ಚಿತ್ರದುರ್ಗ| ಭದ್ರಾ ನಾಲೆಗೆ ಅಕ್ರಮ ಪೈಪ್‌ಲೈನ್‌; ನೀರು ಹರಿಸಲು ಪರದಾಟ

ಚಿತ್ರದುರ್ಗ| ಭದ್ರಾ ನಾಲೆಗೆ ಅಕ್ರಮ ಪೈಪ್‌ಲೈನ್‌; ನೀರು ಹರಿಸಲು ಪರದಾಟ

ಚಿತ್ರದುರ್ಗ| ಭದ್ರಾ ನಾಲೆಗೆ ಅಕ್ರಮ ಪೈಪ್‌ಲೈನ್‌; ನೀರು ಹರಿಸಲು ಪರದಾಟ

ಚಿತ್ರದುರ್ಗ: ಭದ್ರಾ ನಾಲೆಯಿಂದ ಚಿತ್ರದುರ್ಗ ಶಾಖಾ ನಾಲೆಗೆ ನೀರು ಹರಿಸುತ್ತಿದ್ದಂತೆ ರೈತರು ನಾಲೆಯುದ್ದಕೂ ಅನಧಿಕೃತವಾಗಿ ಪಂಪ್‌ಸೆಟ್‌, ಪೈಪ್‌ಲೈನ್‌ ಅಳವಡಿಸಿರುವುದು ವಿಶ್ವೇಶ್ವರಯ್ಯ ಜಲ ನಿಗಮದ ಎಂಜಿನಿಯರ್‌ಗಳಿಗೆ ತಲೆನೋವಾಗಿ ಪರಿಣಮಿಸಿದೆ. ಅವುಗಳನ್ನು ತೆರವುಗೊಳಿಸಿ ನೀರನ್ನು ಮುಂದೆ ತರಲು ಅಧಿಕಾರಿಗಳು ಪರದಾಡುತ್ತಿದ್ದಾರೆ.

ಎಲ್ಲೆಡೆ ತೀವ್ರ ಬರಗಾಲ ಕಾಡುತ್ತಿರುವ ಕಾರಣ ರೈತರು ನೀರಿಗಾಗಿ ಹಾತೊರೆಯುತ್ತಿದ್ದಾರೆ. ಹೊಲದ ಪಕ್ಕದ ನಾಲೆಯಲ್ಲೇ ನೀರು ಹರಿಯುತ್ತಿರುವ ಕಾರಣ ಆ ನೀರನ್ನು ಬಳಸಿಕೊಳ್ಳಲು ರೈತರು ಅಕ್ರಮ ಹಾದಿ ಅನುಸರಿಸುತ್ತಿದ್ದಾರೆ. ಪಂಪ್‌ಸೆಟ್‌, ಮೋಟಾರ್‌, ಪೈಪ್‌ ಅಳವಡಿಸಿಕೊಂಡು ನೀರು ಎತ್ತಲು ಯತ್ನಿಸುತ್ತಿದ್ದಾರೆ. ಪರೀಕ್ಷಾರ್ಥವಾಗಿ ಹರಿಯುತ್ತಿರುವ ನೀರನ್ನು ಅಕ್ರಮವಾಗಿ ಪಡೆಯದಂತೆ ನಿಗಮ, ಜಿಲ್ಲಾಡಳಿತ ಎಚ್ಚರಿಕೆ ನೀಡಿದ್ದರೂ ರೈತರು ತಮ್ಮ ಚಟುವಟಿಕೆ ಮುಂದುವರಿಸಿದ್ದಾರೆ.

ಹೊಸದುರ್ಗ ತಾಲ್ಲೂಕಿನ ಮಾಡದಕೆರೆ ಹೋಬಳಿ ವ್ಯಾಪ್ತಿಯ ಲಕ್ಕಿಹಳ್ಳಿ ಅರಣ್ಯ ಪ್ರದೇಶದಲ್ಲಿ ನಾಲೆಯನ್ನೇ ಒಡೆದುಹಾಕಿರುವ ಕಿಡಿಗೇಡಿಗಳು ಜಮೀನುಗಳಿಗೆ ನೀರು ಹರಿಸಿಕೊಂಡಿದ್ದಾರೆ. ಇದರಿಂದ ಅಪಾರ ಪ್ರಮಾಣದ ಜೀವಜಲ ವ್ಯರ್ಥವಾಗಿದೆ. ಈ ಸಂಬಂಧ ಹೊಸದುರ್ಗ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಪರೀಕ್ಷಾರ್ಥ ಹರಿವಿನ 3 ಟಿಎಂಸಿ ಅಡಿ ನೀರಿನಲ್ಲಿ 100 ಕೆರೆ ತುಂಬಿಸುವ ಗುರಿ ಇರುವ ಕಾರಣ ಎಂಜಿನಿಯರ್‌ಗಳು ನೀರನ್ನು ಮುಂದೆ ಹರಿಸಲು ಸಾಕಷ್ಟು ಕಷ್ಟಪಡಬೇಕಾಗಿದೆ.

