
ಹೊಸದುರ್ಗ: ಒಡೆದಿದ್ದ ಭದ್ರಾ ಮೇಲ್ದಂಡೆ ಕಾಲುವೆ ಮುಚ್ಚಿದ ಅಧಿಕಾರಿಗಳು
ಹೊಸದುರ್ಗ: ತಾಲ್ಲೂಕಿನ ಮಾಡದಕೆರೆ ಹೋಬಳಿಯ ಲಕ್ಕಿಹಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಹಾನಿಗೊಳಗಾಗಿದ್ದ ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆಯನ್ನು ಅಧಿಕಾರಿಗಳು ಕಾರ್ಮಿಕರ ಸಹಾಯದಿಂದ ಶುಕ್ರವಾರ ಮುಚ್ಚಿದರು.
ಸ್ಥಳೀಯ ಕಾರ್ಮಿಕರ ಜತೆ ಹರಿಹರದಿಂದ ಕರೆಸಲಾಗಿದ್ದ ಕಾರ್ಮಿಕರು ತಾತ್ಕಾಲಿಕ ದುರಸ್ತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
‘ಒಡೆದು ಹೋಗಿದ್ದ ಕಾಲುವೆಯನ್ನು ಮರಳು, ಮಣ್ಣು ಹಾಗೂ ಸಿಮೆಂಟ್ ಚೀಲಗಳ ಸಹಾಯದಿಂದ ಮುಚ್ಚಲಾಗಿದೆ. ಯಾವುದೇ ಲೋಪವಿಲ್ಲದಂತೆ ನೀರು ಸರಾಗವಾಗಿ ಹರಿದು ಹಿರಿಯೂರು ಭಾಗವನ್ನು ತಲುಪಲಿದೆ. ಭದ್ರಾ ನೀರಿನ ಹರಿವು ಕಡಿಮೆಯಾದ ನಂತರ ಟೆಂಡರ್ ಕರೆದು ಕಾಲುವೆಯ ಶಾಶ್ವತ ದುರಸ್ತಿ ಕಾರ್ಯ ಮಾಡಲಾಗುವುದು’ ಎಂದು ಹೊಸದುರ್ಗ, ಹಿರಿಯೂರು ಭಾಗದ ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಚಿತ್ರದುರ್ಗ ಶಾಖಾ ಕಾಲುವೆಯನ್ನು ಗುರುವಾರ ದುಷ್ಕರ್ಮಿಗಳು ಒಡೆದು ಹಳ್ಳಕ್ಕೆ ನೀರು ಬರುವಂತೆ ಮಾಡಿದ್ದರು. 40 ಕ್ಯುಸೆಕ್‌ನಿಂದ 50 ಕ್ಯುಸೆಕ್ ನೀರು ಹೊರ ಹೋಗಿರಬಹುದು ಎಂದು ಅಂದಾಜಿಸಲಾಗಿದೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ್ದ ಹೊಸದುರ್ಗ, ಹಿರಿಯೂರು ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು.
ಈ ಕುರಿತು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.