
ಸಂಖ್ಯಾಬಲವಿದ್ದರೆ ಯುಸಿಸಿ ವಿಧೇಯಕ ಮಂಡಿಸಿ: ಬಿಜೆಪಿಗೆ ಒಮರ್ ಅಬ್ದುಲ್ಲಾ ಸವಾಲು
ಶ್ರೀನಗರ: ಬಿಜೆಪಿಯು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ವಿಧೇಯಕವನ್ನು ಪ್ರತ್ಯೇಕ ರಾಜ್ಯಗಳ ಮೂಲಕ ಜಾರಿಗೆ ತರಲು ಯತ್ನಿಸುವ ಬದಲು, ಅದನ್ನು ಅಂಗೀಕರಿಸಲು ಅಗತ್ಯವಿರುವ ಸಂಖ್ಯಾಬಲ ಹೊಂದಿದ್ದರೆ ಸಂಸತ್ತಿನಲ್ಲೇ ಮಂಡಿಸಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
‘ಬಿಜೆಪಿಯು ಯುಸಿಸಿಯನ್ನು ಹಿಂಬಾಗಿಲಿನಿಂದ ತರಬಾರದು. ನಿಮ್ಮ ಬಳಿ ಸಂಖ್ಯಾಬಲವಿದ್ದರೆ ಅದನ್ನು ಸಂಸತ್ತಿಗೆ ತನ್ನಿ. ವಿವಿಧ ರಾಜ್ಯಗಳ ಮೂಲಕ ಏಕೆ ಜಾರಿಗೊಳಿಸಲು ಹೊರಟಿದ್ದೀರಿ? ಏನೇ ಆದರೂ, ನಿಮ್ಮ ಎನ್‌ಡಿಎ ಕೂಟದಲ್ಲೇ ಎಲ್ಲರೂ ಇದನ್ನು ಒಪ್ಪುತ್ತಿಲ್ಲ. ವರದಿಗಳ ಪ್ರಕಾರ, ಜನತಾ ದಳವು ಇದನ್ನು ಬಿಹಾರದಲ್ಲಿ ಜಾರಿಗೊಳಿಸುವುದಿಲ್ಲ ಎಂದಿದೆ’ ಎಂದು ತಿಳಿಸಿದ್ದಾರೆ.
ಅವರ ಮಿತ್ರಪಕ್ಷಗಳೇ ಇದನ್ನು ಬೆಂಬಲಿಸದಿರುವಾಗ, ಇದನ್ನು ಸಂಸತ್ತಿನಲ್ಲಿ ಅಂಗೀಕರಿಸಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುವುದಿಲ್ಲ. ಬಹುಶಃ ಇದೇ ಕಾರಣಕ್ಕೆ ಅವರು ಬೇರೆ ಮಾರ್ಗವನ್ನು ಆಯ್ದುಕೊಂಡಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮಾತ್ರ ಯುಸಿಸಿ ಜಾರಿಯಾದರೆ ಅದು ಏಕರೂಪ ಕಾನೂನಾಗುವುದಿಲ್ಲ, ಏಕೆಂದರೆ ದೇಶದ ಎಲ್ಲಾ ರಾಜ್ಯಗಳಲ್ಲೂ ಅವರು ಅಧಿಕಾರದಲ್ಲಿಲ್ಲ ಎಂದು ಹೇಳಿದ್ದಾರೆ.
ಇಡೀ ದೇಶವು ಬಿಜೆಪಿ ಆಡಳಿತದ ರಾಜ್ಯವಲ್ಲ. ಅವರ ಆಡಳಿತವಿಲ್ಲದ ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿವೆ. ಆದ್ದರಿಂದ, ನೀವು ಇದನ್ನು ಬಿಜೆಪಿ ರಾಜ್ಯಗಳಿಗೆ ಮಾತ್ರ ಅನ್ವಯಿಸಿದರೆ, ಅದು ಸಾರ್ವತ್ರಿಕ ಆಗುವುದಿಲ್ಲ ಮತ್ತು ಈ ರೀತಿಯ ನಿರ್ಧಾರವನ್ನು ಪ್ರತ್ಯೇಕ ರಾಜ್ಯಗಳು ತೆಗೆದುಕೊಳ್ಳಬಾರದು. ಇದನ್ನು ಇಡೀ ದೇಶವೇ ನಿರ್ಧರಿಸಬೇಕು. ಆ ಕೆಲಸ ಸಂಸತ್ತು ಮಾಡುತ್ತದೆ ಎಂದಿದ್ದಾರೆ.