ಎಸ್ಐಆರ್ ಅಂತಿಮ ಪಟ್ಟಿ ಇಂದು: ಸುಮಾರು 1 ಕೋಟಿ ಮಂದಿ ಹೊರಕ್ಕೆ?

ಎಸ್ಐಆರ್ ಅಂತಿಮ ಪಟ್ಟಿ ಇಂದು: ಸುಮಾರು 1 ಕೋಟಿ ಮಂದಿ ಹೊರಕ್ಕೆ?

ಎಸ್ಐಆರ್ ಅಂತಿಮ ಪಟ್ಟಿ ಇಂದು: ಸುಮಾರು 1 ಕೋಟಿ ಮಂದಿ ಹೊರಕ್ಕೆ?

ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಮುಕ್ತಾಯವಾಗಿದ್ದು, ಅಂತಿಮ ಪಟ್ಟಿಯು ಮಂಗಳವಾರ (ಅ.27) ಸಂಜೆ ಪ್ರಕಟವಾಗಲಿದೆ.

ರಾಜ್ಯದ 4.53 ಕೋಟಿ ಮತದಾರರ ಹೆಸರು ಅಂತಿಮ ಪಟ್ಟಿಯಲ್ಲಿ ಇರುವುದು ಖಚಿತವಾಗಿದೆ.

ಭಾರತೀಯ ಚುನಾವಣಾ ಆಯೋಗವು ರಾಜ್ಯದಲ್ಲಿ ಜೂನ್‌ 16ರಂದು ಎಸ್‌ಐಆರ್‌ಗೆ ಅಧಿಸೂಚನೆ ಹೊರಡಿಸಿತ್ತು. ಆವರೆಗೆ ಚಾಲ್ತಿಯಲ್ಲಿದ್ದ 2025ರ ಮತದಾರರ ಪಟ್ಟಿಯನ್ನು ‘ಫ್ರೀಜ್‌’ ಮಾಡಲಾಗಿತ್ತು. ಆಗ ರಾಜ್ಯದಲ್ಲಿ ಒಟ್ಟು 5.54 ಕೋಟಿ ಮತದಾರರು ಇದ್ದರು. 

ಎಸ್‌ಐಆರ್‌ ಪ್ರಕ್ರಿಯೆ ಮೊದಲ ಹಂತದಲ್ಲಿ 1.08 ಕೋಟಿ ಮತದಾರರನ್ನು ಎಎಸ್‌ಡಿಡಿಒ (ಪತ್ತೆಯಾಗದ/ಸ್ಥಳಾಂತರ/ಮೃತ/ಒಂದಕ್ಕಿಂತ ಹೆಚ್ಚುಕಡೆ ನೋಂದಣಿ ಮತ್ತು ಇತರೆ) ಎಂದು ಕರಡು ಮತದಾರರ ಪಟ್ಟಿಯಿಂದ ಹೊರಗೆ ಇಡಲಾಗಿತ್ತು. ಆಗಸ್ಟ್‌ 24ರಂದು ಪ್ರಕಟವಾದ ಕರಡು ಮತದಾರರ ಪಟ್ಟಿಯಲ್ಲಿ 4.46 ಕೋಟಿ ಮತದಾರರು ಸ್ಥಾನ ಪಡೆದಿದ್ದರು.

ಎರಡನೇ ಹಂತದಲ್ಲಿ 43.81 ಲಕ್ಷ ಮತದಾರರಿಗೆ 2002ರ ಮತದಾರರ ಪಟ್ಟಿಯ ಮ್ಯಾಪಿಂಗ್‌ ವಿವರ ಇಲ್ಲ ಮತ್ತು ವಿವರ ವ್ಯತ್ಯಾಸವಿದೆ ಎಂದು ನೋಟಿಸ್‌ ಸೃಜಿಸಲಾಗಿತ್ತು. ಅಂತಹ ಮತದಾರರಿಗೆ ನೋಟಿಸ್ ನೀಡಿ, ವಿಚಾರಣೆ ನಡೆಸಿ ಅವರನ್ನು ಅಂತಿಮ ಮತದಾರರ ಪಟ್ಟಿಯಲ್ಲಿ ಉಳಿಸಿಕೊಳ್ಳಲಾಗಿದೆ. ನೋಟಿಸ್‌ ಪಡೆದವರಲ್ಲಿ 1.34 ಲಕ್ಷ ಮತದಾರರು ವಿಚಾರಣೆಗೆ ಹಾಜರಾಗಿಲ್ಲ ಮತ್ತು ಮನೆ ಭೇಟಿಯ ವೇಳೆ ಸ್ಥಳದಲ್ಲಿಲ್ಲ ಎಂಬುದು ಪತ್ತೆಯಾದ ಕಾರಣ, ಅವರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಅರ್ಜಿ ನಮೂನೆ–7 ಸೃಜಿಸಲಾಗಿತ್ತು.

