
ತ್ರೀಡಿ ಕಲೆಯ ಮೋಡಿ | ಲಾಕ್‌ಡೌನ್‌ನಲ್ಲಿ ಅರಳಿದ ಕಲಾವಿದ: ಜನರ ಮೆಚ್ಚುಗೆ
ದೊಡ್ಡಬಳ್ಳಾಪುರ: ಕೋವಿಡ್-19 ಲಾಕ್‌ಡೌನ್ ಅನೇಕರ ಬದುಕಿನಲ್ಲಿ ಸಂಕಷ್ಟದ ನೆರಳು ಮೂಡಿಸಿದ್ದರೆ, ಪವನ್ ಧನಂಜಯ್ ಅವರ ಪಾಲಿಗೆ ಅದೇ ಅವಧಿ ಬಣ್ಣಗಳ ಲೋಕಕ್ಕೆ ಪ್ರವೇಶದ್ವಾರವಾಯಿತು.
ಬಿಡುವಿನ ಸಮಯವನ್ನು ಸೃಜನಶೀಲತೆಗೆ ಮೀಸಲಿಟ್ಟು ಕುಂಚ ಹಿಡಿದ ಅವರು, ಇಂದು ಭಾವಚಿತ್ರ, ತ್ರಿಡಿ ಚಿತ್ರಕಲೆ ಸೇರಿದಂತೆ ವಿವಿಧ ಕಲಾಶೈಲಿಗಳನ್ನು ರಚಿಸುತ್ತಿದ್ದಾರೆ.
ಅವರ ಕುಂಚದಿಂದ ಮೂಡಿದ ಕಲಾಕೃತಿಗಳಿಗೆ ಕಲಾರಸಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯ ಸಂದರ್ಭ ರಚಿಸಿದ ‘ಶ್ರೀರಾಮ ಕಲ್ಯಾಣೋತ್ಸವ’ ಕಲಾಕೃತಿ ₹2.22 ಲಕ್ಷಕ್ಕೆ ಮಾರಾಟವಾಗಿದ್ದು, ಇದುವರೆಗೆ ರಚಿಸಿದ ಚಿತ್ರಗಳ ಪೈಕಿ ಅತಿ ಹೆಚ್ಚಿನ ಬೆಲೆಗೆ ಮಾರಾಟವಾದ ಕಲಾಕೃತಿಯಾಗಿದೆ.
ದೊಡ್ಡಬಳ್ಳಾಪುರದ ಮಾರುತಿನಗರ ನಿವಾಸಿ, ಟೆಕಿ ಪವನ್ ಧನಂಜಯ್ ಶಾಲಾ ಹಂತದಿಂದಲೇ ಚಿತ್ರ ಬಿಡಿಸುವ ಆಸಕ್ತಿ ಇದ್ದರೂ ತಂದೆಯ ಅಣತಿಯಂತೆ ಶಿಕ್ಷಣದ ಕಡೆ ಹೆಚ್ಚು ಗಮನ ನೀಡಿದರು. ಬಿಎಸ್‌ಸಿ ಪದವಿ ಪೂರ್ಣಗೊಳ್ಳುವವರೆಗೂ ಚಿತ್ರಕಲೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಪದವಿ ಪೂರ್ಣಗೊಳಿಸುವ ಹೊತ್ತಿಗೆ ಲಾಕ್‌ಡೌನ್ ಆರಂಭವಾಯಿತು. ಆಗ ಖಾಲಿತನ ತುಂಬಲು ಕ್ಯಾನ್ವಸ್‌ಗೆ ಹಚ್ಚಿದ ಬಣ್ಣ ಮುಂದೆ ಅದೇ ಕಲಾವಿದನಾಗಿ ರೂಪಿಸಿತು.
ಪ್ರಸ್ತುತ ಇಂಪ್ರೆಸ್ ಕಲಾಶೈಲಿಯಲ್ಲಿ ಚಿತ್ರಗಳನ್ನು ರಚಿಸುತ್ತಿರುವ ಪವನ್ ಧನಂಜಯ್, ಸ್ನೇಹಿತರೊಂದಿಗೆ ಕಾನ್ಪುರ ಹಾಗೂ ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ತಮ್ಮ ಕಲಾಕೃತಿಗಳ ಪ್ರದರ್ಶನ ಆಯೋಜಿಸಿದ್ದಾರೆ. ಬೆಂಗಳೂರಿನಲ್ಲಿ ಎರಡು ಬಾರಿ ನಡೆದ ಚಿತ್ರಸಂತೆಯಲ್ಲಿಯೂ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ.
