
UAEಯಲ್ಲಿ ಉಡುಪಿ ವ್ಯಕ್ತಿಯ ಬರ್ಬರ ಕೊಲೆ:ಕಾರಿನಲ್ಲಿ 9 ತುಂಡುಗಳಾಗಿ ಸಿಕ್ಕ ಮೃತದೇಹ
ಬೆಂಗಳೂರು: ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ವ್ಯಕ್ತಿಯೊಬ್ಬರನ್ನು ಯುಎಇಯ ಶಾರ್ಜಾದಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೊಲೆಯಾದ ಎರಡು ತಿಂಗಳ ಬಳಿಕ ಅವರ ಮೃತದೇಹ 9 ತುಂಡುಗಳಾಗಿ ಕತ್ತರಿಸಿದ ಸ್ಥಿತಿಯಲ್ಲಿ ಕಾರಿನಲ್ಲಿ ಪತ್ತೆಯಾಗಿದೆ ಎಂದು ಮೃತರ ಸಹೋದರ ಮಂಗಳವಾರ ತಿಳಿಸಿದ್ದಾರೆ.
ಕೊಲೆಯಾದ ವ್ಯಕ್ತಿಯನ್ನು ಆಲ್ವಿನ್ ಪ್ರಕಾಶ್ ಕುಂದರ್ ಎಂದು ಗುರುತಿಸಲಾಗಿದೆ. ಇವರು ಕಳೆದ 14 ವರ್ಷಗಳಿಂದ ಶಾರ್ಜಾ ವಿಮಾನ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಅವರು ಸ್ವಗ್ರಾಮಕ್ಕೆ ಬಂದು ಬಳಿಕ ಶಾರ್ಜಾಗೆ ವಾಪಸ್ ಆಗಿದ್ದರು. ಉಡುಪಿಯ ಉದ್ಯಾವರ ಮೂಲದ ಅವರ ಪತ್ನಿ ಟೀನಾ ಕುಂದರ್ ಶಾರ್ಜಾದಲ್ಲಿ ಶಾಲಾ ಶಿಕ್ಷಕಿಯಾಗಿದ್ದು, ಅವರ ಮಗ ಅಲ್ಲಿಯೇ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ ಎಂದು ಆಲ್ವಿನ್ ಪ್ರಕಾಶ್ ಅವರ ಸಹೋದರ ಅನಿಲ್ ಪ್ರಶಾಂತ್ ಕುಂದರ್ ತಿಳಿಸಿದ್ದಾರೆ.
ಘಟನೆಯ ನಂತರ ಆಲ್ವಿನ್ ಅವರ ಪತ್ನಿ ಹಾಗೂ ಮಗ ಕೂಡ ನಾಪತ್ತೆಯಾಗಿದ್ದು, ಇವರ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಅನುಮಾನ ಮೂಡಿಸಿದ ಮೆಸೇಜ್:
ಜುಲೈ 20ರಂದು ಆಲ್ವಿನ್ ಅವರಿಗೆ ಕರೆ ಮಾಡಿದಾಗ ಅವರು ಫೋನ್ ಸ್ವೀಕರಿಸಲಿಲ್ಲ . ಬದಲಾಗಿ 'ನಾನು ಆರಾಮಾಗಿದ್ದೇನೆ' ಎಂಬ ಸಂದೇಶ ಬಂದಿತ್ತು. ನನ್ನ ಸಹೋದರ ಎಂದಿಗೂ ಈ ರೀತಿ ಮೆಸೇಜ್ ಮೂಲಕ ಸಂವಹನ ನಡೆಸುತ್ತಿರಲಿಲ್ಲ. ಒಂದು ವಾರದ ಬಳಿಕ ಮತ್ತೆ ಕರೆ ಮಾಡಿದಾಗಲೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಏನೋ ಅನಾಹುತ ನಡೆದಿದೆ ಎಂದು ಶಂಕಿಸಿ ಶಾರ್ಜಾದಲ್ಲಿದ್ದ ಆಲ್ವಿನ್ ಅವರ ಸಹಪಾಠಿ ಮನೋಹರ್ ಅವರನ್ನು ಸಂಪರ್ಕಿಸಿ, ಮನೆಗೆ ಹೋಗಿ ನೋಡುವಂತೆ ಕೋರಿದ್ದೆ ಎಂದು ಅನಿಲ್ ವಿವರಿಸಿದ್ದಾರೆ.
ಮನೋಹರ್ ಅವರು ಆಲ್ವಿನ್ ಅವರ ಫ್ಲ್ಯಾಟ್‌ಗೆ ತೆರಳಿದಾಗ, 'ಆಲ್ವಿನ್ ಕುಟುಂಬ ಸಮೇತ ಭಾರತಕ್ಕೆ ತೆರಳಿದ್ದಾರೆ' ಎಂದು ಕಟ್ಟಡದ ಸೆಕ್ಯುರಿಟಿ ಗಾರ್ಡ್ ಹೇಳಿದ್ದಾರೆ. ತದನಂತರ ಆಲ್ವಿನ್ ಕೆಲಸ ಮಾಡುತ್ತಿದ್ದ ಕಂಪನಿಯ ಎಚ್‌ಆರ್ (ಮಾನವ ಸಂಪನ್ಮೂಲ) ವಿಭಾಗವನ್ನು ಸಂಪರ್ಕಿಸಿದಾಗಲೂ ಅವರು ಭಾರತಕ್ಕೆ ತೆರಳಿರುವುದಾಗಿ ತಿಳಿಸಿದ್ದರು ಎಂದೂ ಅವರು ಹೇಳಿದ್ದಾರೆ.