ಕರಡು ಮತದಾರರ ಪಟ್ಟಿಯಿಂದ ಹೊರಗೆ ಉಳಿದ ಅರ್ಹ ಮತದಾರರು ಮತ್ತೆ ನೋಂದಣಿ ಮಾಡಿಸಲು ಸೆಪ್ಟೆಂಬರ್ 23ರವರೆಗೆ ಅವಕಾಶ ನೀಡಲಾಗಿತ್ತು. ಆ ಅವಧಿಯಲ್ಲಿ 6.67 ಲಕ್ಷ ಮಂದಿ ಹೊಸದಾಗಿ ನೋಂದಣಿಗೆ ಅರ್ಜಿ ನಮೂನೆ–6 ಸಲ್ಲಿಸಿದ್ದರು. ಅವರೆಲ್ಲರನ್ನೂ ಅಂತಿಮ ಮತದಾರರ ಪಟ್ಟಿಗೆ ಸೇರಿಸಲಾಗಿದೆ. ಜತೆಗೆ ಅರ್ಹರಾಗಿದ್ದೂ, ಕರಡು ಪಟ್ಟಿಯಿಂದ ತಪ್ಪಾಗಿ ಹೊರಗಿಡಲಾಗಿದೆ ಎಂದು ಆಕ್ಷೇಪ ದಾಖಲಿಸಿದ್ದವರ ವಿವರಗಳನ್ನು ಪರಿಶೀಲಿಸಿ ಒಟ್ಟು ಸುಮಾರು 8 ಲಕ್ಷ ಮಂದಿಯನ್ನು ಕರಡು ಮತದಾರರ ಪಟ್ಟಿಗೆ ಸೇರಿಸಲಾಗಿತ್ತು. ಹೀಗಾಗಿ ಕರಡು ಮತದಾರರ ಪಟ್ಟಿಯಲ್ಲಿರುವ ಮತದಾರರ ಸಂಖ್ಯೆ 4.54 ಕೋಟಿಗೆ ಏರಿಕೆಯಾಗಿದೆ.

ಕರಡು ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆದವರನ್ನು ಪಟ್ಟಿಯಿಂದ ಕೈಬಿಡುವಂತೆ 2.82 ಲಕ್ಷ ಅರ್ಜಿ ನಮೂನೆ–7ನ್ನು ಸಲ್ಲಿಸಲಾಗಿತ್ತು. ಪುರಾವೆಗಳನ್ನು ಒದಗಿಸದೆ ಸಲ್ಲಿಸಿದ ಸುಮಾರು 68,000 ಅರ್ಜಿಗಳನ್ನು ಮತಗಟ್ಟೆ ಅಧಿಕಾರಿಗಳ ಮಟ್ಟದಲ್ಲಿಯೇ ತಿರಸ್ಕರಿಸಲಾಗಿದೆ. ಉಳಿದ ಅರ್ಜಿಗಳನ್ನು ಪರಿಶೀಲಿಸಿ, ಕ್ರಮ ತೆಗೆದುಕೊಳ್ಳಲಾಗಿದೆ. ಒಟ್ಟಾರೆಯಾಗಿ ಹೊಸ ನೋಂದಣಿ ಮತ್ತು ಅನರ್ಹರನ್ನು ತೆಗೆದುಹಾಕಿರುವ ಕಾರಣಕ್ಕೆ ಕರಡು ಮತದಾರರ ಪಟ್ಟಿ ಮತ್ತು ಅಂತಿಮ ಮತದಾರರ ಪಟ್ಟಿಗೂ ವ್ಯತ್ಯಾಸವಿರಲಿದೆ. 

‘ಕರಡು ಮತದಾರರ ಪಟ್ಟಿಯಲ್ಲಿನ ಮತದಾರರ ಸಂಖ್ಯೆ ಹೆಚ್ಚಾಗಿದ್ದರೂ, ಅವರೆಲ್ಲರೂ ಅಂತಿಮ ಮತದಾರರ ಪಟ್ಟಿಯಲ್ಲಿ ಇರುತ್ತಾರೆ ಎಂಬುದು ಖಚಿತವಲ್ಲ. ನೋಟಿಸ್‌ಗಳಿಗೆ ಸರಿಯಾದ ದಾಖಲೆ ಒದಗಿಸದವರು, ನೋಟಿಸ್‌ಗೆ ಉತ್ತರಿಸದವರನ್ನು ಅಂತಿಮ ಮತದಾರರ ಪಟ್ಟಿಯಿಂದ ಕೈಬಿಡಲಾಗತ್ತದೆ’ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.

ಸೆಪ್ಟೆಂಬರ್ 23ರ ನಂತರ ಅರ್ಜಿ ನಮೂನೆ–6 ಸಲ್ಲಿಸಿದವರ ಅರ್ಜಿಗಳನ್ನು ಕಾಯ್ದಿರಿಸಲಾಗಿದೆ. ಅಂತಿಮ ಮತದಾರರ ಪಟ್ಟಿ ಪ್ರಕಟವಾದ ನಂತರ ನಡೆಯಲಿರುವ ಮೊದಲ ವಿಶೇಷ ಸಾಮಾನ್ಯ ಪರಿಷ್ಕರಣೆಯಲ್ಲಿ (ಎಸ್‌ಎಸ್‌ಆರ್‌) ಅವರನ್ನು ಮತದಾರರ ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