
ಮುಳಬಾಗಿಲು ಬಳಿ ಚಿರತೆ ಪ್ರತ್ಯಕ್ಷ: ಜನರಲ್ಲಿ ಆತಂಕ
ಮುಳಬಾಗಿಲು: ತಾಲ್ಲೂಕಿನ ಆಲಂಗೂರು ಹಾಗೂ ಉಬ್ಬಾಂಡ್ಲಹಳ್ಳಿ ಗ್ರಾಮಗಳ ಮಧ್ಯೆ ಇರುವ ಪೊದೆಯಲ್ಲಿ ಶನಿವಾರ ಚಿರತೆ ಕಾಣಿಸಿಕೊಂಡಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಶನಿವಾರ ಬೆಳ್ಳಂಬೆಳಗ್ಗೆ ಬಂಡೆಯೊಂದರ ಮೇಲೆ ಕುಳಿತ ಚಿರತೆಯ ದೃಶ್ಯವನ್ನು ಉಬ್ಬಾಂಡ್ಲಹಳ್ಳಿ ಗ್ರಾಮದ ಹರೀಶ್ ಎಂಬುವರು ವಿಡಿಯೊ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ರಸ್ತೆಯಲ್ಲಿ ಸಂಚರಿಸಲು ಜನರು ಹೆದರುತ್ತಿದ್ದಾರೆ.
ಈ ಸಂಬಂಧ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಚಿರತೆಗಾಗಿ ಶೋಧ ನಡೆಸಿದರು. ಆದರೆ, ಚಿರತೆ ಸುಳಿವು ಪತ್ತೆಯಾಗದ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಮತ್ತೊಮ್ಮೆ ಚಿರತೆ ಕಂಡುಬಂದರೆ, ಬೋನ್ ಇಡುವುದಾಗಿ ಭರವಸೆ ನೀಡಿ, ಹೊರಟರು.
ಬೋನ್ ಇಡುವಂತೆ ತಾವು ಮಾಡಿದ ಮನವಿಗೆ ಅಧಿಕಾರಿಗಳು ಸ್ಪಂದಿಸಲಿಲ್ಲ ಎಂದು ಸ್ಥಳೀಯರು ದೂರಿದರು.