ನಾಲೆಯ ಹರಿವಿನುದ್ದಕ್ಕೂ ಬ್ಯಾರೇಜ್‌, ಚೆಕ್‌ಡ್ಯಾಮ್‌, ಗೋಕಟ್ಟೆ ಗಳಿದ್ದು ಅವುಗಳನ್ನು ತುಂಬಿಸಿ ನೀರನ್ನು ಮುಂದಕ್ಕೆ ಹರಿಸಬೇಕಾಗಿದೆ. ಇದೇ ವೇಳೆ ಜಿಲ್ಲೆಯಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಿದ್ದು ತಮ್ಮ ಕೆರೆಗಳಿಗೆ ನೀರು ಹರಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಒಂದೆಡೆ ಅಕ್ರಮವಾಗಿ ನೀರು ಪಡೆಯುತ್ತಿರುವ ಅವರು ಇನ್ನೊಂದೆಡೆ ಕೆರೆಗೆ ನೀರು ಹರಿಸುವಂತೆ ಪ್ರತಿಭಟನೆ ಹಾದಿ ಹಿಡಿದಿದ್ದಾರೆ. ಹೀಗಾಗಿ ಎಂಜಿನಿಯರ್‌ಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ.

ನಾಲೆಯುದ್ದಕ್ಕೂ ಅಳವಡಿಸಿರುವ ಪೈಪ್‌, ಮೋಟಾರ್‌ಗಳನ್ನು ಅಧಿಕಾರಿಗಳು ತೆರವುಗೊಳಿಸಲು ಯತ್ನಿಸುತ್ತಿದ್ದಾರೆ. ಆದರೆ ರೈತರು ಎಂಜಿನಿಯರ್‌ಗಳ ಜೊತೆ ಜಗಳಕ್ಕಿಳಿಯುತ್ತಿದ್ದು ಪರಿಸ್ಥಿತಿ ಸೂಕ್ಷ್ಮವಾಗುತ್ತಿದೆ. ಕೆಲವೆಡೆ ನಿಗಮದ ಸಿಬ್ಬಂದಿ ಮೇಲೆ ಮುಗಿಬೀಳುವ ಪ್ರಯತ್ನಗಳೂ ನಡೆಯುತ್ತಿವೆ. ಹೀಗಾಗಿ ಎಂಜಿನಿಯರ್‌ಗಳು ಪೊಲೀಸ್‌ ಭದ್ರತೆ ಪಡೆದು ಅಕ್ರಮ ಪಂಪ್‌ಸೆಟ್‌, ಪೈಪ್‌ಲೈನ್‌ಗಳನ್ನು ತೆರವುಗೊಳಿಸುತ್ತಿದ್ದಾರೆ. ನಾಲೆಯ ಹಾದಿಯಲ್ಲಿ ರಾತ್ರಿಯಿಡೀ ಪಹರೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ಥಳೀಯ ಜನಪ್ರತಿನಿಧಿಗಳೂ ರೈತರ ಪರವಾಗಿಯೇ ಮಾತನಾಡುತ್ತಿದ್ದು ನಿಗಮದ ಎಂಜಿನಿಯರ್‌ಗಳಿಗೆ ಪರಿಸ್ಥಿತಿ ನಿಭಾಯಿಸುವುದು ಬಿಸಿತುಪ್ಪವಾಗಿದೆ. ಎಲ್ಲಾ ಕೆರೆಗಳಿಗೂ ನೀರು ಹರಿಸಲಾಗುವುದು ಎಂದು ಭರವಸೆ ನೀಡಿದರೂ ಕೆಲ ರೈತರು ತಾಳ್ಮೆ ಕಳೆದುಕೊಂಡು ವರ್ತಿಸುತ್ತಿದ್ದಾರೆ. ಲಕ್ಕಿಹಳ್ಳಿ ಅರಣ್ಯ ಪ್ರದೇಶದಲ್ಲಿ ಸ್ಥಳೀಯರು ಜೆಸಿಬಿ, ಯಂತ್ರೋಪಕರಣಗಳನ್ನು ಬಳಸಿ ನಾಲೆಯನ್ನು ಒಡೆದು ಹಾಕಿರಬಹುದು ಎಂದು ಶಂಕಿಸಲಾಗಿದೆ. ಯಾರ ಗಮನಕ್ಕೂ ಬಾರದಂತೆ ಮುಖ್ಯನಾಲೆಯನ್ನೇ ಹಾಳುಮಾಡಿರುವುದು ನಿಗಮದ ಅಧಿಕಾರಿಗಳಲ್ಲಿ ಆಶ್ಚರ್ಯ ಸೃಷ್ಟಿಸಿದೆ.

