
BMTC: ಬೆಂಗಳೂರಿಗೆ ಗುಡ್ ನ್ಯೂಸ್; 4,500 ಎಲೆಕ್ಟ್ರಿಕ್ ಬಸ್‌ಗಳ ಸೇರ್ಪಡೆಗೆ ಸರ್ಕಾರದ ಅನುಮೋದನೆ
ಬೆಂಗಳೂರಿನ ಬಿಎಂಟಿಸಿ ಪ್ರಯಾಣಿಕರಿಗೆ - ನಮ್ಮ ಬೆಂಗಳೂರಿಗೆ ಶುಭ ದಿನ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದ್ದಾರೆ. ಮುಂದಿನ ಒಂದೆರಡು ವರ್ಷಗಳಲ್ಲಿ 4,500 ವಿದ್ಯುತ್ (ಇವಿ) ಬಸ್‌ಗಳನ್ನು ಸೇರ್ಪಡೆಗೊಳಿಸುವ ಬಿಎಂಟಿಸಿ ಪ್ರಸ್ತಾವನೆಗೆ ಸೆಪ್ಟೆಂಬರ್ 3ರಂದು ಸರ್ಕಾರ ಅನುಮೋದನೆ ನೀಡಿದೆ. ಈ ಕ್ರಮ ಬೆಂಗಳೂರಿನಲ್ಲಿ ಬಸ್ ಸೇವೆಗಳನ್ನು ವಿಸ್ತರಿಸಲು ತೆಗೆದುಕೊಂಡ ಅತ್ಯಂತ ದೊಡ್ಡ ನಿರ್ಧಾರವಾಗಿದೆ ಎಂದು ಸಚಿವ ಕೃಷ್ಣಬೈರೇಗೌಡ ಅವರು ಹೇಳಿದ್ದಾರೆ.
ಸುಮಾರು 7,000 ಬಸ್‌ಗಳನ್ನು ಹೊಂದಿರುವ ಬೆಂಗಳೂರು, ಈಗಾಗಲೇ ದೇಶದಲ್ಲೇ ಅತಿ ದೊಡ್ಡ ನಗರ ಬಸ್ ಸಮೂಹವನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ನಾವು ಬಸ್ ಸೇವೆಯಲ್ಲಿ ನಂಬರ್ 1 ಆಗಿ ಮುಂದುವರಿಯುವುದು ಮಾತ್ರವಲ್ಲದೆ, ಸಾರ್ವಜನಿಕ ಸಾರಿಗೆಯ ಗುಣಮಟ್ಟ ಸೇವೆ ಮತ್ತು ತಲುಪಬೇಕಾದ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯ ಬಸ್ ಗಳ ಲಭ್ಯತೆಯನ್ನು ಸುಧಾರಿಸುವಲ್ಲಿಯೂ ಈಗ ಪ್ರಮುಖ ಮುನ್ನಡೆ ಸಾಧಿಸಲಿದ್ದೇವೆ.
BMTC: ದೃಢವಾದ ಭವಿಷ್ಯದ ಪ್ರಗತಿಯ ಹೆಜ್ಜೆ
* ಸಮೂಹ ಸಾರಿಗೆ ಮತ್ತು ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವುದು
* ಸಂಚಾರ ದಟ್ಟಣೆಯನ್ನು ( ಟ್ರಾಫಿಕ್ ಕಂಟ್ರೋಲ್) ಕಡಿಮೆ ಮಾಡುವುದು.
* ಬೆಂಗಳೂರಿನಾದ್ಯಂತ ಉತ್ತಮ ಸಂಪರ್ಕವನ್ನು ಕಲ್ಪಿಸುವುದು.
* ಬೆಂಗಳೂರಿನ ಸಾಮಾನ್ಯ ಜನರಿಗೆ ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಸುಲಭ ಮತ್ತು ಅನುಕೂಲಕರವಾಗಿಸುವುದು
ಹೆಚ್ಚು ಬಸ್‌ಗಳು. ಹೆಚ್ಚಿನ ಸಂಪರ್ಕ. ಸ್ವಚ್ಛ ಸಾರಿಗೆ. ಉತ್ತಮ ಬೆಂಗಳೂರು. ಬಿಎಂಟಿಸಿಗೆ ಮತ್ತು ಪ್ರತಿದಿನದ ಸಂಚಾರಕ್ಕಾಗಿ ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿರುವ ಲಕ್ಷಾಂತರ ಬೆಂಗಳೂರು ಪ್ರಯಾಣಿಕರಿಗೆ ಇದು ಬೃಹತ್ ಬೋನಸ್ ಆಗಿದೆ ಎಂದು ಸಚಿವ ಕೃಷ್ಣಬೈರೇಗೌಡ ಅವರು ಹೇಳಿದ್ದಾರೆ.
