ಹಿರಿಯೂರಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅದ್ದೂರಿ ಮೆರವಣಿಗೆ

ಹಿರಿಯೂರಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅದ್ದೂರಿ ಮೆರವಣಿಗೆ

ಹಿರಿಯೂರಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅದ್ದೂರಿ ಮೆರವಣಿಗೆ

ಹಿರಿಯೂರು: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಗರದಲ್ಲಿ ಶನಿವಾರ ಪುಷ್ಪಗಳಿಂದ ಅಲಂಕರಿಸಿದ ವಾಹನದಲ್ಲಿ ಶ್ರೀಕೃಷ್ಣನ ಮೂರ್ತಿ ಇರಿಸಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿ ಮೆರವಣಿಗೆ ಮಾಡಲಾಯಿತು.

ಗೊಲ್ಲ ಯಾದವ ಸಂಘದ ತಾಲ್ಲೂಕು ಘಟಕ ಹಾಗೂ ಗೊಲ್ಲ ಯಾದವ ನೌಕರರ ಸಂಘ ಹಾಗೂ ಶ್ರೀಕೃಷ್ಣ ದೇವಸ್ಥಾನದ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.

ವೇದಾವತಿ ಬಡಾವಣೆಯ ಎ.ಕೃಷ್ಣಪ್ಪ ವೃತ್ತದ ಸಮೀಪದ ಶ್ರೀಕೃಷ್ಣ ದೇವಸ್ಥಾನ ಮುಂಭಾಗದಲ್ಲಿ ವಿವಿಧ ಹೂವುಗಳಿಂದ ಅಲಂಕರಿಸಿದ ಬೆಳ್ಳಿ ಮಾದರಿ ರಥದಲ್ಲಿ ಕೂರಿಸಿದ ಶ್ರೀಕೃಷ್ಣ ಮೂರ್ತಿಗೆ ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ಡಿ.ಜೆಗಾಗಿ ರಸ್ತೆ ತಡೆ: ಪೊಲೀಸರು ಡಿ.ಜೆ.ಗೆ ತಡೆವೊಡ್ಡಿದ್ದರಿಂದ ಆಕ್ರೋಶಗೊಂಡ ಯುವಕರು ಅನುಮತಿ ನೀಡುವಂತೆ ಪಟ್ಟು ಹಿಡಿದರು. ಪೊಲೀಸರು ಪಟ್ಟು ಸಡಿಲಿಸದೇ ಇದ್ದುದ್ದರಿಂದ ಎಪಿಎಂಸಿ ಮುಂಭಾಗದ ರಾಷ್ಟ್ರೀಯ ಹೆದ್ದಾರಿ– 48 ರಲ್ಲಿ ರಸ್ತೆ ತಡೆಗೆ ಮುಂದಾದರು. ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಲು ಬರುತ್ತಿದ್ದ ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಅವರ ಕಾರನ್ನು ತಡೆದು ಡಿಜೆಗೆ ಅನುಮತಿ ಕೊಡಿಸುವಂತೆ ಆಗ್ರಹಿಸಿದರು. 2–3 ಗಂಟೆ ಹಗ್ಗ ಜಗ್ಗಾಟದ ನಂತರ ಕಾಂಗ್ರೆಸ್ ಮುಖಂಡರು ಮುಖ್ಯಮಂತ್ರಿ– ಉಪಮುಖ್ಯಮಂತ್ರಿ ಕಚೇರಿಯನ್ನು ಸಂಪರ್ಕಿಸಿದ ನಂತರ 4 ಸ್ಪೀಕರ್, 2 ಹೂಪರ್‌ಗೆ ಪೊಲೀಸರು ಒಪ್ಪಿಗೆ ಸೂಚಿಸಿದರು. ಹೀಗಾಗಿ ಬೆಳಿಗ್ಗೆ 11ಕ್ಕೆ ಆರಂಭವಾಗಬೇಕಿದ್ದ ಮೆರವಣಿಗೆ ಮಧ್ಯಾಹ್ನ 2 ಗಂಟೆಗೆ ಶುರುವಾಯಿತು.

