ಬಳ್ಳಾರಿಯಲ್ಲಿ ಇಂದು ಬಿಜೆಪಿ ಸಮಾವೇಶ, ‘ಬಳ್ಳಾರಿ ಚಲೋ’ ಪಾದಯಾತ್ರೆ ಸಮಾರೋಪ
ಬಳ್ಳಾರಿ: ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ವಿರೋಧಿಸಿ ಬಿಜೆಪಿ ಹಮ್ಮಿಕೊಂಡಿದ್ದ ‘ಬಳ್ಳಾರಿ ಚಲೋ’ ಪಾದಯಾತ್ರೆಯ ಸಮಾರೋಪದ ಭಾಗವಾಗಿ ಗುರುವಾರ ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಸಮಾವೇಶ ನಡೆಯಲಿದೆ.
ರಾಯಚೂರು ಜಿಲ್ಲೆಯ ಲಿಂಗಸೂಗೂರಿನಿಂದ ಸೆಪ್ಟೆಂಬರ್ 1ರಂದು ಆರಂಭಗೊಂಡ ಪಾದಯಾತ್ರೆಯು 10 ದಿನಗಳ ಬಳಿಕ, ಸೆಪ್ಟೆಂಬರ್ 9ರಂದು ಬಳ್ಳಾರಿ ತಲುಪಿತು. ಸಮಾವೇಶದಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, 25 ಸಾವಿರ ಕುರ್ಚಿಯ ವ್ಯವಸ್ಥೆ ಮಾಡಲಾಗಿದೆ’ ಎಂದು ಬಿಜೆಪಿಯ ನಾಯಕರು ತಿಳಿಸಿದರು.
ಬಳ್ಳಾರಿ ನಗರದಲ್ಲಿ ಅನಧಿಕೃತ ಬ್ಯಾನರ್ ಅಳವಡಿಸುವುದಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದೆ. ನಗರದ ಹೊರವಲಯದಲ್ಲಿ ಮತ್ತು ಸಮಾವೇಶ ಸ್ಥಳದಲ್ಲಿ ಮಾತ್ರ ಬ್ಯಾನರ್‌ಗಳ ಅಳವಡಿಕೆಗೆ ಅವಕಾಶವಿದೆ.
ಪಾದಯಾತ್ರೆ: ಸಮಾವೇಶ ಗುರುವಾರ ಸಂಜೆ 4.30 ಗಂಟೆಯ ನಂತರ ಆರಂಭವಾಗಲಿದೆ. ಇದಕ್ಕೂ ಮುನ್ನ ಬಿಜೆಪಿ ನಾಯಕರು ನಗರದ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವರು. ನಗರದ ವಾಲ್ಮೀಕಿ (ಎಸ್‌ಪಿ) ವೃತ್ತದಿಂದ ರಾಜಕುಮಾರ್ ರಸ್ತೆಯ ಮುನ್ಸಿಪಲ್ ಕಾಲೇಜು ಮೈದಾನಕ್ಕೆ ಕಾಲ್ನಡಿಗೆ ಜಾಥಾ ಮೂಲಕ ನಾಯಕರು, ಕಾರ್ಯಕರ್ತರು ಬಂದು ಸೇರುವರು.
ಸಮಾವೇಶದ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮೂವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ನಾಲ್ವರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಭದ್ರತೆಗೆ ಕ್ರಮ ಕೈಗೊಳ್ಳಲಾಗಿದೆ.
ಸಶಸ್ತ್ರ ಮೀಸಲು ಪಡೆ ಮತ್ತು ಪೊಲೀಸ್ ಸಿಬ್ಬಂದಿ ಭದ್ರತೆಗೆ ನಿಯೋಜಿಸಲಾಗಿದೆ.