
ರಾಯಬಾಗದಲ್ಲಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಣೆ
ರಾಯಬಾಗ: ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಆರ್ಥಿಕವಾಗಿ ಸಬಲರಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು. ಇದಕ್ಕೆ ಹೊಲಿಗೆ ಯಂತ್ರಗಳು ಸಹಕಾರಿಯಾಗಲಿವೆ ಎಂದು ಶಾಸಕ ಡಿ.ಎಂ. ಐಹೊಳೆ ಹೇಳಿದರು.
ಪಟ್ಟಣದಲ್ಲಿರುವ ತಮ್ಮ ಸ್ವಗೃಹದ ಆವರಣದಲ್ಲಿ ಮಂಗಳವಾರ ದೇವರಾಜ ಅರಸು ಹಾಗೂ ಮರಾಠಾ ಅಭಿವೃದ್ಧಿ ನಿಗಮದಡಿ 24 ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ಮಹಿಳೆಯರು ಹೊಲಿಗೆ ವೃತ್ತಿಯನ್ನು ಆದಾಯದ ಮೂಲವನ್ನಾಗಿ ಮಾಡಿಕೊಂಡು ಕುಟುಂಬದ ಆರ್ಥಿಕ ಪ್ರಗತಿಗೆ ನೆರವಾಗಬೇಕು. ಸ್ವಂತ ಉದ್ಯೋಗದಿಂದ ಆರ್ಥಿಕ ಸ್ವಾತಂತ್ರ್ಯ ಸಾಧಿಸುವುದರ ಜತೆಗೆ ಆತ್ಮವಿಶ್ವಾಸವನ್ನೂ ಬೆಳೆಸಿಕೊಳ್ಳಬಹುದು. ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉದ್ಯೋಗಶೀಲರಾಗಬೇಕು ಎಂದರು. ಡಾ.ಬಿ.ಆರ್. ಅಂಬೇಡ್ಕರ್ ನಿಗಮದಿಂದ ಸಾರಥಿ ಯೋಜನೆಯಡಿ ಮಂಜೂರಾದ ಕಾರ್ ಕೀ ಯನ್ನು ಫಲಾನುಭವಿ ಮಹಾವೀರ ಸದಾಶಿವ ಘೇವಾರಿ ಅವರಿಗೆ ಶಾಸಕ ಡಿ.ಎಂ. ಐಹೊಳೆ ಹಸ್ತಾಂತರಿಸಿದರು.
ಬಿಜೆಪಿಯ ಪಕ್ಷದ ಮಂಡಲ ಅಧ್ಯಕ್ಷ ಪೃಥ್ವಿರಾಜ ಜಾಧವ, ಮುಖಂಡರಾದ ಸದಾಶಿವ ಘೋರ್ಪಡೆ, ಅಣ್ಣಾಸಾಹೇಬ ಖೇಮಲಾಪುರೆ, ಅರುಣ ಐಹೊಳೆ, ಸದಾನಂದ ಹಳಿಂಗಳಿ, ಮಹೇಶ ಕರಮಡಿ, ಸುಭಾಸ ಕೋರೆ, ಮಜ್ಜಿದ ಡಾಂಗೆ, ಬಸವರಾಜ ನಾಯಿಕ, ಮಾರುತಿ ಬಂತೆ ಹಾಗೂ ಸುರೇಶ ಐಹೊಳೆ ಭಾಗವಹಿಸಿದ್ದರು.