
Meta: ಮಕ್ಕಳ ಸುರಕ್ಷತೆ; ಕೇಂದ್ರದ ಒತ್ತಡಕ್ಕೆ ಮಣಿದ ಇನ್‌ಸ್ಟಾಗ್ರಾಮ್ - ಫೇಸ್‌ಬುಕ್, ಇನ್ಮುಂದೆ ಭಾರತದಲ್ಲೂ ಅಮೆರಿಕ ಮಾದರಿ!
ಭಾರತದ ಮಕ್ಕಳ ಸುರಕ್ಷತ ವಿಚಾರದಲ್ಲಿ ಮೆಟಾ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಭಾರತದಲ್ಲಿ 16 ವರ್ಷದ ಒಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬಳಕೆ ನಿಷೇಧಿಸಬೇಕು ಎನ್ನುವ ವಿಚಾರವು ಚರ್ಚೆಯಲ್ಲಿರುವಾಗಲೇ ಈ ರೀತಿಯ ಮಹತ್ವದ ನಿರ್ಧಾರವೊಂದನ್ನು ಮೆಟಾ ಪ್ರಕಟಿಸಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಇತರ ಹಾನಿಕಾರಕ ವಿಷಯಗಳ ವಿರುದ್ಧ ಕೇಂದ್ರ ಬಿಜೆಪಿ ಸರ್ಕಾರವು ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಇದರ ನಡುವೆ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ವಿಷಯಗಳನ್ನು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ನಿರ್ವಹಿಸುವ ಸೈಬರ್ ಅಪರಾಧ ಪೋರ್ಟಲ್‌ಗೆ ನೇರವಾಗಿ ವರದಿ ಮಾಡುವ ವಿಚಾರದಲ್ಲಿ ಮೆಟಾ ಸಮ್ಮತಿ ಸೂಚಿಸಿದೆ. ಕೇಂದ್ರ ಸರ್ಕಾರವು ಸೋಶಿಯಲ್ ಮೀಡಿಯಾಗಳಿಗೆ ಬಲವಾದ ಸುರಕ್ಷತೆ ಮತ್ತು ಹೆಚ್ಚಿನ ಹೊಣೆಗಾರಿಕೆ ನಿಭಾಯಿಸುವಂತೆ ಒತ್ತಾಯಿಸುತ್ತಿದೆ.
ಇದೀಗ ಈ ವಿಚಾರದಲ್ಲಿ ಮೆಟಾ ಒಪ್ಪಿಕೊಂಡಿದ್ದು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಇನ್ನಿತರ ಹಾನಿಕಾರಕ ವಿಷಯಗಳನ್ನು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದೊಂದಿಗೆ ಹಂಚಿಕೊಳ್ಳುವುದಾಗಿ ಹೇಳಿದೆ. ಸೋಶಿಯಲ್ ಮೀಡಿಯಾದಲ್ಲಿ ಮಕ್ಕಳನ್ನು ರಕ್ಷಿಸುವುದು ಕಂಪನಿಯ ಆದ್ಯತೆಯಾಗಿದೆ ಎಂದು ಮೆಟಾದ ವಕ್ತಾರರು ಹೇಳಿದ್ದಾರೆ. ಈ ಮಾದರಿಯ ಅಪರಾಧಗಳಲ್ಲಿ ಅಪರಾಧಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ನಾವು ಸರ್ಕಾರದೊಂದಿಗೆ ಕೆಲಸ ಮಾಡಲು ಬದ್ಧರಾಗಿದ್ದೇವೆ ಎಂದು ಮೆಟಾ ಹೇಳಿದೆ.
Meta: ಇನ್ಮುಂದೆ ಭಾರತದಲ್ಲೂ ಅಮೆರಿಕ ಮಾದರಿ!