ಬೆಂಗಳೂರಿನ ಈ ಭಾಗದಲ್ಲಿ 300.91 ಕಿ. ಮೀ. ಪಾದಚಾರಿ ಮಾರ್ಗ ಒತ್ತುವರಿ ತೆರವು
ಬೆಂಗಳೂರಿನ ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಜುಲೈ 1ರಿಂದ ಸೆಪ್ಟೆಂಬರ್ 3ರವರೆಗೆ ಒಟ್ಟು ನಿಗದಿತ 332.21 ಕಿ.ಮೀ ಉದ್ದದ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯ ಪೈಕಿ ವೈಟ್ ಟಾಪಿಂಗ್, ಪಾದಚಾರಿ ಮಾರ್ಗ ನಿರ್ಮಾಣ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳು ನಡೆಯುತ್ತಿರುವ 31.30 ಕಿ.ಮೀ ಹೊರತುಪಡಿಸಿ, ಉಳಿದ 300.91 ಕಿ. ಮೀ. ತೆರವು ಕಾರ್ಯಾಚರಣೆ ಪೂರ್ಣವಾಗಿದೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಾದಚಾರಿಗಳಿಗೆ ಸುರಕ್ಷಿತ, ಸುಗಮ ಹಾಗೂ ಅಡೆತಡೆಯಿಲ್ಲದ ಸಂಚಾರ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಿರಂತರವಾಗಿ ಕೈಗೊಳ್ಳಲಾಗಿತ್ತು ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಂದುವರಿದು ದೇವಿ ನಗರ ಮುಖ್ಯ ರಸ್ತೆ - ವ್ಯಾಸ ಶಾಲೆಯಿಂದ ರೈಲ್ವೆ ಗೇಟ್ ಮೂಲಕ ಆರ್‌ಆರ್‌ವರೆಗೆ, ಆರ್‌ಎಂವಿ ಕ್ಲಸ್ಟರ್ಸ್ ಅಪಾರ್ಟ್‌ಮೆಂಟ್ ಮಾರ್ಗದಲ್ಲಿ 1 ಜೆಸಿಬಿ, 4 ಟ್ರಾಕ್ಟರ್ ಹಾಗೂ 15 ಸಿಬ್ಬಂದಿಯಿಂದ, 2 ತಳ್ಳುವ ಗಾಡಿಗಳು, 10 ಎಸಿ ಶೀಟ್‌ಗಳು/ಕ್ಯಾನೋಪಿಗಳು, 5 ಮೆಟ್ಟಿಲುಗಳು/ ರ್ಯಾಂಪ್‌ಗಳು, 1 ಜಾಹೀರಾತು ಕಂಬ/ನಾಮಫಲಕ ಮತ್ತು 10 ಟನ್ ಕಟ್ಟಡ ತ್ಯಾಜ್ಯ/ಮಣ್ಣು ತೆರವುಗೊಳಿಸುವುದರ ಮೂಲಕ 1.60 ಕಿ.ಮೀ. ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ.
ಒಟ್ಟು ಕಾರ್ಯಾಚರಣೆಯ ಪ್ರಗತಿ
2026ರ ಜುಲೈ 1ರಿಂದ ಸೆಪ್ಟೆಂಬರ್ 3ರವರೆಗೆ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು ಪೂರ್ಣಗೊಳಿಸಬೇಕಾದ 332.21 ಕಿ.ಮೀ ಉದ್ದದ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ವೈಟ್ ಟಾಪಿಂಗ್, ಪಾದಚಾರಿ ಮಾರ್ಗ ನಿರ್ಮಾಣ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳು ನಡೆಯುತ್ತಿರುವ 31.30 ಕಿ.ಮೀ ಕೀ.ಮೀ ಹೊರತುಪಡಿಸಿ, ಉಳಿದ 300.91 ಕಿ. ಮೀ. ಒತ್ತುವರಿ ತೆರವು ಕಾರ್ಯಾಚರಣೆಯನ್ನು ಪೂರ್ಣಗೊಳಿಸಲಾಗಿದೆ.
ಕಾರ್ಯಾಚರಣೆಯ ಪ್ರಮುಖಾಂಶಗಳು
* 300.91 ಕಿ.ಮೀ. ಪಾದಚಾರಿ ಮಾರ್ಗ ಅತಿಕ್ರಮಣ ಮುಕ್ತ
* 695 ಅಂಗಡಿಗಳು/ಪೆಟ್ಟಿ ಅಂಗಡಿಗಳು ತೆರವು
* 922 ತಳ್ಳುವ ಗಾಡಿಗಳು ತೆರವು
* 2,007 ಎಸಿ ಶೀಟ್‌ಗಳು/ಕ್ಯಾನೋಪಿಗಳು ತೆರವು
* 1,811 ಮೆಟ್ಟಿಲುಗಳು ಹಾಗೂ ರ್ಯಾಂಪ್‌ಗಳು ತೆರವು
* 1,859 ಜಾಹೀರಾತು ಕಂಬಗಳು ಹಾಗೂ ನಾಮಫಲಕಗಳು ತೆರವು
* 70 ತಾತ್ಕಾಲಿಕ/ಶಾಶ್ವತ ಶೆಡ್‌ಗಳು ತೆರವು
* 2,251.20 ಟನ್ ಕಟ್ಟಡ ತ್ಯಾಜ್ಯ ಹಾಗೂ ಮಣ್ಣು ತೆರವು
* 44.60 ಕಿ.ಮೀ. ಪಾದಚಾರಿ ಮಾರ್ಗ ದುರಸ್ತಿ
ನಗರದಲ್ಲಿ ಸುರಕ್ಷಿತ ಮತ್ತು ಸುಗಮ ಪಾದಚಾರಿ ಸಂಚಾರಕ್ಕೆ ಅಗತ್ಯ ಮೂಲಸೌಕರ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರು ಉತ್ತರ ನಗರ ಪಾಲಿಕೆಯು ಈಗಾಗಲೇ ಒತ್ತುವರಿ ತೆರವುಗೊಳಿಸಿದ ಸ್ಥಳದಲ್ಲಿ ಪುನಃ ಒತ್ತುವರಿ ಮಾಡಿರುವುದು ಕಂಡುಬಂದಲ್ಲಿ ದುಬಾರಿ ದಂಡದೊಂದಿಗೆ ನಿಯಮಾನುಸಾರ ಶಿಸ್ತು ಕಾನೂನು ಕ್ರಮ ವಹಿಸಲಾಗುವುದು ಎಂದು ನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.