
ಪಾಕಿಸ್ತಾನ್ ಜಿಂದಾಬಾದ್ ಘೋಷಣೆ: ಕ್ರಿಮಿನಲ್ ಪ್ರಕರಣ ರದ್ದುಪಡಿಸಿದ ಹೈಕೋರ್ಟ್
ಬೆಂಗಳೂರು: ಸಾರ್ವಜನಿಕ ಪ್ರತಿಭಟನೆ ವೇಳೆ ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆ ಕೂಗಿದ್ದ ವ್ಯಕ್ತಿಯೊಬ್ಬರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
‘ನನ್ನ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಬೇಕು’ ಎಂದು ಕೋರಿ ಮಂಡ್ಯ ತಾಲ್ಲೂಕಿನ ಡಣಾಯಕನಪುರದ ಡಿ.ಎಸ್.ರವಿಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್ ವಕೀಲ ಎಂ.ವಿನೋದ್ ಕುಮಾರ್, ‘ಅರ್ಜಿದಾರರು ಆ ಕ್ಷಣದ ಒತ್ತಡದಲ್ಲಿ ತಪ್ಪಾಗಿ ಇಂತಹ ಘೋಷಣೆ ಕೂಗಿದ್ದಾರೆ. ಅವರಿಗೆ ಯಾವುದೇ ಉದ್ದೇಶ ಇರಲಿಲ್ಲ. ಹಾಗಾಗಿ, ಪ್ರಕರಣ ರದ್ದುಪಡಿಸಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ‘ಇದು ಉದ್ದೇಶಪೂರ್ವಕ ಕೃತ್ಯ ಅಲ್ಲ’ ಎಂಬ ಅಭಿಪ್ರಾಯದೊಂದಿಗೆ ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಿ ಆದೇಶಿಸಿದೆ.
ಪ್ರಕರಣ: ಪಾಕಿಸ್ತಾನದ ಅಂದಿನ ವಿದೇಶಾಂಗ ಮಂತ್ರಿಯು, ಭಾರತ ಹಾಗೂ ಪ್ರಧಾನಿ ಮೋದಿ ಕುರಿತಾಗಿ ವಿಶ್ವಸಂಸ್ಥೆ ಅಧಿವೇಶನದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಆಕ್ಷೇಪಿಸಿತ್ತು. ಹೇಳಿಕೆಯನ್ನು ಖಂಡಿಸಿ 2022ರ ಡಿಸೆಂಬರ್ 18ರಂದು ಮಂಡ್ಯದಲ್ಲಿ ಬಿಜೆಪಿ ವತಿಯಿಂದ ನಡೆದ ಪ್ರತಿಭಟನೆಯೂ ನಡೆದಿತ್ತು. ಈ ವೇಳೆ ಅರ್ಜಿದಾರರು, ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದಾರೆ ಎಂಬ ಆರೋಪದಡಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು.