Web Exclusive | ಧಾರವಾಡ ಕೃಷಿ ಮೇಳ: ‘ಸ್ಮಾರ್ಟ್‌ ಫಾರ್ಮಿಂಗ್‌’ ನೇರ ಪ್ರದರ್ಶನ

Web Exclusive | ಧಾರವಾಡ ಕೃಷಿ ಮೇಳ: ‘ಸ್ಮಾರ್ಟ್‌ ಫಾರ್ಮಿಂಗ್‌’ ನೇರ ಪ್ರದರ್ಶನ

Web Exclusive | ಧಾರವಾಡ ಕೃಷಿ ಮೇಳ: ‘ಸ್ಮಾರ್ಟ್‌ ಫಾರ್ಮಿಂಗ್‌’ ನೇರ ಪ್ರದರ್ಶನ

ಧಾರವಾಡ: ಕೃಷಿ ವಿಶ್ವವಿದ್ಯಾಲಯದಲ್ಲಿ ಸೆ.25ರಿಂದ 28ರವರೆಗೆ ಕೃಷಿಮೇಳ ನಡೆಯಲಿದ್ದು, ಈ ಬಾರಿ ಮೇಳದಲ್ಲಿ ‘ಸ್ಮಾರ್ಟ್‌ ಫಾರ್ಮಿಂಗ್‌’ ನೇರ ಪ್ರದರ್ಶನ ಆಯೋಜನೆಗೆ ಸಿದ್ಧತೆ ನಡೆದಿದೆ.

ಪ್ರದರ್ಶನ ಆಯೋಜನೆಗೆ ಅರ್ಧ ಎಕರೆ ಜಾಗ ಗುರುತಿಸಲಾಗಿದೆ. 10 ಕೃಷಿ ತಂತ್ರಜ್ಞಾನಗಳನ್ನು ಪರಿಚಯಿಸಲು ಉದ್ದೇಶಿಸಲಾಗಿದೆ. ತಂತ್ರಜ್ಞಾನಗಳ ಕಾರ್ಯವಿಧಾನವನ್ನು ರೈತರು ವೀಕ್ಷಿಸಬಹುದು.

ವಿಶ್ವವಿದ್ಯಾಲಯದ ಕೃಷಿಕ್‌ ಅಗ್ರಿ ಇನ್‌ಕ್ಯುಬೇಟರ್‌ (ಕೃಷಿಕ್‌ ಎಬಿಐ) ವಿಭಾಗದ ನವೋದ್ಯಮಗಳು (ಸ್ಟಾರ್ಟ್‌ ಅಪ್‌) ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳನ್ನು ಪ್ರದರ್ಶಿಸಲಾಗುವುದು. 'ಐಒಟಿ ಆಧಾರಿತ ಕೊಳವೆಬಾವಿ ನೀರು ನಿರ್ವಹಣಾ ವ್ಯವಸ್ಥೆ', 'ಬ್ಯಾಟರಿ ಚಾಲಿತ ಹಾಗೂ ಮೊಬೈಲ್ ನಿಯಂತ್ರಿತ ಸ್ವಯಂಚಾಲಿತ ವಾಲ್ವ್’, ‘ಉಪಗ್ರಹ ಮತ್ತು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಬೆಳೆ ಮೇಲ್ವಿಚಾರಣೆ ಸಲಹಾ ವೇದಿಕೆ’, ‘ಬೀಜ ಮೊಳಕೆ ಗುಣಮಟ್ಟ ಪರೀಕ್ಷಾ ಮೊಬೈಲ್ ಆ್ಯಪ್’, ‘ದ್ರಾಕ್ಷಿ ಕೃಷಿಗೆ ರಿಯಲ್‌ಟೈಮ್ ಕೃಷಿ ಸಲಹೆ’, ‘ಹೈಡ್ರೋಪೋನಿಕ್’ ಲಂಬ ಮೇವು ಉತ್ಪಾದನಾ ವ್ಯವಸ್ಥೆ’, ‘ಸ್ವಯಂಚಾಲಿತ ಸಿಂಪಡಣೆ ಡ್ರೋನ್’, ‘ಸ್ವಯಂಚಾಲಿತ ಹವಾಮಾನ ಕೇಂದ್ರ’, ‘ಮೊಳಕೆ ಕಳೆ ತೆಗೆಯುವ ಯಂತ್ರ’ ಹಾಗೂ ‘ಸೌರಶಕ್ತಿ ಚಾಲಿತ ಮೂರು ಸಾಲಿನ ಕಡಲೆ ಕುಡಿ ಚಿವುಟುವ (ನಿಪ್ಪಿಂಗ್) ಯಂತ್ರ’ಗಳನ್ನು ಪ್ರದರ್ಶಿಸಿಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

‘ಐಒಟಿ ಆಧಾರಿತ ಕೊಳವೆಬಾವಿ ನೀರು ನಿರ್ವಹಣೆ ತಂತ್ರಜ್ಞಾನದಲ್ಲಿ ಕೊಳವೆ ಬಾವಿಯಲ್ಲಿ ಎಷ್ಟು ನೀರು ಇದೆ ಎಂಬ ಮಾಹಿತಿ ನೀಡುತ್ತದೆ, ನೀರು ಖಾಲಿಯಾದರೆ ಎಚ್ಚರಿಕೆ ಸಂದೇಶ (ವಾರ್ನಿಂಗ್‌ ಮೆಸೇಜ್‌) ನೀಡುತ್ತದೆ. ಸ್ವಯಂಚಾಲಿತ ವಾಲ್ವ್‌ ತಂತಜ್ಞಾನದ ಆ್ಯಪ್‌ ಬಳಸಿ ವಾಲ್ವ್‌ ‘ಓಪನ್‌’, ‘ಕ್ಲೋಸ್‌’ ಮಾಡಬಹುದು. ರೈತರು ಮೊಬೈಲ್‌ ಫೋನ್‌ನಲ್ಲಿ ಈ ಆ್ಯಪ್‌ ಅಳವಡಿಸಿಕೊಂಡರೆ ಅನುಕೂಲವಾಗುತ್ತದೆ. ವಾಲ್ವ್‌ ತಿರುವು‌ದಕ್ಕಾಗಿಯೇ ಜಮೀನು, ತೋಟಗಳಿಗೆ ಪದೇಪದೇ ಓಡಾಡುವುದು ತಪ್ಪುತ್ತದೆ’ ಎಂದು ಕೃಷಿ ವಿಶ್ವವಿದ್ಯಾಲಯದ ಪ್ರೊ.ಎಸ್‌.ಎಸ್‌.ಡೊಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ವಯಂ ಚಾಲಿತ ಮಿನಿ ಹವಾಮಾನ ಕೇಂದ್ರ ನೆರವಿನಿಂದ ಮಳೆ ಮುನ್ಸೂಚನೆ, ಆರ್ದ್ರತೆ, ಉಷ್ಣಾಂಶ, ವಾತಾವರಣದಲ್ಲಿನ ಬದಲಾವಣೆಗಳು ಮೊದಲಾದ ಮಾಹಿತಿ ಪಡೆಯಬಹುದು. ಮಳೆ ಪ್ರಮಾಣದ ದಾಖಲೆ ಇರುತ್ತದೆ. ಬೆಳೆ, ಗೊಬ್ಬರ, ಸಿಂಪಡಣೆ ಇತ್ಯಾದಿ ಎಲ್ಲ ಕುರಿತು ಮಾರ್ಗದರ್ಶನ ನೀಡುತ್ತದೆ. ಚಿಕ್ಕ ಹಿಡುವಳಿದಾರರೂ ಹೊಲದಲ್ಲಿ ಈ ಹವಾಮಾನ ಯಂತ್ರ ಅಳವಡಿಸಿಕೊಳ್ಳಬಹುದು.

ಎಐ–ಐಒಟಿ ಬೇಸ್ಡ್‌ ಸ್ಫ್ರೌಟ್‌ ವೀಡರ‍್ಸ್‌ದಿಂದ ಮೊಳಕೆ ಹಂತದಲ್ಲೇ ಕಳೆಯನ್ನು ತೆಗೆಯುವ ಯಂತ್ರದ ಕುರಿತು ಮೇಳದಲ್ಲಿ ಮಾಹಿತಿ ಪಡೆಯಬಹುದು. ಮೊಳಕೆ ಹಂತದಲ್ಲೇ ಕಳೆಯನ್ನು ತೆಗೆದರೆ ಬೆಳೆ ಸಮೃದ್ಧವಾಗಿ ಬೆಳೆಯುತ್ತದೆ. ಅಧಿಕ ಇಳುವರಿ ಪಡೆಯಲು ಅನುಕೂಲವಾಗುತ್ತದೆ.

ಉತ್ತರ ಕರ್ನಾಟಕ ಭಾಗದ ಹಿಂಗಾರಿ ಪ್ರಮುಖ ಬೆಳೆಗಳಲ್ಲಿ ಕಡಲೆಯೂ ಒಂದು. ಕಡಲೆ ಸಸ್ಯಗಳ ಕುಡಿ ಚಿವು‌ಟಿದರೆ ಕವಲುಗಳು ಜಾಸ್ತಿಯಾಗಿ ಇಳುವುರಿ ಹೆಚ್ಚುತ್ತದೆ. ಸೌರಶಕ್ತಿ ಕುಡಿ ಚಿವುಟುವ ಯಂತ್ರ (ಮೂರು ಸಾಲು) ಮೇಳದಲ್ಲಿ ಇರಲಿದೆ. ಯಂತ್ರಗಳ ಕಾರ್ಯವೈಖರಿಯನ್ನು ಮೇಳದಲ್ಲಿ ರೈತರು ನೇರವಾಗಿ ವೀಕ್ಷಿಸಬಹುದು. ಯಂತ್ರಗಳ ಬಳಕೆ, ತಯಾರಿಕಾ ಸಂಸ್ಥೆ, ದರ ಇತ್ಯಾದಿ ಸಮಗ್ರ ಮಾಹಿತಿಯನ್ನು ಕೃಷಿಕರು ಪ್ರದರ್ಶನದಲ್ಲಿ ಪಡೆಯಬಹುದು ಎನ್ನುತ್ತಾರೆ ಅನ್ವೇಷಕರು.

ಕೃಷಿಕ್‌ ಎಬಿಐ ವತಿಯಿಂದ ನವೋದ್ಯಮ ಸ್ಥಾಪನೆಗೆ ಉತ್ತೇಜನ ನೀಡಲಾಗುತ್ತಿದೆ. ಮೇಳದಲ್ಲಿ ನವೋದ್ಯಮದ ಉತ್ಪನ್ನ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿ ಪ್ರೋತ್ಸಾಹ ನೀಡಲಾಗುತ್ತದೆ. ರೈತರಿಗೆ ಕೃಷಿ, ಬೀಜ, ಗೊಬ್ಬರ, ಉಪಕರಣ ತಂತ್ರಜ್ಞಾನ ಕುರಿತು ಮಾಹಿತಿ ನೀಡಲು ಪ್ರತಿವರ್ಷ ವಿಶ್ವವಿದ್ಯಾಲಯ ಕೃಷಿ ಮೇಳ ಆಯೋಜಿಸುತ್ತದೆ. ನಾಲ್ಕು ದಿನ ನಡೆಯುವ ಈ ಮೇಳಕ್ಕೆ ‌ವಿವಿಧ ಜಿಲ್ಲೆಗಳ ರೈತರು ಭೇಟಿ ನೀಡುತ್ತಾರೆ. ಕೃಷಿ ಉಪಕರಣ, ಬಿತ್ತನೆ, ಕೀಟ ಪ್ರಪಂಚ, ಜಾನುವಾರು ಪ್ರದರ್ಶನ ಮೊದಲಾದವು ಮೇಳದ ಪ್ರಮುಖ ಆಕರ್ಷಣೆಗಳು. ‘ಸ್ಮಾರ್ಟ್‌ ಫಾರ್ಮಿಂಗ್‌’ ಈ ಬಾರಿಯ ಮೇಳದ ಆಕರ್ಷಣೆಗಳಲ್ಲೊಂದು.

‘ಹೈಡ್ರೋಫೋನಿಕ್ಸ್‌–ಮನೆ ಕೋಣೆಯಲ್ಲೇ ತರಕಾರಿ ಬೆಳೆ’

‘ಸಸ್ಯದ ಬೇರುಗಳಿಗೆ ನೀರಿನ ಮೂಲಕ ಪೋಷಕಾಂಶಗಳನ್ನು ಒದಗಿಸಿ ಬೆಳೆಸುವ ‘ಹೈಡ್ರೋಫೋನಿಕ್ಸ್‌’ ಪ್ರದರ್ಶಿಸಲಾಗುವುದು. ಮನೆಯ ಕೋಣೆಯಲ್ಲೇ ಹೈಡ್ರೋಫೋನಿಕ್ಸ್‌ ಟ್ರೇ ಇಟ್ಟು ಸಸ್ಯಗಳನ್ನು ಬೆಳೆಸಬಹುದು’ ಎಂದು ಪ್ರೊ.ಎಸ್‌.ಎಸ್‌.ಡೊಳ್ಳಿ ತಿಳಿಸಿದರು.

ಈ ವಿಧಾನದಲ್ಲಿ ಒಂದು ಟ್ರೇನಲ್ಲಿ ಮೆಣಸಿವಕಾಯಿ ಪಾಲಕ್‌, ಕೊತ್ತಂಬರಿ ಸಸ್ಯಗಳನ್ನು ಬೆಳೆಸಲಾಗಿದೆ. ತೆಂಗಿನನಾರಿನ ಹುಡಿ, ಪೋಷಕಾಂಶ, ನೀರು ಬಳಸಲಾಗಿದೆ. ಹೊಸದಾಗಿ ಅಭಿವೃದ್ಧಿಪಡಿಸಿರುವ ಲಂಬ ಮಾದರಿ ಟ್ರೇಯನ್ನು ಪ್ರದರ್ಶಿಸಲಾಗುವುದು. ಮನೆಯೊಳಗೆ ಸಣ್ಣ ಪ್ರಮಾಣದಲ್ಲಿ ತರಕಾರಿ ಬೆಳೆಯುವ ಕುರಿತು ಮಾಹಿತಿ ನೀಡಲಾಗುವುದು’ ಎಂದು ತಿಳಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