ಶ್ರೀಕೃಷ್ಣ ದೇವಸ್ಥಾನದಿಂದ ಹೊರಟ ಮೆರವಣಿಗೆ ಚಳ್ಳಕೆರೆ ರಸ್ತೆ, ಅಂಬೇಡ್ಕರ್ ವೃತ್ತ, ತಾಲ್ಲೂಕು ಕಚೇರಿ ಮುಂಭಾಗದಿಂದ ನಗರದೊಳಗೆ ಪ್ರವೇಶಿಸಿದಾಗ ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ನೆರೆದಿದ್ದ ಸಾರ್ವಜನಿಕರು ಅದನ್ನು ಕಣ್ತುಂಬಿಕೊಂಡರು.

ಕೋಲಾಟ, ವೀರಗಾಸೆ, ಉರುಮೆ, ನಾಸಿಕ್ ಡೋಲು, ಗೊಂಬೆಯಾಟ, ಚಂಡೆ, ಮದ್ದಳೆ, ಡೊಳ್ಳು ಕುಣಿತ, ಕೇರಳ ತಮಟೆ ವಾದ್ಯ ಬಾರಿಸುವವರ ಸನಿಹದಲ್ಲಿ ನೂರಾರು ಯುವಕರು ನರ್ತಿಸಿದರು. ಸ್ಪೀಕರ್‌ಗಳಿಂದ ಹೊರಹೊಮ್ಮಿದ ಹಾಡುಗಳಿಗೆ ಬಿರು ಬಿಸಿಲನ್ನೂ ಲೆಕ್ಕಿಸದೆ ಸಾವಿರಾರು ಯುವಕರು ಮೈಮರೆತು ಕುಣಿದು ಕುಪ್ಪಳಿಸಿದರು.

ವಾಹನ ಸವಾರರ ಪರದಾಟ: ಹಿರಿಯೂರಿನಲ್ಲಿ ಪ್ರಧಾನ ರಸ್ತೆಗೆ ಪರ್ಯಾಯ ರಸ್ತೆ ಇಲ್ಲದ್ದರಿಂದ ಮೆರವಣಿಗೆ ಕಾಲಕ್ಕೆ ಸಂಚಾರ ಅಸ್ತವ್ಯಸ್ತವಾಗಿತ್ತು. ವಾರದ ಸಂತೆಯ ದಿನವಾಗಿದ್ದರಿಂದ ವರ್ತಕರು, ಗ್ರಾಹಕರು ವಾಹನಗಳನ್ನು ಕೊಂಡೊಯ್ಯಲಾರದೆ ಸಾಕಷ್ಟು ತೊಂದರೆ ಅನುಭವಿಸಿದರು.

ಮೆರವಣಿಗೆ ಆರಂಭಕ್ಕೂ ಮೊದಲು ಶ್ರೀಕೃಷ್ಣ ರಥಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ, ನೆಲಮಂಗಲ ಸಮೀಪದ ವನಕಲ್ಲು ಮಠದ ರಮಾನಂದ ಸ್ವಾಮೀಜಿ, ಕಾಡುಗೊಲ್ಲರ ಸಂಘದ ರಾಜ್ಯ ಘಟಕದ ಅಧ್ಯಕ್ಷ ರಾಜಣ್ಣ, ವಿಶ್ವೇಶ್ವರಯ್ಯ ಜಲನಿಗಮದ ನಿವೃತ್ತ ಎಂ.ಡಿ. ಸಣ್ಣ ಚಿತ್ತಯ್ಯ, ಜಿ.ಪಂ. ಮಾಜಿ ಸದಸ್ಯ ಸಿ.ಬಿ. ಪಾಪಣ್ಣ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಅಭಿನಂದನ್ ಪೂಜೆ ಸಲ್ಲಿಸಿದರು.

ಮುಖಂಡರಾದ ಎನ್.ಆರ್. ಲಕ್ಷ್ಮಿಕಾಂತ್, ಆರ್. ರಂಗಸ್ವಾಮಿ, ಉಗ್ರಮೂರ್ತಿ, ಪಿ.ಆರ್.ದಾಸ್, ಶಿವರಂಜನಿ ಯಾದವ್, ಪ್ರಭುಯಾದವ್, ಶಿವಣ್ಣ, ವಿ.ವಿಶ್ವನಾಥ್, ಬಿ.ಕೆ.ಕರಿಯಣ್ಣ, ನಿರಂಜನ್, ಡಿ,ಯಶೋಧರ, ಎಂ. ಜಯಣ್ಣ, ರವೀಂದ್ರಪ್ಪ, ಶ್ರೀಕೃಷ್ಣ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಸೇರಿದಂತೆ ತಾಲೂಕಿನ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಜನರು ಪಾಲ್ಗೊಂಡಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