
ರಾಜ್ಯದ ಹಲವೆಡೆ ಬಿರುಸಿನ ಮಳೆ: ಸಿಡಿಲು ಬಡಿದು ನಾಲ್ವರ ಸಾವು,ಹಲವು ಮನೆಗಳಿಗೆ ಹಾನಿ
ಹುಬ್ಬಳ್ಳಿ/ಕಲಬುರಗಿ/ ಮೈಸೂರು: ಕಿತ್ತೂರು ಕರ್ನಾಟಕ ವ್ಯಾಪ್ತಿಯ ಧಾರವಾಡ, ವಿಜಯಪುರ ಬೆಳಗಾವಿ ಜಿಲ್ಲೆಗಳಲ್ಲಿ ಮತ್ತು ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಕಲಬುರಗಿ, ಬಳ್ಳಾರಿ, ವಿಜಯನಗರ ಜಿಲ್ಲೆಯ ಬಹುತೇಕ ಕಡೆ ಹಾಗೂ ಹಳೇ ಮೈಸೂರು ಭಾಗದಲ್ಲಿ ಭಾನುವಾರ ತಡರಾತ್ರಿ ಮತ್ತು ಸೋಮ ವಾರ ಬೆಳಿಗ್ಗೆ ಉತ್ತಮ ಮಳೆಯಾಯಿತು.
ಬಿಸಿಲಿನಿಂದ ಬಾಡಿದ್ದ ಬೆಳೆಗಳಲ್ಲಿ ಜೀವಕಳೆಬಂದಿದೆ.
ಬೆಳಗಾವಿ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಸಿಡಿಲು ಬಡಿದು ಒಟ್ಟು ನಾಲ್ವರು ಮೃತಪಟ್ಟಿದ್ದಾರೆ. ಚಾಮರಾಜ ನಗರ ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿ ಹಲವು ಮನೆಗಳಿಗೆ ಹಾನಿಯಾಗಿದ್ದು, ಜಾನುವಾರು ಮೃತಪಟ್ಟಿವೆ. ಮೀಣ್ಯ ಗ್ರಾಮದಲ್ಲಿ ಮನೆಯ ಚಾವಣಿ ಕುಸಿದು ಇಬ್ಬರು ಮಕ್ಕಳಿಗೆ ಗಾಯವಾಗಿದೆ.
ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲ್ಲೂಕಿನ ಶ್ರೀರಂಗಪುರ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಸಿಡಿಲು ಬಡಿದು ಮದ್ಲೂರ ಗ್ರಾಮದ ರೈತ ಕೇದಾರಪ್ಪ ಮಲ್ಲಪ್ಪ ಗುರ್ಲಹೊಸೂರ (47) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಸಂಬಂಧಿ ಭೀಮಪ್ಪ ಕೇದಾರಪ್ಪ ಗುರ್ಲ ಹೊಸೂರ (45) ಗಾಯಗೊಂಡಿದ್ದಾರೆ.
ಕಮಲಾಪುರ ತಾಲ್ಲೂಕಿನ ನಾಗೂರು ಗ್ರಾಮದಲ್ಲಿ ಸಿಡಿಲು ಬಡಿದು ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೊಲದ ಮಾಲೀಕನ ಪತ್ನಿ ಲಕ್ಷ್ಮಿ ಬಸಯ್ಯ ಗುತ್ತೇದಾರ (45) ಹಾಗೂ ಅವರ ಬಳಿ ಕೂಲಿಗೆ ಹೋಗಿದ್ದ ಸೈಜಾದಬೀ ಫತ್ರುಸಾಬ್ (60) ಮೃತರು.
ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಗಂಗನಾಳ ಗ್ರಾಮದ ಮಡಿವಾಳ್ವೇಶ್ವರ ದೇವಸ್ಥಾನದ ಗೋಪುರ ಸಿಡಿಲು ಬಡಿದಿದ್ದರಿಂದ ಧ್ವಂಸ ಗೊಂಡಿದೆ. ದೇವಸ್ಥಾನ ಬಳಿಯಿದ್ದ ಆಶಾ ಕಾರ್ಯಕರ್ತೆ ಸಂಗಮ್ಮ ಗಾಯಗೊಂಡಿದ್ದಾರೆ.
ಉತ್ತಮ ಮಳೆ: ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ಅಣ್ಣಿಗೇರಿ, ನವಲಗುಂದ ಭಾಗದಲ್ಲಿ ಮಳೆಯಾಯಿತು. ವಿಜಯಪುರ ನಗರ ಸೇರಿ ಜಿಲ್ಲೆಯ ಇಂಡಿ, ಸಿಂದಗಿ, ತಾಳಿಕೋಟೆ, ಆಲಮೇಲ, ತಿಕೋಟಾ, ದೇವರಹಿಪ್ಪರಗಿ ತಾಲ್ಲೂಕು ವ್ಯಾಪ್ತಿಯಲ್ಲಿ, ಬೆಳಗಾವಿ ಜಿಲ್ಲೆಯ ಗೋಕಾಕ, ಸವದತ್ತಿ ಮತ್ತು ಹುಕ್ಕೇರಿ ಪಟ್ಟಣದ ಸುತ್ತಮುತ್ತ ಉತ್ತಮ ಮಳೆಯಾಯಿತು.
ಗದಗ ನಗರ ಸೇರಿ ಜಿಲ್ಲೆಯ ನರೇಗಲ್ ಮತ್ತು ಮುಂಡರಗಿಯಲ್ಲಿ ಭಾರಿ ಮಳೆಯಾಗಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕು, ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ.
ಕಲಬುರಗಿ ಜಿಲ್ಲೆಯಲ್ಲಿ ಕಲಬುರಗಿ ನಗರದ, ಕಮಲಾಪುರ, ಕಾಳಗಿ, ಜೇವರ್ಗಿ, ಆಳಂದ ಸೇರಿದಂತೆ ಹಲವೆಡೆ ಹದವಾದ ಮಳೆ ಸುರಿದಿದೆ.
ಯಾದಗಿರಿ ನಗರ ಸೇರಿದಂತೆ ಹಲವೆಡೆ ಗುಡುಗು ಸಹಿತ ಜೋರು ಮಳೆಯಾಗಿದೆ. ಕೊಪ್ಪಳ ಜಿಲ್ಲೆಯ ಅಳವಂಡಿ ಸೇರಿದಂತೆ ಹಲವೆಡೆ ಬಿರುಸಿನ ಮಳೆಯಾಗಿದೆ. ಬಾಗಲಕೋಟೆ ಜಿಲ್ಲೆಯ ಬೀಳಗಿ, ಬಾದಾಮಿ ತಾಲ್ಲೂಕಿನಲ್ಲಿ ಕೆಲಕಾಲ ಮಳೆಯಾಗಿದೆ.
ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು ಜಿಲ್ಲೆಗಳಲ್ಲಿ ಭಾನುವಾರ ತಡರಾತ್ರಿ ಹಾಗೂ ಸೋಮವಾರ ಉತ್ತಮ ಮಳೆಯಾಗಿದೆ.
ಮಹದೇಶ್ವರ ಬೆಟ್ಟದಲ್ಲಿ ಕೊಟ್ಟಿಗೆಗೆ ವಿದ್ಯುತ್ ಪ್ರವಹಿಸಿ ಮೂರು ಹಸುಗಳು ಮೃತಪಟ್ಟಿವೆ.