ಪಾಸ್‌ಪೋರ್ಟ್ ತಪಾಸಣೆಯಿಂದ ಸಿಕ್ಕ ಸುಳಿವು:
ಆಲ್ವಿನ್ ಭಾರತಕ್ಕೆ ಬಂದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಸಹೋದರ ಅನಿಲ್, ಮರುದಿನ ಮತ್ತೆ ಕಂಪನಿಯನ್ನು ಸಂಪರ್ಕಿಸಿ ಅವರ ಪಾಸ್‌ಪೋರ್ಟ್ ವಿವರಗಳನ್ನು ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ. ಕಂಪನಿಯು ಪಾಸ್‌ಪೋರ್ಟ್ ದಾಖಲೆಗಳನ್ನು ತಪಾಸಣೆ ನಡೆಸಿದಾಗ, ಆಲ್ವಿನ್ ಶಾರ್ಜಾದಿಂದ ಎಲ್ಲೂ ನಿರ್ಗಮಿಸಿಲ್ಲ ಎಂಬ ಸತ್ಯ ಹೊರಬಿದ್ದಿದೆ. ತಕ್ಷಣವೇ ಶಾರ್ಜಾ ಪೊಲೀಸರಿಗೆ ನಾಪತ್ತೆ ದೂರು ದಾಖಲಿಸಲಾಯಿತು.
ತನಿಖೆಯ ವೇಳೆ, ಒಮಾನ್ ಮಾರ್ಗದ ಬಳಿ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಕಾರಿನ ಒಳಗೆ ಆಲ್ವಿನ್ ಪ್ರಕಾಶ್ ಅವರ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಒಂಬತ್ತು ತುಂಡುಗಳಾಗಿ ಕತ್ತರಿಸಿ, ಎರಡು ಬ್ಯಾಗ್‌ಗಳಲ್ಲಿ ತುಂಬಿಡಲಾಗಿತ್ತು ಎಂದು ಅನಿಲ್ ತಿಳಿಸಿದ್ದಾರೆ.
ಸೋಮವಾರವಷ್ಟೇ ಕುಟುಂಬಕ್ಕೆ ಮರಣೋತ್ತರ ಪರೀಕ್ಷೆಯ ವರದಿ ಸಿಕ್ಕಿದ್ದು, ತಕ್ಷಣವೇ ಉಡುಪಿಯ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿರುವುದಾಗಿ ಅನಿಲ್ ಹೇಳಿದ್ದಾರೆ.
ಈ ಭೀಕರ ಕೊಲೆಯ ಹಿಂದಿನ ಹಿನ್ನೆಲೆ ಹಾಗೂ ಉದ್ದೇಶ ಏನೆಂಬುದು ಇನ್ನು ತಿಳಿದುಬಂದಿಲ್ಲ.
ಪತ್ನಿ, ಮಗ ನಾಪತ್ತೆ – ಸಂಶಯದ ಸುಳಿ:
ವ್ಯಕ್ತಿಯೊಬ್ಬನ ಎದೆಗೆ ಇರಿದು, ದೇಹವನ್ನು ಒಂಬತ್ತು ತುಂಡುಗಳಾಗಿ ಕತ್ತರಿಸಿರುವುದನ್ನು ನೋಡಿದರೆ ಅದನ್ನು ಯಾರೋ ಹಂತಕರೇ ಮಾಡಿರಬೇಕು ಎಂದು ಅನಿಲ್ ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅವರಿದ್ದ ಕಟ್ಟಡದಿಂದ ಇಬ್ಬರು ಪುರುಷರು ಹಾಗೂ ಒಬ್ಬ ಮಹಿಳೆ ಹೊರಹೋಗುತ್ತಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದ್ದಾಗಿ ಮಾಹಿತಿ ನೀಡಿದ್ದಾರೆ.
ಆಲ್ವಿನ್ ಪತ್ನಿ ಟೀನಾ ಕುಂದರ್ ಮತ್ತು ಮಗ ಎಲ್ಲಿದ್ದಾರೆ ಎಂಬುದು ತಿಳಿದಿಲ್ಲ. ಒಂದು ವೇಳೆ ಅವರು ಭಾರತಕ್ಕೆ ಬಂದಿದ್ದರೆ, ಗಂಡನಿಗೆ ಏನಾಯಿತು ಎಂಬುದು ಆಕೆಗೆ ತಿಳಿದಿರಲೇಬೇಕು. ಆದರೆ ಅಧಿಕೃತ ಎಫ್‌ಐಆರ್ ದಾಖಲಾಗದೆ ಪಾಸ್‌ಪೋರ್ಟ್ ವಿವರಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಅನಿಲ್ ಅಳಲು ತೋಡಿಕೊಂಡಿದ್ದಾರೆ.
ಸದ್ಯ ಶಾರ್ಜಾ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು, ಕೊಲೆಯ ಹಿಂದಿನ ನೈಜ ಕಾರಣ ಹಾಗೂ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.