
ಮಾಲೂರು ಕೊಲೆ ಪ್ರಕರಣ: ಪೆಟ್ರೋಲ್ ಸುಟ್ಟು ಹಾಕಿದ್ದ ಇಬ್ಬರು ಆರೋಪಿಗಳ ಬಂಧನ
ಮಾಲೂರು: ಖಾಸಗಿ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಕೊಂದು ಪೆಟ್ರೋಲ್ ಹಾಕಿ ಸುಟ್ಟು, ಅರ್ಧಬೆಂದ ದೇಹವನ್ನು ಸಂಪ್‌ನಲ್ಲಿ ಮುಚ್ಚಿಹಾಕಿದ್ದ ಪ್ರಕರಣವನ್ನು ಮಾಲೂರು ಪೊಲೀಸರು ಬೇಧಿಸಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಆಲಂಬಾಡಿ ಸಮೀಪ ಚಿಕ್ಕ ತಿರುಪತಿ ನಿವಾಸಿ ವೆಂಕಟೇಶ್ (36) ಕೊಲೆಯಾದವರು. ಜಗದೇನಹಳ್ಳಿ ಸಂತೋಷ್ (30), ಬಾಗೂರುಸೋಣ್ಣಳ್ಳಿ ಸುರೇಶ್ (32) ಬಂಧಿತರು. ಇವರನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ವಿವಾಹೇತರ ಸಂಬಂಧ ಶಂಕಿಸಿ ಆರೋಪಿಗಳು ಕೃತ್ಯ ಎಸಗಿ ಪರಾರಿಯಾಗಿದ್ದರು. ವೆಂಕಟೇಶ್ ಕಾಣೆಯಾಗಿರುವುದಾಗಿ ಪತ್ನಿ ಪವಿತ್ರ ಸೆ.2 ರಂದು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಇಬ್ಬರು ವ್ಯಕ್ತಿಗಳ ಮೇಲೆ ಅನುಮಾನ ವ್ಯಕ್ತಪಡಿಸಿ ಪವಿತ್ರ ಮರು ದೂರು ನೀಡಿದ್ದರು. ಈ ಬಗ್ಗೆ ವಿವಿಧ ಆಯಾಯದಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಇನ್‌ಸ್ಪೆಕ್ಟರ್ ರಾಮಪ್ಪ ಗುತೇರ ತಿಳಿಸಿದ್ದಾರೆ.