ಎಸ್‌ಐಆರ್: ಹೊರ ರಾಜ್ಯಗಳ ಮೊಬೈಲ್ ಸಂಖ್ಯೆ ಬಳಕೆ
ಬೆಂಗಳೂರು: ಬೆಳಗಾವಿ ಉತ್ತರ ಮತ್ತುಬೀದರ್‌ನ ಭಾಲ್ಕಿ ವಿಧಾನಸಭಾ ಕ್ಷೇತ್ರಗಳ ಅರ್ಹ ಮುಸ್ಲಿಂ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವಂತೆ ಸಲ್ಲಿಸಲಾಗಿರುವ ಅಕ್ರಮ ಅರ್ಜಿಗಳಲ್ಲಿ ಹೊರರಾಜ್ಯಗಳ ಮೊಬೈಲ್ ಸಂಖ್ಯೆಯನ್ನು ಬಳಸಿಕೊಳ್ಳಲಾಗಿದೆ.
ಎರಡೂ ಕ್ಷೇತ್ರಗಳಲ್ಲಿ ಹೀಗೆ ಅರ್ಜಿ ಸಲ್ಲಿಸಿದವರ ಮೊಬೈಲ್ ಸಂಖ್ಯೆ ವಿವರಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ. ಈ ಪೈಕಿ ಇಬ್ಬರ ಮೊಬೈಲ್ ಸಂಖ್ಯೆ ಮಾತ್ರವೇ ಸರಿಯಾಗಿದ್ದು, ಅರ್ಜಿಸಲ್ಲಿಸಿದ್ದು ತಾವೇ ಎಂದು ಒಪ್ಪಿಕೊಂಡರು. ಉಳಿದ ಮೊಬೈಲ್ ಸಂಖ್ಯೆಗಳಲ್ಲಿ ಹಲವು ಚಾಲ್ತಿಯಲ್ಲಿಯೇ ಇಲ್ಲ. ಇನ್ನೂ ಕೆಲವು ದೂರದ ಉತ್ತರ ಪ್ರದೇಶ, ಪಂಜಾಬ್, ಬಿಹಾರದ್ದಾಗಿವೆ.
ಬೆಳಗಾವಿ ಉತ್ತರದಲ್ಲಿ ಮಹಾದೇವಕೋಲಬಸಂಕರ ಹೆಸರಿನಲ್ಲಿ ಹಲವುಮುಸ್ಲಿಂ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲು ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯಲ್ಲಿ ನಮೂದಿಸಲಾದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ, ದೂರದ ಪಂಜಾಬ್‌ನಲ್ಲಿನ ಜಲಂಧರ್‌ನ ಯೂಟ್ಯೂಬರ್ ಒಬ್ಬರಿಗೆ ಕರೆ ಹೋಯಿತು. ‘ನಿನ್ನೆಯಿಂದ ಈ ರೀತಿ 20ಕ್ಕೂ ಹೆಚ್ಚು ಕರೆಗಳು ಬರುತ್ತಿವೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಭಾಲ್ಕಿ ಕ್ಷೇತ್ರದಲ್ಲಿ ವಿಷ್ಣುವರ್ಧನ ಕೋಟೆ ಎಂಬುವವರು ಹಲವು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅವರಿಗೆ ಕರೆ ಮಾಡಿ ಪ್ರಶ್ನಿಸಿದಾಗ, ಹಲವು ಅರ್ಜಿಗಳನ್ನು ಸಲ್ಲಿಸಿರುವುದಾಗಿ ಒಪ್ಪಿಕೊಂಡರು. ‘ಯಾವೆಲ್ಲಾ ಮತಗಟ್ಟೆಗಳಲ್ಲಿ ಅರ್ಜಿ ಸಲ್ಲಿಸಿದ್ದೀರಿ’ ಎಂದು ಕೇಳಿದಾಗ, ‘ಹಲವು ಮತಗಟ್ಟೆಗಳಲ್ಲಿ ಸಲ್ಲಿಸಿದ್ದೇನೆ. ಅವುಗಳ ವಿವರಗಳನ್ನು ನಿಮಗೆ ನೀಡುತ್ತೇನೆ. ಸ್ವಲ್ಪ ಸಮಯ ಕೊಡಿ’ ಎಂದು ಕೇಳಿ ಕರೆ ಕಟ್ ಮಾಡಿದರು.
ಐದಾರು ನಿಮಿಷಗಳ ನಂತರ ಮತ್ತೆ ಕರೆ ಮಾಡಿ ಪ್ರಶ್ನಿಸಿದಾಗ, ‘ನಾನು ನಮ್ಮ ತಂದೆಯ ಮತ ಅಳಿಸಲು ಮಾತ್ರವೇ ಅರ್ಜಿ ಸಲ್ಲಿಸಿದ್ದೇನೆ. ಬೇರೆ ಕಡೆ ಸಲ್ಲಿಸಿಲ್ಲ’ ಎಂದು ಮಾತು ಬದಲಿಸಿದರು. ನಿಮ್ಮ ತಂದೆಯ ಮತಗಟ್ಟೆ ಯಾವುದು, ಊರು ಯಾವುದು ಎಂದು ಪ್ರಶ್ನಿಸಿದಾಗ ಉತ್ತರಿಸಲು ತಡಬಡಾಯಿಸಿದರು. ನಂತರ ಕರೆ ಕಟ್ ಮಾಡಿದರು.
