
ಹುಬ್ಬಳ್ಳಿ|ಶೇ 50ರಷ್ಟು ಅಬಕಾರಿ ಆದಾಯ ಕಬ್ಬು ಬೆಳೆಗಾರರಿಗೆ ನೀಡಲಿ:ಬಸವರಾಜ ಭೂತಾಳಿ
ಹುಬ್ಬಳ್ಳಿ: ‘ಕಬ್ಬಿನಿಂದ ತಯಾರಾಗುವ ಮದ್ಯ ಹಾಗೂ ಮದ್ಯಸಾರ ಉತ್ಪನ್ನಗಳಿಂದ ರಾಜ್ಯ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಅಬಕಾರಿ ಆದಾಯ ಸಂಗ್ರಹವಾಗುತ್ತದೆ. ಆದರೆ, ಕಬ್ಬು ಬೆಳೆಗಾರರಿಗೆ ಮಾತ್ರ ಸೂಕ್ತ ಬೆಲೆ ದೊರೆಯುತ್ತಿಲ್ಲ. ಒಂದು ಟನ್ ಕಬ್ಬಿನಿಂದ ಸರ್ಕಾರಕ್ಕೆ ದೊರೆಯುವ ₹12,420 ಅಬಕಾರಿ ಆದಾಯದಲ್ಲಿ ಶೇ 50ರಷ್ಟು ಅಂದರೆ ₹6,210 ಅನ್ನು ಕಬ್ಬು ಬೆಳೆಗಾರರಿಗೆ ನೀಡಬೇಕು’ ಎಂದು ಪ್ರಗತಿಪರ ರೈತ ಬಸವರಾಜ ಭೂತಾಳಿ ಆಗ್ರಹಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ನಡುವೆ ಬೆಲೆ ನಿಗದಿ ವಿಚಾರವಾಗಿ ಸಂಘರ್ಷ ನಡೆಯುತ್ತಿದೆ. ಕಬ್ಬಿಗೆ ಸೂಕ್ತ ಬೆಲೆ ಸಿಗದೆ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಡಾ.ಸ್ವಾಮಿನಾಥನ್ ವರದಿ ಆಧರಿಸಿ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು. ರೈತರ ಜೀವನೋಪಾಯಕ್ಕೆ ಅನುಕೂಲವಾಗುವಂತಹ ನೀತಿಗಳನ್ನು ರೂಪಿಸಬೇಕು. ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
‘ಕೇಂದ್ರ ಸರ್ಕಾರ ಘೋಷಿಸುವ ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ)ಯಿಂದ ರೈತರ ಸಮಸ್ಯೆಗಳಿಗೆ ಪರಿಹಾರ ದೊರೆಯುವುದಿಲ್ಲ. ಕಬ್ಬು ಬೆಳೆಗಾರರ ಶ್ರಮದಿಂದ ಸರ್ಕಾರಕ್ಕೆ ದೊಡ್ಡ ಪ್ರಮಾಣದ ಆದಾಯ ಬರುತ್ತಿರುವಾಗ, ಅದರಲ್ಲಿ ರೈತರಿಗೂ ನ್ಯಾಯಯುತ ಪಾಲು ಸಿಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ರೈತರ ಹಿತ ಕಾಪಾಡಲು ಮುಂದಾಗಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಮದ್ಯ ಮಾರಾಟ ಮಳಿಗೆಗಳನ್ನು ಹಾಗೂ ಸರ್ಕಾರಿ ಕಚೇರಿಗಳನ್ನು ಬಂದ್ ಮಾಡಿ ಪ್ರತಿಭಟಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಬಸವರಾಜ ಇಟ್ಟಣ್ಣವರ, ಆನಂದ ದೇಶಪಾಂಡೆ ಇದ್ದರು.