ಮುಂದುವರಿದು ಭಾರತದಲ್ಲಿ ಈ ಹಾನಿಯನ್ನು ಎದುರಿಸಲು ನಮ್ಮ ಪ್ರಯತ್ನಗಳನ್ನು ಸಾಮೂಹಿಕವಾಗಿ ಬಲಪಡಿಸುವ ಉದ್ದೇಶದಿಂದ ಇನ್ಮುಂದೆ ಮೆಟಾ ಮಕ್ಕಳ ಸುರಕ್ಷತಾ ವಿಷಯಗಳನ್ನು ನೇರವಾಗಿ I4C ನಿರ್ವಹಿಸುವ ಸೈಬರ್ ಅಪರಾಧ ಪೋರ್ಟಲ್‌ಗೆ ವರದಿ ಮಾಡಲಿದೆ. ಅಮೆರಿಕದ ಮೆಟಾ ಸಂಸ್ಥೆ, ಭಾರತೀಯ ಕಾನೂನು ಜಾರಿ ಸಂಸ್ಥೆಗಳಿಗೆ ನೇರವಾಗಿ ವರದಿ ಮಾಡುವ ವ್ಯವಸ್ಥೆ ಆರಂಭಿಸಲು ಮುಂದಾಗಿರುವ ಮೊದಲ ಪ್ರಮುಖ ತಂತ್ರಜ್ಞಾನ ಕಂಪನಿಯಾಗಿದೆ. ಸದ್ಯ, ಮೆಟಾ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ಪ್ರಕರಣಗಳನ್ನು ಅಮೆರಿಕದಲ್ಲಿರುವ ಕಾಣೆಯಾದ ಮತ್ತು ಶೋಷಣೆಗೆ ಒಳಗಾದ ಮಕ್ಕಳ ರಾಷ್ಟ್ರೀಯ ಕೇಂದ್ರಕ್ಕೆ ವರದಿ ಮಾಡುತ್ತಿದೆ. ಇನ್ಮುಂದೆ ಇದೇ ಮಾದರಿಯನ್ನು ಭಾರತದಲ್ಲಿಯೂ ಅನುಸರಿಸಲಿದೆ.
ಮಂಗಳವಾರ (ಸೆಪ್ಟೆಂಬರ್ 15, 2026) ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ವಿಷಯಗಳನ್ನು ಸೂಕ್ತ ಕಾನೂನು ಜಾರಿ ಸಂಸ್ಥೆಗಳಿಗೆ ವರದಿ ಮಾಡಲು ಮೆಟಾ ಒಪ್ಪಿಕೊಂಡಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಭಾರತದಲ್ಲಿ ಕಾರ್ಯನಿರ್ವಹಿಸುವ ಯಾವುದೇ ಸೋಶಿಯಲ್ ಮೀಡಿಯಾ ವೇದಿಕೆಗೆ ಮಕ್ಕಳ ಆನ್‌ಲೈನ್ ಸುರಕ್ಷತೆ ಅತ್ಯಂತ ಮುಖ್ಯವಾದ ವಿಷಯವಾಗಿದ್ದು, ಇದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಆನ್‌ಲೈನ್‌ನಲ್ಲಿ ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಲು ವಿಫಲವಾದ ಸೋಶಿಯಲ್ ಮೀಡಿಯಾಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಹಾನಿಕಾರಕ ವಿಷಯ ಮತ್ತು ಚಟುವಟಿಕೆಯಿಂದ ಅಪ್ರಾಪ್ತ ವಯಸ್ಕರನ್ನು ರಕ್ಷಿಸುವ ಉದ್ದೇಶದಿಂದ ಸೋಶಿಯಲ್ ಮೀಡಿಯಾ / ಸಂಸ್ಥೆಗಳು ಜವಾಬ್ದಾರಿಯುತವಾಗಿ ವರ್ತಿಸಬೇಕು ಎನ್ನುವ ಕಠಿಣ ನಿಲುವನ್ನು ಹಿಂದಿದೆ. ಅಂತಹ ವಿಷಯವನ್ನು ಪೂರ್ವಭಾವಿಯಾಗಿ ಗುರುತಿಸಿ ತೆಗೆದುಹಾಕುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಇತರ ಆನ್‌ಲೈನ್ ವೇದಿಕೆಗಳೊಂದಿಗೆ ಸಹ ತೊಡಗಿಸಿಕೊಂಡಿದೆ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ, ಮಕ್ಕಳ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಕಾನೂನು ಜಾರಿ ಸಂಸ್ಥೆಗಳಿಗೆ ವರದಿ ಮಾಡುವ ಮೆಟಾದ ಪ್ರತಿಜ್ಞೆಯು ಮಕ್ಕಳಿಗೆ ವೇದಿಕೆಗಳನ್ನು ಸುರಕ್ಷಿತವಾಗಿಸುವ ಮೊದಲ ಹೆಜ್ಜೆಯಾಗಿದೆ ಮತ್ತು ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ. ಹಾನಿಕಾರಕ ವಿಷಯವನ್ನು ನಿಗ್ರಹಿಸಲು ಭಾರತ ಸರ್ಕಾರವು ಸಾಮಾಜಿಕ ಮಾಧ್ಯಮ ವೇದಿಕೆಗಳೊಂದಿಗೆ ನಿರಂತರವಾಗಿ ತೊಡಗಿಸಿಕೊಂಡಿದೆ ಮತ್ತು ಎಲ್ಲಾ ವೇದಿಕೆಗಳು ಅಂತಹ ವಿಷಯವನ್ನು ಪೂರ್ವಭಾವಿಯಾಗಿ ಗುರುತಿಸಿ ತೆಗೆದುಹಾಕುವುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.