ಜಿಲ್ಲಾಧಿಕಾರಿ ಎಚ್ಚರಿಕೆ: ಚಿತ್ರದುರ್ಗ ಶಾಖಾ ಕಾಲುವೆಯಲ್ಲಿ ಪ್ರಾಯೋಗಿಕವಾಗಿ ನೀರು ಹರಿಸುವುದು ಸರ್ಕಾರದ 100 ದಿನಗಳ ಸಾಧನೆಗಳಲ್ಲಿ ಸೇರ್ಪಡೆಗೊಂಡಿದೆ. ಇದು ಜನಹಿತಕ್ಕಾಗಿ ಸರ್ಕಾರ ಕೈಗೊಂಡಿರುವ ಮಹತ್ವಾಕಾಂಕ್ಷಿ ಕ್ರಮವಾಗಿದೆ. ಪ್ರಾಯೋಗಿಕ ನೀರು ಹರಿಸುತ್ತಿರುವುದರಿಂದ ಸಾರ್ವಜನಿಕರ ಸುರಕ್ಷತೆ ಮತ್ತು ಮುನ್ನೆಚ್ಚರಿಕಾ ಕ್ರಮವಾಗಿ ಕಾಲುವೆ ಹಾಗೂ ಕೆರೆಯ ಕೋಡಿ ಹಳ್ಳದ ಪಾತ್ರಗಳಲ್ಲಿ ಅಕ್ರಮವಾಗಿ ನೀರು ಬಳಸಬಾರದು ಎಂದು ಜಿಲ್ಲಾಧಿಕಾರಿ ಎಸ್‌.ರಮ್ಯಾ ಸೂಚಿಸಿದ್ದಾರೆ.

‘ಸೂಚನೆಗಳನ್ನು ಉಲ್ಲಂಘಿ ಸುವುದು, ನಿಗಮದ ಆಸ್ತಿಯಾದ ನೀರಾವರಿ ಕಾಲುವೆ, ಕಟ್ಟಡಗಳನ್ನು ಜಖಂಗೊಳಿಸುವುದು, ಅನಧಿಕೃತವಾಗಿ ಪಂಪ್‍ಸೆಟ್‍ಗಳನ್ನು ಅಳವಡಿಸಿ ನೀರೆತ್ತುವುದು ಕಾನೂನು ಬಾಹಿರವಾಗಿದ್ದು, ಇದನ್ನು ಉಲ್ಲಂಘಿಸಿದವರ ವಿರುದ್ಧ ನೀರಾವರಿ ಕಾಯ್ದೆ ಅನುಸಾರ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದ್ದಾರೆ.

ನಾಲೆ ಭದ್ರಗೊಳಿಸಿದ ಸಿಬ್ಬಂದಿ

ಲಕ್ಕಿಹಳ್ಳಿ ಬಳಿ ಒಡೆದು ಹಾಕಲಾಗಿದ್ದ ನಾಲೆಯನ್ನು ವಿಶ್ವೇಶ್ವರಯ್ಯ ಜಲ ನಿಗಮದ ಸಿಬ್ಬಂದಿ ದುರಸ್ತಿ ಮಾಡಿದ್ದಾರೆ. ಅಗತ್ಯ ಪರಿಕರಗಳನ್ನು ಬಳಸಿ ನಾಲೆಯನ್ನು ಭದ್ರಗೊಳಿಸಿದ್ದಾರೆ. ಅದಕ್ಕಾಗಿ ಶುಕ್ರವಾರ ದಿನವಿಡೀ ಕಾರ್ಯಾಚರಣೆ ನಡೆಸಿದ್ದಾರೆ.

‘ಮುಖ್ಯನಾಲೆಯನ್ನು ಒಡೆದು ಹಾಕಿದ್ದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಮೂಲ ಸೌಲಭ್ಯಕ್ಕೆ ಧಕ್ಕೆಯಾಗಿದೆ. ಇದರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಆದರೆ ಸ್ಥಳೀಯ ರೈತರು ಈ ಬಗ್ಗೆ ಜಾಗೃತಿ ವಹಿಸಬೇಕು. ಸಾರ್ವಜನಿಕ ಆಸ್ತಿಗೆ ಹಾನಿ ಮಾಡಬಾರದು’ ಎಂದು ವಿಶ್ವೇಶ್ವರಯ್ಯ ಜಲ ನಿಗಮದ ಮುಖ್ಯ ಎಂಜಿನಿಯರ್‌ ಎಚ್‌.ರವಿಶಂಕರ್‌ ಹೇಳಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