
OTT ಬಿಡುಗಡೆಗೆ ಸಿದ್ಧವಾಯ್ತಾ ಟಾಕ್ಸಿಕ್? ಸ್ಟ್ರೀಮಿಂಗ್ ಎಲ್ಲಿ, ಯಾವಾಗ?
ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಟಾಕ್ಸಿಕ್’ ಸಿನಿಮಾ ಒಟಿಟಿಯಲ್ಲಿ ಪ್ರಸಾರವಾಗುವ ದಿನಾಂಕ ಹೊರಬಿದ್ದಿದೆ. ಆಗಸ್ಟ್ 26ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಟಾಕ್ಸಿಕ್ ಸಿನಿಮಾ ವೀಕ್ಷಿಸಿದ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಲ್ಲದೇ ಬಾಕ್ಸ್ ಆಫೀಸ್‌ನಲ್ಲಿ ಟಾಕ್ಸಿಕ್ ಸಿನಿಮಾ ಹಿನ್ನಡೆ ಅನುಭವಿಸಿತ್ತು. ಹೀಗಾಗಿ ಈಗ ಎಲ್ಲರ ಕಣ್ಣು ಚಿತ್ರದ ಒಟಿಟಿ ಬಿಡುಗಡೆ ಮೇಲೆ ನೆಟ್ಟಿದೆ.
ಸೆಪ್ಟೆಂಬರ್ 25ರಿಂದ ಜೀ5ನಲ್ಲಿ 'ಟಾಕ್ಸಿಕ್' ಪ್ರಸಾರ?
123 ತೆಲುಗು ವರದಿಯ ಪ್ರಕಾರ, ‘ಟಾಕ್ಸಿಕ್’ ಸಿನಿಮಾ ಸೆಪ್ಟೆಂಬರ್ 25ರಂದು ಜೀ5ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ವೀಕ್ಷಣೆಗೆ ಸಿಗಲಿದೆ ಎನ್ನಲಾಗಿದೆ. ಒಟಿಟಿಯಲ್ಲಿ ಸಿನಿಮಾ ಬಿಡುಗಡೆ ದಿನಾಂಕದ ಕುರಿತು ನಿರ್ಮಾಪಕರಾಗಲಿ ಅಥವಾ ಜೀ5 ಸಂಸ್ಥೆಯಾಗಲಿ ಇನ್ನೂ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿಲ್ಲ.
‘ಬಾಲಿವುಡ್ ಹಂಗಾಮಾ’ ವರದಿಯಂತೆ, ಟಾಕ್ಸಿಕ್ ಸಿನಿಮಾ ಬಿಡುಗಡೆಗೂ ಮುನ್ನ ಪ್ರಮುಖ ಒಟಿಟಿ ಸಂಸ್ಥೆಯೊಂದು ₹150 ಕೋಟಿ ಆಫರ್ ನೀಡಿತ್ತು. ಆದರೆ ಚಿತ್ರಮಂದಿರಗಳಲ್ಲಿ ಟಾಕ್ಸಿಕ್‌ಗೆ ದೊಡ್ಡ ಮಟ್ಟದ ಯಶಸ್ಸು ಸಿಗಲಿದೆ ಎಂಬ ಭರವಸೆಯಲ್ಲಿದ್ದ ಯಶ್ ಹಾಗೂ ಚಿತ್ರತಂಡವು ₹200 ಕೋಟಿಗೂ ಹೆಚ್ಚಿನ ಬೇಡಿಕೆ ಇಟ್ಟಿತ್ತು. ಆದರೆ ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಹಿನ್ನಡೆ ಅನುಭವಿಸಿದ ಬಳಿಕ, ಒಟಿಟಿ ಸಂಸ್ಥೆಗಳು ಎಲ್ಲಾ ಭಾಷೆಗಳ ಡಿಜಿಟಲ್ ಹಕ್ಕುಗಳಿಗೆ ಕೇವಲ ₹30 ಕೋಟಿ ನೀಡಲು ಮುಂದಾಗಿತ್ತು. ಹೀಗಾಗಿ ನಷ್ಟದ ಪ್ರಮಾಣ ಕಡಿಮೆ ಮಾಡಲು ಒಟಿಟಿಗಾಗಿ ಸಿನಿಮಾವನ್ನು ಸಂಪೂರ್ಣವಾಗಿ ಹೊಸದಾಗಿ ಎಡಿಟ್ ಮಾಡಲು ನಿರ್ಮಾಪಕರು ಚಿಂತಿಸುತ್ತಿದ್ದಾರೆ ಎನ್ನಲಾಗಿತ್ತು.
ಆಗಸ್ಟ್ 26ರಂದು ಬಿಡುಗಡೆಯಾದ ಟಾಕ್ಸಿಕ್ ಇಲ್ಲಿಯವರೆಗೆ ವಿಶ್ವದಾದ್ಯಂತ ಕೇವಲ ಒಟ್ಟು ₹337 ಕೋಟಿ ಗಳಿಸಿದೆ. ಈ ಸಿನಿಮಾದಲ್ಲಿ ಯಶ್ ಜೊತೆಗೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.