
ನಾಪೋಕ್ಲು: ಮಳೆ ಇಲ್ಲದೆ ಒಣಗುತ್ತಿರುವ ಭತ್ತದ ಗದ್ದೆ, ಕೃಷಿ ಹೊಂಡದ ನೀರು ಆಸರೆ
ನಾಪೋಕ್ಲು: ಮಳೆ ಬಾರದೆ ಬರೋಬ್ಬರಿ 15 ದಿನಗಳಾಗಿವೆ. ನಾಟಿ ಮಾಡಿದ ಭತ್ತದ ಗದ್ದೆಗಳು ನೀರಿಲ್ಲದೆ ಒಣಗುತ್ತಿವೆ. ಭತ್ತ ನಾಟಿ ಮಾಡಿ ಈಗ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ ಎಂಬುದು ರೈತರ ಅಳಲು.
ಮಳೆ ಇಲ್ಲದೆ ನೀರಿನ ಒರತೆ ಇಂಗುತ್ತಿದ್ದು ಕೃಷಿಗೆ ತೊಂದರೆ ಎದುರಾಗಿದೆ. ಹೊದ್ದೂರು ಗ್ರಾಮದಲ್ಲಿ ಭತ್ತದ ಗದ್ದೆಗಳು ನೀರಿಲ್ಲದ ಒಣಗುತ್ತಿದ್ದು ರೈತರು ಕೃಷಿ ಹೊಂಡಗಳಿಂದ ಭತ್ತದ ಗದ್ದೆಗಳಿಗೆ ನೀರು ಹಾಯಿಸಿ ಸಂರಕ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಗ್ರಾಮದ ಕೂಡಂಡ ಸೋಮಣ್ಣ ಮತ್ತು ನಾಣಯ್ಯ ಅವರ ಗದ್ದೆಗಳಲ್ಲಿ ನೀರಿಲ್ಲದೇ ಪೈರು ಬಾಡುತ್ತಿವೆ. ಬಿಸಿಲಿನ ಝಳ ಏರುತ್ತಿದ್ದು ಮಳೆ ಕೊರತೆಯಿಂದ ರೈತರು ಆತಂಕಪಡುವಂತಾಗಿದೆ. ಕಾರ್ಮಿಕರ ಕೊರತೆ, ಕಾಡುಪ್ರಾಣಿಗಳ ಹಾವಳಿ ಸೇರಿದಂತೆ ವಿವಿಧ ಸಮಸ್ಯೆಗಳ ನಡುವೆ ಭತ್ತದ ನಾಟಿ ಮಾಡಿರುವ ರೈತರು ಇದೀಗ ಹವಾಮಾನ ಏರುಪೇರಿನಿಂದ ಕಂಗೆಡುತ್ತಿದ್ದಾರೆ.
ಜಿಲ್ಲೆಯಲ್ಲಿ ಮೊದಲೆಲ್ಲಾ ಸೆಪ್ಟೆಂಬರ್ ತಿಂಗಳಿನಲ್ಲಿ ನಿಧಾನಗತಿಯಲ್ಲಿ ಮಳೆ ಇಳಿಮುಖವಾಗುತ್ತಿತ್ತು. ತಿಂಗಳ ಪೂರ್ತಿ ತುಂತುರು ಮಳೆ ಸುರಿಯುತ್ತಿತ್ತು. ಅದನ್ನು ಗೌರಿ ಮಳೆ ಎಂದು ಕರೆಯುವುದೇ ವಾಡಿಕೆ. ಇತ್ತೀಚೆಗೆ ಪರಿಸ್ಥಿತಿ ಬೇರೆಯಾಗಿದೆ. ದಿಢೀರನೆ ಮಳೆ ದೂರವಾಗಿದೆ. ಇದು ಬೆಳೆಗಾರ ಆತಂಕಕ್ಕೆ ಕಾರಣವಾಗಿದೆ ಎನ್ನುತ್ತಾರೆ ನೆಲಜಿ ಗ್ರಾಮದ ಕಾಫಿ ಬೆಳೆಗಾರ ಕುಶಾಲಪ್ಪ.
ಮಳೆ ಕೊರತೆ ಕಾಫಿ ಬೆಳೆಗಾರರನ್ನೂ ತಟ್ಟಿದೆ. ಸಾಮಾನ್ಯವಾಗಿ ಕಾಫಿಗೆ ಎರಡು ಬಾರಿ ರಾಸಾಯನಿಕ ಗೊಬ್ಬರ ಕೊಡುವುದು ವಾಡಿಕೆ. ಜೂನ್ ಮೊದಲ ವಾರದಲ್ಲಿ ಹಾಗೂ ಸೆಪ್ಟಂಬರ್ ಮೊದಲ ವಾರದಲ್ಲಿ ಕಾಫಿಗೆ ಪೂರಕವಾಗಿ ರಾಸಾಯನಿಕ ಗೊಬ್ಬರ ನೀಡುವುದು ರೂಢಿ. ಈ ವರ್ಷ ಸೆಪ್ಟೆಂಬರ್ ಮೊದಲ ವಾರದಿಂದಲೇ ಮಳೆ ದೂರವಾಗಿದ್ದು ಬಹುತೇಕ ಬೆಳೆಗಾರರು ತೋಟಕ್ಕೆ ಗೊಬ್ಬರ ಹಾಕಲಾರದೆ ಪರಿತಪಿಸುತ್ತಿದ್ದಾರೆ.
ಮಳೆ ಇಲ್ಲದೆ ಗಿಡಗಳಿಗೆ ಗೊಬ್ಬರ ಹಾಕಿ ಪ್ರಯೋಜನ ಇಲ್ಲ. ನೆಲದಲ್ಲಿ ತೇವಾಂಶವೇ ಇಲ್ಲ. ಹಾಗಾಗಿ ದುಬಾರಿ ಬೆಲೆಯ ರಾಸಾಯನಿಕ ಗೊಬ್ಬರ ಹಾಕಿದರೆ ಉಪಯೋಗವಿಲ್ಲದಂತಾಗುತ್ತದೆ ಎಂದು ಬಹುತೇಕ ಬೆಳೆಗಾರರ ಅಭಿಪ್ರಾಯ. ಹಲವು ಬೆಳೆಗಾರರು ಗೊಬ್ಬರ ಖರೀದಿಸಿ ದಾಸ್ತಾನು ಇರಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಮಳೆ ಸುರಿದರಷ್ಟೇ ಗೊಬ್ಬರ ಹಾಕಲು ಸಾಧ್ಯ. ಮಳೆ ಬಾರದಿದ್ದರೆ ಪರಿಸ್ಥಿತಿ ಊಹಿಸಲು ಅಸಾಧ್ಯ ಎನ್ನುತ್ತಾರೆ ಬೆಳೆಗಾರರು.