ಉಡುಪಿಯಲ್ಲಿ ವಾಹನ ನಿಲುಗಡೆ ಸಮಸ್ಯೆ: ಮುಗಿಯದ ಗೋಳು

ಉಡುಪಿಯಲ್ಲಿ ವಾಹನ ನಿಲುಗಡೆ ಸಮಸ್ಯೆ: ಮುಗಿಯದ ಗೋಳು

ಉಡುಪಿಯಲ್ಲಿ ವಾಹನ ನಿಲುಗಡೆ ಸಮಸ್ಯೆ: ಮುಗಿಯದ ಗೋಳು

ಉಡುಪಿ: ದಿನದಿಂದ ದಿನಕ್ಕೆ ಉಡುಪಿ ನಗರವು ಅಭಿವೃದ್ಧಿಗೊಳ್ಳುತ್ತಿದ್ದರೂ ವಾಹನ ಪಾರ್ಕಿಂಗ್‌ ಸೌಲಭ್ಯ ಮರೀಚಿಕೆ ಯಾಗಿದ್ದು, ಜನರನ್ನು ಹೈರಾಣಾಗಿಸುತ್ತಿದೆ.

ಉಡುಪಿ ನಗರದ ಪ್ರಮುಖ ಸರ್ಕಲ್, ಮುಖ್ಯ ರಸ್ತೆಗಳ ಇಕ್ಕೆಲಗಳಲ್ಲೂ ಕಾರು ಸೇರಿದಂತೆ ವಾಹನಗಳನ್ನು ನಿಲುಗಡೆಗೊಳಿಸುತ್ತಿರುವುದರಿಂದ ಇತರ ವಾಹನಗಳ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ.

ನಗರದಲ್ಲಿ ವಾಹನ ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಹಲವು ವರ್ಷಗಳಿಂದ ಬೇಡಿಕೆ ಮುಂದಿಡುತ್ತಿದ್ದರೂ ಸಂಬಂಧಪಟ್ಟವರು ಪರಿಹಾರ ಸೂತ್ರಕ್ಕೆ ಮುಂದಾಗುತ್ತಿಲ್ಲ ಎನ್ನುವುದು ನಗರವಾಸಿಗಳ ದೂರಾಗಿದೆ.

ನಗರ ವ್ಯಾಪ್ತಿಯ ಯಾವುದೇ ರಸ್ತೆ ವಿಸ್ತರಣೆಯಾದರೂ ಅದರ ಇಕ್ಕೆಲಗಳಲ್ಲಿ ಸಾಲುಗಟ್ಟಿ ವಾಹನಗಳನ್ನು ನಿಲ್ಲಿಸುವುದರಿಂದ ರಸ್ತೆ ವಿಸ್ತರಣೆಯಾಗಿಯೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎನ್ನುತ್ತಾರೆ ಸಾರ್ವಜನಿಕರು.

ನಗರದ ಕರಾವಳಿ ಬೈಪಾಸ್‌ನಿಂದ ಆದಿ ಉಡುಪಿ ಕಡೆಗೆ ತೆರಳುವ ರಸ್ತೆಯು ಕೆಲ ತಿಂಗಳ ಹಿಂದಷ್ಟೇ ವಿಸ್ತರಣೆಯಾಗಿತ್ತು. ಈ ವಿಸ್ತರಣೆಯಾದ ರಸ್ತೆಯ ಇಕ್ಕೆಲಗಳಲ್ಲೂ ವಾಹನಗಳನ್ನು ನಿಲ್ಲಿಸುವುದು ವಾಹನ ದಟ್ಟಣೆಗೆ ಕಾರಣವಾಗುತ್ತಿವೆ.

ಸರ್ವಿಸ್‌ ರಸ್ತೆಗಳಿಂದ ಮುಖ್ಯರಸ್ತೆಗಳಿಗೆ ತಿರುವು ಪಡೆದುಕೊಳ್ಳುವ ರಸ್ತೆಗಳ ಬದಿಯಲ್ಲೂ ಕಾರು, ಟೆಂಪೊಗಳನ್ನು ನಿಲ್ಲಿಸುವುದರಿಂದ ಇತರ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರು ಅಳಲು ತೋಡಿಕೊಳ್ಳುತ್ತಾರೆ.

ಅಂಬಲಪಾಡಿ ಬೈಪಾಸ್‌ನಲ್ಲಿ ಸರ್ವಿಸ್‌ ರಸ್ತೆಯಿಂದ ಬ್ರಹ್ಮಗಿರಿ ರಸ್ತೆಗೆ ತಿರುವು ಪಡೆಯುವಲ್ಲೂ ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದು ಅಪಘಾತಕ್ಕೂ ಆಹ್ವಾನ ನೀಡುತ್ತಿದೆ.

