್ತು. ಇದರ ಬಗ್ಗೆ ಕುರಿಗಾಹಿಗಳು ನೀಡಿದ ಮಾಹಿತಿ ಆಧರಿಸಿ ಡಿಎಫ್ಒ ಸಂತೋಷಕುಮಾರ ಕೆಂಚೆಪ್ಪನವರ ತಂಡದೊಂದಿಗೆ ಸ್ಥಳಕ್ಕೆ ಬಂದು, ಚಿರತೆಯನ್ನು ಸೆರೆ ಹಿಡಿದರು. ಪ್ರಥಮ ಚಿಕಿತ್ಸೆ ನೀಡಿದರು.
‘ಕಾಮಾಲೆ ರೋಗದಿಂದ ಹಾಗೂ ನೀರು ಸಿಗದೇ ಚಿರತೆ ನಿತ್ರಾಣಗೊಂಡಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬಿಂಕದಕಟ್ಟಿ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ’ ಎಂದು ವಲಯ ಅರಣ್ಯಾಧಿಕಾರಿ (ಆರ್ಎಫ್ಒ) ಮಂಜುನಾಥ ಮೇಗಲಮನಿ ತಿಳಿಸಿದ್ದಾರೆ.