
‘ಇವತ್ತು ಕಂಪನಿಯಲ್ಲಿ ನಿಮ್ಮದು ಕೊನೆಯ ದಿನ’: ಒರಾಕಲ್ನಲ್ಲಿ ಮತ್ತೆ ಉದ್ಯೋಗ ಕಡಿತ
‘ನಿಮ್ಮ ಹುದ್ದೆ ಕುರಿತಂತೆ ಒಂದು ಕಠಿಣ ಸುದ್ದಿಯನ್ನು ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.. ಇವತ್ತು ಕಂಪನಿಯಲ್ಲಿ ನಿಮ್ಮದು ಕೊನೆಯ ದಿನ’
ಐಟಿ ಕಂಪನಿ ಒರಾಕಲ್ನಲ್ಲಿ ಉದ್ಯೋಗ ಕಡಿತದ ಸರಣಿ ಮುಂದುವರಿದಿದ್ದು, ಬೆಳ್ಳಂಬೆಳಗ್ಗೆ 6 ಗಂಟೆ ಸುಮಾರಿಗೆ ಬಂದ ಈ ಸಂದೇಶ ನೌಕರರನ್ನು ದಿಗ್ಭ್ರಮೆಗೊಳಿಸಿದೆ.
ಕೃತಕ ಬುದ್ಧಿಮತ್ತೆ ಮತ್ತು ಕ್ಲೌಡ್ ಮೂಲಸೌಕರ್ಯಕ್ಕಾಗಿ ಒರಾಕಲ್ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದ್ದು, ಅದರ ನಡುವೆಯೇ ಈ ಉದ್ಯೋಗ ಕಡಿತದ ಬೆಳವಣಿಗೆ ಆಗಿದೆ ಎಂದು ಬಿಸಿನೆಸ್ ಇನ್ಸೈಡರ್' ವರದಿ ಮಾಡಿದೆ. ಈ ಬಾರಿ ಎಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ ಎಂಬುದನ್ನು ಒರಾಕಲ್ ಬಹಿರಂಗಪಡಿಸಿಲ್ಲ.
ವ್ಯಾಪಕ ಸಾಂಸ್ಥಿಕ ಬದಲಾವಣೆಯ ಭಾಗವಾಗಿ ನಿಮ್ಮನ್ನು ಕೆಲಸದಿಂದ ತೆಗೆಯಲಾಗುತ್ತಿದೆ ಎಂದು ಇಮೇಲ್ನಲ್ಲಿ ತಿಳಿಸಲಾಗಿದೆ. ನಿರ್ದಿಷ್ಟ ಉದ್ಯೋಗಿಯನ್ನು ಏಕೆ ಕೆಲಸದಿಂದ ತೆಗೆದುಹಾಕಲಾಗುತ್ತಿದೆ ಎಂಬ ಬಗ್ಗೆ ಹೆಚ್ಚಿನ ವಿವರ ನೀಡಿಲ್ಲ ಎಂದು ತಿಳಿದುಬಂದಿದೆ.
ನೀವು ಬಳಸುತ್ತಿರುವ ಒರಾಕಲ್ ಸಂಸ್ಥೆಯ ಕಂಪ್ಯೂಟರ್, ಇಮೇಲ್, ವಾಯ್ಸ್ಮೇಲ್ ಮತ್ತು ಫೈಲ್ಗಳು ಸದ್ಯದಲ್ಲೇ ನಿಷ್ಕ್ರಿಯಗೊಳ್ಳಲಿವೆ ಎಂದೂ ತಿಳಿಸಲಾಗಿದೆ. ಉದ್ಯೋಗ ಬಿಟ್ಟ ನಂತರದ ಪರಿಹಾರಧನ, ರಿಲೀವಿಂಗ್ ಲೆಟರ್ ಸಂಬಂಧಿತ ಇತರ ದಾಖಲೆಗಳ ಕುರಿತಾದ ಮಾಹಿತಿ ಪಡೆಯಲು ವೈಯಕ್ತಿಕ ಇಮೇಲ್ ವಿಳಾಸ ಒದಗಿಸುವಂತೆಯೂ ಕೇಳಲಾಗಿದೆ.
ಎಐ ಬೂಮ್ಗೆ ಅಗತ್ಯವಾದ ಡೇಟಾ ಸೆಂಟರ್ಗಳು ಮತ್ತು ಕಂಪ್ಯೂಟಿಂಗ್ ಮೂಲಸೌಕರ್ಯ ನಿರ್ಮಿಸಲು ಒರಾಕಲ್ ಭಾರಿ ಪ್ರಮಾಣದ ಹೂಡಿಕೆ ಮಾಡುತ್ತಿದೆ. 2027ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಒರಾಕಲ್ ಬಂಡವಾಳ ವೆಚ್ಚವನ್ನು 28.5 ಬಿಲಿಯನ್ ಡಾಲರ್ಗೆ ಹೆಚ್ಚಿಸಿದೆ. ವರ್ಷದ ಹಿಂದಿನ ಇದೇ ಅವಧಿಯಲ್ಲಿ ಖರ್ಚು ಮಾಡಿದ 8.5 ಬಿಲಿಯನ್ ಡಾಲರ್ಗಿಂತ ಇದು ಮೂರು ಪಟ್ಟು ಹೆಚ್ಚು.
21,000 ಉದ್ಯೋಗ ಕಡಿತಗೊಳಿಸಿರುವ ಒರಾಕಲ್
2026ರ ಹಣಕಾಸು ವರ್ಷದಲ್ಲಿ ಒರಾಕಲ್ ಈವರೆಗೆ 21,000 ಉದ್ಯೋಗ ಕಡಿತ ಮಾಡಿದೆ. ಮೇ ಹೊತ್ತಿಗೆ ಸಂಸ್ಥೆಯ ಉದ್ಯೋಗಿಗಳ ಸಂಖ್ಯೆ ಜಾಗತಿಕವಾಗಿ 1,41,000 ಆಗಿತ್ತು. ಇದೇ ಅವಧಿಯಲ್ಲಿ ಕಳೆದ ವರ್ಷ 1,62,000 ಉದ್ಯೋಗಿಗಳಿದ್ದರು.
ಸುಮಾರು 1.84 ಬಿಲಿಯನ್ ಡಾಲರ್ ಮೊತ್ತವನ್ನು ಕಂಪನಿಯು ಉದ್ಯೋಗ ಬಿಟ್ಟವರಿಗೆ ಪರಿಹಾರ ಮತ್ತು ಇತರೆ ವೆಚ್ಚಗಳಿಗೆ ನೀಡಿದೆ.