ಒಂದೆಡೆ ಹದಗೆಟ್ಟಿರುವ ರಸ್ತೆಗಳು ವಾಹನ ಸವಾರರನ್ನು ಹೈರಾಣಾಗಿಸುತ್ತಿದೆ. ಜೊತೆಗೆ ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸುವುದರಿಂದ ವಾಹನ ದಟ್ಟಣೆಯ ಸಮಸ್ಯೆಯನ್ನೂ ಎದುರಿಸಬೇಕಾಗಿದೆ.

ಉಡುಪಿ ನಗರದ ಸರ್ವಿಸ್‌ ರಸ್ತೆ ಮುಂಭಾಗದ ರಸ್ತೆಯಲ್ಲಿ ಕಲ್ಸಂಕ ದಿಂದ ಬನ್ನಂಜೆವರೆಗೂ ರಸ್ತೆಯಲ್ಲೇ ವಾಹನ ನಿಲ್ಲಿಸುವುದರಿಂದ ಸಮಸ್ಯೆಯಾಗುತ್ತಿದೆ. ಅಲ್ಲದೆ ಚಿತ್ತರಂಜನ್‌ ಸರ್ಕಲ್‌, ಕೋರ್ಟ್‌ ರಸ್ತೆ, ವುಡ್‌ಲ್ಯಾಂಡ್‌ ಹೋಟೆಲ್‌ ರಸ್ತೆಯ ಇಕ್ಕೆಲಗಳಲ್ಲೂ ಅಪಾಯಕಾರಿ ರೀತಿಯಲ್ಲಿ ವಾಹನಗಳನ್ನು ಪಾರ್ಕಿಂಗ್‌ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಾರೆ.

ಉಡುಪಿ ನಗರದ ಕೆಎಸ್‌ಆರ್‌ಟಿಸಿ ಹಳೆಯ ಬಸ್‌ ನಿಲ್ದಾಣದ ಬಳಿಯ ವಿಶ್ವೇಶ್ವರಯ್ಯ ವಾಣಿಜ್ಯ ಸಂಕೀರ್ಣ ಇದ್ದ ಜಾಗದಲ್ಲಿ ವಾಹನ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗುವುದು ಎಂದು ಈ ಹಿಂದೆ ನಗರಸಭೆಯ ಅಧಿಕಾರಿಗಳು ಹೇಳುತ್ತಿದ್ದರು. ಈಗ ಆ ವಾಣಿಜ್ಯ ಸಂಕೀರ್ಣವನ್ನು ನೆಲಸಮಗೊಳಿಸಿ ತಿಂಗಳು ಕಳೆದರೂ ವಾಹನ ಪಾರ್ಕಿಂಗ್‌ಗೆ ಯಾವುದೇ ವ್ಯವಸ್ಥೆ ಮಾಡಿಲ್ಲ ಎನ್ನುತ್ತಾರೆ ಸಾರ್ವಜನಿಕರು.

ಕಿನ್ನಿಮುಲ್ಕಿಯಿಂದ ಕರಾವಳಿ ಬೈಪಾಸ್‌ ವರೆಗಿನ ಸರ್ವಿಸ್‌ ರಸ್ತೆಗಳಲ್ಲೂ ಟ್ರಕ್‌ ಸೇರಿದಂತೆ ಭಾರಿ ವಾಹನಗಳನ್ನೂ ನಿಲುಗಡೆ ಮಾಡಲಾಗುತ್ತಿದ್ದು, ಇದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಸಂಬಂಧಪಟ್ಟವರು ರಸ್ತೆಗಳಲ್ಲಿ ವಾಹನ ಪಾರ್ಕಿಂಗ್‌ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜನ ಆಗ್ರಹಿಸಿದ್ದಾರೆ.

‘ಒಂದು ಬದಿಯಲ್ಲಷ್ಟೇ ವಾಹನ ನಿಲುಗಡೆಗೆ ಅವಕಾಶ’

‘ಉಡುಪಿ ನಗರದ ಕರಾವಳಿ ಬೈಪಾಸ್‌ನಿಂದ ಆದಿ ಉಡುಪಿ ಕಡೆಗೆ ಹೋಗುವ ರಸ್ತೆಯಲ್ಲಿ ಟ್ರಾಫಿಕ್‌ ಚಿಹ್ನೆಗಳಿರುವ ಫಲಕಗಳನ್ನು ಇನ್ನೂ ಅಳವಡಿಸಿಲ್ಲ. ಆ ರಸ್ತೆಯಲ್ಲಿ ಎರಡೂ ಬದಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ರಸ್ತೆಯ ಒಂದು ಬದಿಯಲ್ಲಷ್ಟೆ ವಾಹನಗಳ ನಿಲುಗಡೆಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್‌ ಶಂಕರ್‌ ತಿಳಿಸಿದರು.