ಅರ್ಜಿ ಸಲ್ಲಿಸಿರುವ ಇನ್ನೂ ಹಲವು ವ್ಯಕ್ತಿಗಳ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ, ಆ ಸಂಖ್ಯೆಗಳು ಚಾಲ್ತಿಯಲ್ಲಿಯೇ ಇರಲಿಲ್ಲ. ಇನ್ನೂ ಕೆಲವು ಸಂಖ್ಯೆಗಳಿಗೆ ಕರೆ ಮಾಡಿದರೆ, ‘ಈ ಸಂಖ್ಯೆಗೆ ಕರೆ ಮಾಡಲು ನಿಮಗೆ ಅನುಮತಿಯಿಲ್ಲ’ ಎಂದು ಸಂದೇಶ ಬರುತ್ತಿದೆ. ಇನ್ನೂ ಹಲವು ಅರ್ಜಿದಾರರ ಎಪಿಕ್ ಸಂಖ್ಯೆಯೇ ಅಸ್ತಿತ್ವದಲ್ಲಿ ಇಲ್ಲ.
ಒಬ್ಬ ಅರ್ಜಿದಾರ ಬಿಜೆಪಿ ಬಿಎಲ್‌ಎ
ಬೆಳಗಾವಿ ಉತ್ತರ ಕ್ಷೇತ್ರದ ಎರಡೂ ಮತಗಟ್ಟೆಗಳ ಮತದಾರರ ವಿರುದ್ಧ ಕೆಲವೇ ವ್ಯಕ್ತಿಗಳು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಶಿವಂ ಹುಲ್ಜಾ ಎಂಬುವವರು ತಮ್ಮ ಎಪಿಕ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ಅರ್ಜಿಯಲ್ಲಿ ನೀಡಿದ್ದಾರೆ. ಈ ವ್ಯಕ್ತಿ, ಬಿಜೆಪಿಯ ಬಿಎಲ್‌ಎ ಎಂಬುದನ್ನು ಬಿಎಲ್‌ಒ ಮತ್ತು ಬಿಎಲ್‌ಒ ಮೇಲ್ವಿಚಾರಕರು ಖಚಿತಪಡಿಸಿದರು.
ಶಿವಂ ಅವರನ್ನು ಸಂಪರ್ಕಿಸಿದಾಗ, ಅರ್ಜಿ ಸಲ್ಲಿಸಿರುವುದಾಗಿ ಒಪ್ಪಿಕೊಂಡರು. ‘ನೀವು ಅರ್ಜಿ ಸಲ್ಲಿಸಿದವರ ಮನೆಗಳಿಗೆ ಭೇಟಿ ನೀಡಿ, ಅವರು ಅಲ್ಲಿ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡಿದ್ದೀರಾ’ ಎಂದು ಪ್ರಶ್ನಿಸಿದ್ದಕ್ಕೆ, ‘ಇಲ್ಲ.ನಾನು ಅಲ್ಲಿಗೆ ಭೇಟಿ ನೀಡಿಲ್ಲ’ ಎಂದರು.
‘ಖಚಿತಪಡಿಸಿಕೊಳ್ಳದೆ, ಮತದಾರರನ್ನು ಪಟ್ಟಿಯನ್ನು ತೆಗೆದುಹಾಕಲು ಹೇಗೆ ಅರ್ಜಿ ಸಲ್ಲಿಸಿದಿರಿ’ ಎಂದು ಪ್ರಶ್ನಿಸಿದಾಗ, ‘ಬಿಎಲ್‌ಒ ಅವರೇ ಅರ್ಜಿಗಳನ್ನು ನೀಡಿ, ಸಹಿ ಮಾಡು ಎಂದರು. ನಾನು ಸಹಿ ಮಾಡಿಕೊಟ್ಟೆ’ ಎಂದರು. ಸಂಬಂಧಿತ ಬಿಎಲ್‌ಒ ಅವರನ್ನು ಕಾನ್ಫರೆನ್ಸ್ ಕಾಲ್ ಮೂಲಕ ಪ್ರಶ್ನಿಸಿದಾಗ, ‘ಈ ವ್ಯಕ್ತಿಯನ್ನು ಬಿಜೆಪಿ ಬಿಎಲ್‌ಎ ಆಗಿ ನೇಮಕ ಮಾಡಲಾಗಿತ್ತು. ಎಸ್‌ಐಆರ್ ಕರ್ತವ್ಯಕ್ಕೆ ಒಮ್ಮೆಯೂ ಬಂದಿಲ್ಲ. ಅವರ ಮೂತಿಯನ್ನೇ ನಾನು ನೋಡಿಲ್ಲ. ಅವರು ಸುಳ್ಳು ಹೇಳುತ್ತಿದ್ದಾರೆ’ ಎಂದರು.
