
ಚಿಕ್ಕನಾಯಕನಹಳ್ಳಿ: ಪುರಸಭೆ ಹಳೆಯ ವಿದ್ಯುತ್ ಕಂಬಗಳ ಅಕ್ರಮ ಸಾಗಣೆ ಯತ್ನ ವಿಫಲ
ಚಿಕ್ಕನಾಯಕನಹಳ್ಳಿ: ಪಟ್ಟಣದ ಪುರಸಭೆ ಹಿಂಭಾಗದಲ್ಲಿರುವ ಪಂಪ್‌ಹೌಸ್ ಆವರಣದಲ್ಲಿದ್ದ ಹಳೆಯ ವಿದ್ಯುತ್ ಕಂಬಗಳನ್ನು ಅಕ್ರಮವಾಗಿ ಸಾಗಿಸುವ ಯತ್ನ ಶುಕ್ರವಾರ ನಡೆದಿದೆ.
ಹಳೆಯ ವಿದ್ಯುತ್ ಕಂಬಗಳಿದ್ದ ಜಾಗದಲ್ಲಿ ‘ಮನೆ ಮನೆಗೆ ಗಂಗೆ’ ಯೋಜನೆಯಡಿ ಕಾಮಗಾರಿ ನಡೆಯುತ್ತಿದ್ದು, ಗುತ್ತಿಗೆದಾರರು ಜಾಗವನ್ನು ಸಮತಟ್ಟು ಮಾಡುವ ನೆಪದಲ್ಲಿ, ಅಲ್ಲಿದ್ದ ವಿದ್ಯುತ್ ಕಂಬಗಳನ್ನು ವಾಹನಕ್ಕೆ ತುಂಬಿ ಬೇರೆಡೆ ಸಾಗಿಸಲು ಪ್ರಯತ್ನಿಸಿದರು.
ಇದನ್ನು ಗಮನಿಸಿದ ಪುರಸಭಾ ಮಾಜಿ ಸದಸ್ಯ ಮಲ್ಲಿಕಾರ್ಜುನ್ ಹಾಗೂ ಸ್ಥಳೀಯರು, ಪುರಸಭೆಯ ಸ್ವತ್ತನ್ನು ಬೇರೆಡೆ ಸಾಗಿಸಲು ಅನುಮತಿ ಪಡೆದಿರುವ ಅಧಿಕೃತ ದಾಖಲೆ ತೋರಿಸಿ ಎಂದು ಆಗ್ರಹಿಸಿದರು. ಸಾರ್ವಜನಿಕರ ಪ್ರಶ್ನೆಯಿಂದ ಬೆದರಿ, ವಾಹನದಲ್ಲಿದ್ದ ಕಂಬಗಳನ್ನು ತರಾತುರಿಯಲ್ಲಿ ಕೆಳಗಿಳಿಸಿ, ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಕಚೇರಿ ಕೆಲಸದ ಅವಧಿಯಲ್ಲೇ ಪುರಸಭೆ ಹಿಂಭಾಗದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಹಾಡಹಗಲೇ ಅಕ್ರಮವಾಗಿ ಸಾಗಿಸಲು ಯತ್ನಿಸಿರುವ ಘಟನೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಪುರಸಭೆಗೆ ಸೇರಿದ 180 ಕಂಬ ಇಲ್ಲಿರಬೇಕು. ಆದರೆ, ಇದರಲ್ಲಿ ಈಗಾಗಲೇ ಕೆಲವನ್ನು ಅಕ್ರಮವಾಗಿ ಸಾಗಿಸಿರುವ ಸಂಶಯವಿದೆ. ಕಂಬಗಳು ನಾಪತ್ತೆಯಾಗಿದ್ದರೆ ನಾನೇ ದೂರು ನೀಡುತ್ತೇನೆ’ ಎಂದು ಪುರಸಭಾ ನಾಮಿನಿ ಸದಸ್ಯ ಮಹಮ್ಮದ್ ಹುಸೇನ್ ಗುಂಡ ತಿಳಿಸಿದರು.