ಬಂಡಳ್ಳಿ ಗ್ರಾಮದಲ್ಲಿ ಗೋಡೆ ಕುಸಿದು ಹಸು ಮೃತಪಟ್ಟಿದೆ. ವೈಶಂಪಾಳ್ಯ ಗ್ರಾಮದಲ್ಲಿ ಮನೆಯ ಗೋಡೆ ಕುಸಿದಿದೆ. ಚಂಗವಾಡಿ ಗ್ರಾಮದ ಬಳಿ ಸೇತುವೆ ಕೊಚ್ಚಿಹೋಗಿದೆ. ಚಾಮರಾಜನಗರದಲ್ಲಿ ಬಿರುಸಿನ ಮಳೆ ಸುರಿದಿದ್ದು ಚಿಕ್ಕರಸಿನಕೊಳ ಭರ್ತಿಯಾಗಿದೆ.
ಮಂಡ್ಯ ಜಿಲ್ಲೆಯ ಬೆಳಕವಾಡಿ ಸಮೀಪದ ಪೂರಿಗಾಲಿ ಗ್ರಾಮದಲ್ಲಿ ಮಳೆ ರಭಸಕ್ಕೆ ಸಿದ್ಧರಾಜು ಎಂಬುವವರ ಮನೆಯ ಗೋಡೆ ಕುಸಿದು ಬಿದ್ದು ಬೈಕ್, ಗೃಹೋಪಯೋಗಿ ವಸ್ತುಗಳು ಹಾನಿಯಾಗಿವೆ.
ಶ್ರೀರಂಗಪಟ್ಟಣ ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಬಿರುಸಿನ ಮಳೆ ಸುರಿದಿದೆ.
ಮೈಸೂರು ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಹಾಗೂ ಕೊಡಗು ಜಿಲ್ಲೆಯ ವಿರಾಜಪೇಟೆ ಹಾಗೂ ಸಿದ್ದಾಪುರ ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ.
ತುಮಕೂರು: ‘ಉತ್ತರೆ’ ಬಿರುಸು
ತುಮಕೂರು: ಜಿಲ್ಲೆಯಲ್ಲಿ ‘ಉತ್ತರೆ’ ಮಳೆ ಬಿರುಸು ಪಡೆದಿದ್ದು, ಸೋಮವಾರ ಬೆಳಗಿನ ಜಾವ ಸುರಿದ ಮಳೆಗೆ ತೋವಿನಕೆರೆ ಭಾಗದಲ್ಲಿ ಹಳ್ಳಗಳು ತುಂಬಿ ಹರಿದಿವೆ.
ತುಮಕೂರು ನಗರ, ಗ್ರಾಮಾಂತರ ಪ್ರದೇಶ ಹಾಗೂ ಕೊರಟಗೆರೆ, ಶಿರಾ, ಗುಬ್ಬಿ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿದೆ.
ಕೋಲಾರ ವರದಿ: ಜಿಲ್ಲೆಯ ಮಾಲೂರು, ಕೆಜಿಎಫ್, ಬಂಗಾರಪೇಟೆ ತಾಲ್ಲೂಕಿನ ಕೆಲವೆಡೆ ಸಾಧಾರಣ ಮಳೆಯಾಯಿತು.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಸೋಮವಾರ ಬೆಳಗಿನ ಜಾವ ಉತ್ತಮ ಮಳೆಯಾಗಿದೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ವಿವಿಧೆಡೆ ಸೋಮವಾರ ಗುಡುಗು ಸಹಿತ ಮಳೆಯಾಗಿದೆ. ತೋಟತ್ತಾಡಿ ಗ್ರಾಮದ ಕೊಯಕ್ಕುರಿ ಎಂಬಲ್ಲಿ ಖಾಸಿಂ ಬ್ಯಾರಿ ಎಂಬುವರ ಮನೆಗೆ ಸಿಡಿಲು ಬಡಿದು ಸುಮಾರು ₹2 ಲಕ್ಷ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.
ಮಂಗಳೂರು ನಗರದಲ್ಲಿ ಬೆಳಿಗ್ಗೆ ಉತ್ತಮ ಮಳೆ ಸುರಿಯಿತು.