‘ನಗರದ ಸಿಟಿಬಸ್‌ ನಿಲ್ದಾಣ ಸಮೀಪ ಪ್ರದೇಶ ಸೇರಿದಂತೆ ವಿವಿಧೆಡೆ ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳಾವಕಾಶವಿಲ್ಲದ ಕಾರಣ ರಸ್ತೆಯಲ್ಲೇ ಜನರು ವಾಹನಗಳನ್ನು ನಿಲುಗಡೆ ಮಾಡುತ್ತಿದ್ದಾರೆ. ಅದು ವಾಹನ ದಟ್ಟಣೆಗೆ ಕಾರಣವಾಗದಂತೆ ಕ್ರಮಕೈಗೊಳ್ಳಲಾಗುವುದು’ ಎಂದೂ ಅವರು ಹೇಳಿದರು.

‘ಜಂಕ್ಷನ್‌ಗಳ ಸಮೀಪ ವಾಹನ ನಿಲುಗಡೆ’

‘ನಗರದ ವಿವಿಧ ಜಂಕ್ಷನ್‌ಗಳ ಬಳಿ ಅಪಾಯಕಾರಿಯಾಗಿ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಇದು ಅಪಘಾತಕ್ಕೂ ಕಾರಣವಾಗುತ್ತಿದ್ದು, ಅಲ್ಲಿ ವಾಹನ ನಿಲ್ಲಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಆಗ್ರಹಿಸಿದ್ದಾರೆ. ‘ವುಡ್‌ಲ್ಯಾಂಡ್‌ ಹೋಟೆಲ್‌ ರಸ್ತೆ ಸೇರಿದಂತೆ ನಗರದ ಕೆಲವು ರಸ್ತೆಗಳ ಇಕ್ಕೆಲಗಳಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್‌ಗಳ ಸಂಚಾರಕ್ಕೂ ತೊಡಕು ಉಂಟಾಗುತ್ತಿದೆ. ಈ ಕುರಿತು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು’ ಎಂದೂ ಅವರು ಒತ್ತಾಯಿಸಿದ್ದಾರೆ.

‘ಉಡುಪಿ ನಗರದಲ್ಲಿ ಎಲ್ಲೆಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಬೇಕು, ಎಲ್ಲೆಲ್ಲಿ ವಾಹನ ನಿಲುಗಡೆ ನಿಷೇಧಿಸಬೇಕು ಎಂಬುದರ ಬಗ್ಗೆ ಸಂಚಾರ ಠಾಣೆಯ ಪೊಲೀಸರು ಮತ್ತು ನಗರಸಭೆಯ ಎಂಜಿನಿಯರ್‌ಗಳು ಪ್ರಾಥಮಿಕ ಸರ್ವೆ ನಡೆಸಿ ವಿವಿಧ ಸ್ಥಳಗಳನ್ನು ಪಟ್ಟಿ ಮಾಡಿದ್ದಾರೆ. ಅದನ್ನು ಆಧರಿಸಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ನಗರಸಭೆಯ ಪೌರಾಯುಕ್ತ ಮಹಾಂತೇಶ ಹಂಗರಗಿ ತಿಳಿಸಿದರು.

‘ನಗರದಲ್ಲಿ ಪಾದಚಾರಿ ಮಾರ್ಗಗಳ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸಮೀಕ್ಷೆ ನಡೆಸಲಾಗಿದೆ. ಶೀಘ್ರದಲ್ಲೇ ಪಾದಚಾರಿ ಮಾರ್ಗಗಳ ಸಮಸ್ಯೆಯನ್ನೂ ಪರಿಹರಿಸಲಾಗುವುದು’ ಎಂದು ಅವರು ತಿಳಿಸಿದ್ದಾರೆ.

ಫ್ರೀ ಲೆಫ್ಟ್‌ನಲ್ಲೂ ಸಮಸ್ಯೆ

ಉಡುಪಿಯ ಕಲ್ಸಂಕ ಟ್ರಾಫಿಕ್‌ ಸಿಗ್ನಲ್‌ನಲ್ಲಿ ಫ್ರೀ ಲೆಫ್ಟ್‌ ಜಾಗಕ್ಕೆ ಸಮೀಪ ರಸ್ತೆಯಲ್ಲೇ ವಾಹನ ನಿಲುಗಡೆ ಮಾಡುತ್ತಿರುವುದರಿಂದ ಇತರ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ವಾಣಿಜ್ಯ ಸಂಸ್ಥೆಗಳಿಗೆ ಬರುವವರು ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸುವುದರಿಂದ ಫ್ರೀಲೆಫ್ಟ್‌ ಸಮೀಪ ಇತರ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ ಜನರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