ಆಗ ಶಿವಂ ಹುಲ್ಜಾ ಅವರು ಫೋನ್‌ನಲ್ಲಿಯೇ ಬಿಎಲ್‌ಒ ಅವರಿಗೆ ಧಮಕಿ ಹಾಕಲು ಮುಂದಾದರು. ಬಿಎಲ್‌ಒ ಕರೆ ಕಟ್ ಮಾಡಿದರು. ನಂತರ ‘ಪ್ರಜಾವಾಣಿ’ಯನ್ನು ಸಂಪರ್ಕಿಸಿ, ‘ಈ ಸಂಬಂಧ ಮೇಲಧಿಕಾರಿಗಳಿಗೆ ದೂರು ನೀಡುತ್ತೇನೆ’ ಎಂದು ತಿಳಿಸಿದರು. ಶಿವಂ ಹುಲ್ಜಾ ಅವರು ಇದೇ ರೀತಿ ಮೂವರು ಬಿಎಲ್‌ಒಗಳ ಹೆಸರನ್ನು ಹೇಳಿದರು. ಆ ಮೂವರು ಬಿಎಲ್‌ಒಗಳೂ ಆ ವ್ಯಕ್ತಿಯನ್ನು ತಾವು ನೋಡಿಯೇ ಇಲ್ಲ ಎಂದರು.
‘ಭಾರತೀಯ ಚುನಾವಣಾ ಆಯೋಗವಾಗಲೀ, ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯಾಗಲಿ ಮತದಾರರ ವಿವರ ಪೂರ್ವ ಮುದ್ರಿತ ರೂಪದಲ್ಲಿ ನೀಡುವುದಿಲ್ಲ. ಖಾಲಿ ಅರ್ಜಿಯನ್ನಷ್ಟೇ ನೀಡುತ್ತದೆ. ಅದರಲ್ಲಿನ ಎಲ್ಲ ವಿವರಗಳನ್ನು ಕೈಬರಹದಲ್ಲಿ ಇಲ್ಲವೇ ಆನ್‌ಲೈನ್‌ನಲ್ಲಿ ಭರ್ತಿ ಮಾಡಿಯೇ ಸಲ್ಲಿಸಬೇಕು. ಇದು ಸಂಪೂರ್ಣವಾಗಿ ಅಕ್ರಮ ಅರ್ಜಿ ಎಂಬುದು ಮೇಲ್ನೋಟಕ್ಕೇ ಕಾಣುತ್ತದೆ’ ಎಂದು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿಯೊಬ್ಬರು ಹೇಳಿದರು.
‘ಎಸ್‌ಐಆರ್ ಕರ್ತವ್ಯದಲ್ಲಿ ತೊಡಗಿರುವ ಯಾವೊಬ್ಬರು ಸಿಬ್ಬಂದಿ, ಅಧಿಕಾರಿಯ ಬಳಿ ಮತದಾರರ ಸಂಪೂರ್ಣ ವಿವರ ಒಂದೆಡೆಯೇ ಲಭ್ಯವಾಗುವುದಿಲ್ಲ. ಈ ಅರ್ಜಿಗಳಲ್ಲಿ ಮತದಾರರ ಎಲ್ಲ ವಿವರಗಳನ್ನು ಪೂರ್ಣ ಪ್ರಮಾಣದಲ್ಲಿ ಮುದ್ರಿಸಲಾಗಿದೆ. ಅರ್ಜಿ ಸಲ್ಲಿಸಿದವರಿಗೆ ಇಷ್ಟೆಲ್ಲಾ ವಿವರ ಹೇಗೆ ಲಭ್ಯವಾಯಿತು ಎಂಬುದೇ ತನಿಖೆಯ ವಸ್ತುವಾಗಬಲ್ಲದು. ಭಾರತೀಯ ಚುನಾವಣಾ ಆಯೋಗದ ದತ್ತಾಂಶ ಸರ್ವರ್‌ನಿಂದ ಈ ವಿವರಗಳನ್ನು ಕದ್ದಿರುವ ಅಪಾಯವೂ ಇದೆ’ ಎಂದು ತಿಳಿಸಿದರು.
‘ಈ ಮೊದಲು ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲು ಆಯಾ ಮತಗಟ್ಟೆಯ ಮತದಾರರೇ ಅರ್ಜಿ ಸಲ್ಲಿಸಬೇಕಿತ್ತು. 2024ರಲ್ಲಿ ಈ ನಿಯಮಕ್ಕೆ ತಿದ್ದುಪಡಿ ತಂದು, ಆಯಾ ಕ್ಷೇತ್ರದ ಮತದಾರರೂ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಭಾಲ್ಕಿ ಮತ್ತು ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಹೀಗೆ ಅರ್ಜಿ ಸಲ್ಲಿಸಿದವರಿಗೆ ಮತಗಟ್ಟೆಯ ವಿಳಾಸವೇ ಗೊತ್ತಿಲ್ಲ. ಹೀಗಿದ್ದೂ ಅರ್ಹರ ಡಿಲೀಟ್‌ಗೆ ಅರ್ಜಿ ಸಲ್ಲಿಸಿದ್ದಾರೆ’ ಎಂದರು.