
ಚಿಕ್ಕಬಳ್ಳಾಪುರ: ರೇಣುಮಾಕಲಹಳ್ಳಿಯಲ್ಲಿ ‘ಪಶು ಸ್ಪಂದನ’ ಆರೋಗ್ಯ ತಪಾಸಣೆ ಶಿಬಿರ
ಚಿಕ್ಕಬಳ್ಳಾಪುರ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತಾಲ್ಲೂಕಿನ ರೇಣುಮಾಕಲಹಳ್ಳಿ ಗ್ರಾಮದಲ್ಲಿ ಈಚೆಗೆ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ‘ಪಶು ಸ್ಪಂದನ’ ಹೆಸರಿನಲ್ಲಿ ಪಶು ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಂಡಿದ್ದರು.
ರೈತರಲ್ಲಿ ಪಶುಗಳ ಆರೋಗ್ಯ, ಸಮರ್ಪಕ ಪೋಷಣೆ, ರೋಗ ನಿಯಂತ್ರಣ ಹಾಗೂ ವೈಜ್ಞಾನಿಕ ರೀತಿಯಲ್ಲಿ ಜಾನುವಾರು ಸಾಕಾಣಿಕೆ ಕುರಿತು ಅರಿವು ಮೂಡಿಸುವುದು ಶಿಬಿರದ ಮುಖ್ಯ ಉದ್ದೇಶವಾಗಿತ್ತು. ಚಿಮುಲ್ ನಿರ್ದೇಶಕ ಕೆ.ವಿ. ನಾಗರಾಜ್ ಕಾರ್ಯಕ್ರಮ ಉದ್ಘಾಟಿಸಿದರು.
ರೈತರಿಗೆ ಸಂಪನ್ಮೂಲ ವ್ಯಕ್ತಿಗಳು ಮತ್ತು ವೈದ್ಯರು ಪಶುಗಳ ಆರೋಗ್ಯ ನಿರ್ವಹಣೆ, ರೋಗಗಳ ತಡೆಗಟ್ಟುವಿಕೆ, ಲಸಿಕಾಕರಣ ಹಾಗೂ ವೈಜ್ಞಾನಿಕ ಜಾನುವಾರು ಸಾಕಾಣಿಕೆ ಕುರಿತು ಮಾಹಿತಿ ನೀಡಿದರು. ಈಚೆಗೆ ಮಳೆ ಕೊರತೆಯಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಉಂಟಾಗಿರುವ ಹಸಿರು ಮೇವಿನ ಕೊರತೆ ಗಮನದಲ್ಲಿ ಇಟ್ಟುಕೊಂಡು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ರೈತರಿಗೆ ರಸಮೇವಿನ ಬಗ್ಗೆಯೂ ಮಾಹಿತಿ ನೀಡಲಾಯಿತು.
ಶಿಬಿರದಲ್ಲಿ ಪಶುವೈದ್ಯರು ಜಾನುವಾರುಗಳ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಿದರು. 55 ಹಸುಗಳನ್ನು ಪರೀಕ್ಷಿಸಲಾಯಿತು. ರೇಣುಮಾಕಲಹಳ್ಳಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ‘ಬ್ಲೂ ಟಂಗ್’ ಹಾಗೂ ಕೆಚ್ಚಲುಬಾವು ರೋಗಗಳ ಬಗೆಗಿನ ನಿರ್ವಹಣಾ ಕ್ರಮಗಳ ಬಗ್ಗೆ ವಿವರಿಸಲಾಯಿತು. ರೈತರಿಗೆ ಅಗತ್ಯವಾದ ಚಿಕಿತ್ಸೆ ಹಾಗೂ ಔಷಧಿಗಳನ್ನು ಒದಗಿಸಲಾಯಿತು.
ಮುಖ್ಯ ಪಶುವೈದ್ಯಾಧಿಕಾರಿ ಜ್ಞಾನೇಶ್, ಚಿಮುಲ್ ಉಪ ವ್ಯವಸ್ಥಾಪಕ ಮನೋರಂಜನ್ ರೆಡ್ಡಿ, ವಿಸ್ತರಣಾಧಿಕಾರಿ ವೇಣು, ಪಶುವೈದ್ಯಾಧಿಕಾರಿಗಳಾದ ಡಿ. ರವಿ, ನರೇಶ್, ಜಿಕೆವಿಕೆ ಪ್ರಾಧ್ಯಾಪಕರಾದ ಎನ್. ಮಂಜುಳಾ, ಗೋವಿಂದ ಗೌಡ ವಿ. ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.