
ಮೇವಿನ ಕೊರತೆ: ಜಾನುವಾರು ಮಾರಾಟಕ್ಕೆ ಮುಂದಾದ ರೈತರು
ಮುದಗಲ್: ಮುಂಗಾರು–ಹಿಂಗಾರು ಕೈಕೊಟ್ಟಿದ್ದರಿಂದ ಜಾನುವಾರಿಗೆ ಮೇವಿನ ತೀವ್ರ ಕೊರತೆಯುಂಟಾಗಿದೆ. ಹೀಗಾಗಿ ರೈತರು ಜಾನುವಾರು ಮಾರಾಟಕ್ಕೆ ಮುಂದಾಗಿದ್ದಾರೆ.
ಮಳೆ ಕೊರತೆಯಿಂದಾಗಿ ಕೆರೆ, ಬಾವಿಗಳಲ್ಲಿ ನೀರಿನ ಪ್ರಮಾಣ ಇಳಿಮುಖವಾಗಿದೆ. ಲಿಂಗಸುಗೂರು ತಾಲ್ಲೂಕಿನಲ್ಲಿ 38,673 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ನಷ್ಟವಾಗಿದೆ. ಶೇ 80ರಷ್ಟು ಬೆಳೆ ನಷ್ಟವಾಗಿದ್ದು, ಇದರಿಂದಾಗಿ ಮೇವಿನ ಕೊರತೆ ಕಂಡು ಬರುತ್ತಿದೆ. ರೈತರು ತಮ್ಮ ಹೊಲಗಳಲ್ಲಿ ಸಂಗ್ರಹಿಸಿಟ್ಟ ಮೇವು ಕಡಿಮೆಯಾಗಿದೆ. ಇದಾರಿಂದಾಗಿ ತಮ್ಮಲ್ಲಿದ್ದ ಜಾನುವಾರು ಮಾರಾಟಕ್ಕೆ ಮುಂದಾಗಿದ್ದಾರೆ. ರೈತರು, ಮುದಗಲ್ ಎಪಿಎಂಸಿ ಹತ್ತಿರ ಇರುವ ಜಾನುವಾರು ಮಾರುಕಟ್ಟೆಗೆ ತಂದು ಮಾರಾಟ ಮುಡುತ್ತಿದ್ದಾರೆ.
‘ಎನ್ ಮಾಡೋದು, ಮುಂಗಾರು ಕೈಕೊಟ್ಟರೂ, ಹಿಂಗಾರು ಮಳೆ ಬರುತ್ತದೆ ಎಂದು ಕಾದಿದ್ದೇವು. ಆದರೆ ಹಿಂಗಾರು ಸಹ ಕೈ ಕೊಟ್ಟಿದೆ. ನಾಲ್ಕು ದನಗಳಲ್ಲಿ ಒಂದು ಆಕಳು ಮಾರಾಟಕ್ಕ ಬಂದೀನ್ರಿ. ತಿಂಗಳ ಹಿಂದೆ ₹60 ಸಾವಿರಕ್ಕೆ ಕೇಳುವ ಆಕಳು ₹ 25 ಸಾವಿರಕ್ಕೆ ಕೇಳಲಿಕತ್ಯಾರ‍್ರಿ..’ ಎಂದು ಸಮೀಪದ ಕನ್ನಾಪುರ ಹಟ್ಟಿ ಗ್ರಾಮದ ರೈತ ಭರಮನಗೌಡ ಬೇಸರ ವ್ಯಕ್ತಪಡಿಸಿದರು.
ಜಾನುವಾರು ಸಂತೆಗೆ ಎಂದಿಗಿಂತ ಹೆಚ್ಚಿಗೆ ರೈತರು, ತಮ್ಮ ಜಾನುವಾರು ಮಾರಾಟಕ್ಕೆ ತಂದಿದ್ದರು. ಜಾನುವಾರು ಮಾರುಕಟ್ಟೆ ತುಂಬಿ ಜಾಗವಿಲ್ಲದೆ. ಹೈದರಾಬಾದ್-ಬೆಳಗಾವಿ ಹೆದ್ದಾರಿಯ ಪಕ್ಕದಲ್ಲೂ ಮಾರಾಟ ಮಾಡುತ್ತಿದ್ದರು. ಕುರಿ, ಮೇಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಬಂದಿದ್ದವು. ಖರೀದಿದಾರರು ಕಡಿಮೆ ಬೆಲೆಗೆ ಜಾನುವಾರು ಕೇಳುತ್ತಿದ್ದರಿಂದ ರೈತರು ಬೇಸರಿಸಿದರು.
‘ಬರುವ ದಿನಗಳಲ್ಲಿ ಮೇವಿನ ಕೊರತೆ ಹೆಚ್ಚಾಗಲಿದೆ. ಹಿಂಗಾರಿ ಮಳೆಯಾಗಿದ್ದರೆ, ಜೋಳ, ಕಡಲೆ ಬಿತ್ತನೆ ಮಾಡಿ ಜೋಳದ ಮೇವು, ಕಡಲೆ ಒಟ್ಟು ಸಂಗ್ರಹಿಸಿಟ್ಟು, ಜಾನುವಾರು ಸಾಕಣೆ ಮಾಡುತ್ತಿದ್ದವು. ಬಿತ್ತನೆಗೆ ಮಳೆಯಿಲ್ಲ. ಬಿತ್ತಿದ ತೊಗರಿ ಒಣಗುತ್ತಿವೆ. ಅದರ ಹೊಟ್ಟು ದೊರೆಯುವುದಿಲ್ಲ. ಇದರಿಂದಾಗಿ ಹೋರಿ ಕರ ಮಾರಾಟ ಮಾಡಲು ತಂದಿದ್ದೇನೆ. ₹4 ಸಾವಿರಕ್ಕೆ ಕೇಳುತ್ತಿದ್ದಾರೆ’ ಎಂದು ಮುದಗಲ್ ಜಾನುವಾರು ಮಾರುಕಟ್ಟೆಗೆ ಬಂದಿದ್ದ ಮುಡಲದಿನ್ನಿ ರೈತ ಗೋವಿಂದಪ್ಪ ಹೇಳಿದರು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು ಮೇವಿನ ಬ್ಯಾಂಕ್ ಸ್ಥಾಪನೆ ಮಾಡಲು ಇನ್ನೂ ಮುಂದಾಗಿಲ್ಲ. ತಿಂಗಳಲ್ಲಿ ಮೇವಿನ ಕೊರತೆ ಹೆಚ್ಚಾಗಲಿದೆ. ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜಾನುವಾರು ಸಾಕಾಣಿಕೆ ಹೇಗೆ ಎಂಬುದು ಚಿಂತೆಯಾಗಿದೆ.