‘ನಗು’ ಸೆರೆಹಿಡಿದ ಕುಂಚ: ನಟ ಪುನೀತ್ ರಾಜ್‌ಕುಮಾರ್ ಚಿತ್ರ ರಚಿಸುವಾಗ ಅವರ ಸಹಜ ನಗುವಿನ ಭಾವವನ್ನು ಕ್ಯಾನ್ವ್ ಮೇಲೆ ಮೂಡಿಸಿದ್ದಾರೆ. ಚಿತ್ರವನ್ನು ಖರೀದಿಸಿದವರು ಪುನೀತ್ ಅವರ ಸಹಜ ನಗು ಚಿತ್ರದಲ್ಲಿ ಮೂಡಿದೆ ಎಂದು ಹೇಳಿದಾಗ, ಪಟ್ಟ ಶ್ರಮ ಸಾರ್ಥಕವಾಯಿತು ಎನ್ನಿಸುತ್ತದೆ’ ಎನ್ನುತ್ತಾರೆ ಪವನ್ ಧನಂಜಯ್.
ಕೈಮುಗಿದು ನಿಂತಿರುವ ಆಂಜನೇಯ ಕಲಾಕೃತಿಯೂ ಸೊಗಸಾಗಿ ಮೂಡಿ ಬಂದಿದೆ. ಈ ಚಿತ್ರವು ನೋಡುಗರ ಮೆಚ್ಚುಗೆಗೆ ಪಾತ್ರವಾಗಿದೆ. ಇತ್ತೀಚೆಗೆ ರಚಿಸಿದ ಮಹಿಳೆಯೊಬ್ಬರ ಭಾವಚಿತ್ರವನ್ನು ಬೆಂಗಳೂರಿನ ಐಐಎಂ ಸಂಸ್ಥೆಯ ಪ್ರಾಧ್ಯಾಪಕರೊಬ್ಬರು ಖರೀದಿಸಿದ್ದಾರೆ.
ತ್ರೀಡಿ ಕಲೆಯ ಮೋಡಿ: ದಾರ ಮತ್ತು ಸ್ಕೇಲ್‌ನಂತಹ ಸರಳ ಸಾಧನ ಬಳಸಿಕೊಂಡು ರಚಿಸಿರುವ ತ್ರೀಡಿ ಕಲಾಕೃತಿಗಳು ವಾಸ್ತವಿಕತೆಯೊಂದಿಗೆ ಭ್ರಮೆ ಮೂಡಿಸುತ್ತವೆ. ವೈವಿಧ್ಯಮಯ ಭಾವನೆಗಳಿಗೆ ಬಣ್ಣ ಹಚ್ಚಿ ಅವುಗಳಿಗೆ ಅಮೂರ್ತ ರೂಪು ನೀಡಿದ್ದಾರೆ. ಇವರ ತ್ರಿಡಿ ಚಿತ್ರಗಳನ್ನು ಕಂಡ ಸ್ನೇಹಿತರು, ‘ಇವು ಕಂಪ್ಯೂಟರ್‌ನಲ್ಲಿ ಸೃಷ್ಟಿಸಿದ ಚಿತ್ರಗಳಿರಬೇಕು’ ಎಂದೇ ಕೇಳಿದರಂತೆ.
‘ತ್ರೀಡಿ ಚಿತ್ರ ರಚಿಸುವಾಗ ಕಲಾವಿದನ ತಾಳ್ಮೆಗೆ ನಿಜವಾದ ಪರೀಕ್ಷೆ ಎದುರಾಗುತ್ತದೆ. ರೇಖೆಗಳ ನಿಖರತೆ, ಅಳತೆ, ಬೆಳಕು-ನೆರಳಿನ ಹೊಂದಾಣಿಕೆ ಹಾಗೂ ಬಣ್ಣಗಳ ಬಳಕೆಯಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯ’ ಎನ್ನುತ್ತಾರೆ ಪವನ್ ಧನಂಜಯ್.
ಧನಂಜಯ್ ಕಲಾವಿದ ಮಾತ್ರವಲ್ಲ, ತಮ್ಮ ಮನೆಯ ಕೋಣೆಯೊಂದರಲ್ಲಿ ಕಾಶ್ಮೀರ ಕೆಸರಿ ಬೆಳೆಯುವ ಮೂಲಕ ವಿಶಿಷ್ಟ ಪ್ರಯೋಗ ನಡೆಸುತ್ತಿದ್ದಾರೆ. ಚಿತ್ರಕಲೆಯೊಂದಿಗೆ ಮನೆಯಲ್ಲೇ ಕುಳಿತು ವಿವಿಧ ಕಂಪನಿಗಳು ಹಾಗೂ ಉದ್ಯಮಗಳ ಅಗತ್ಯಕ್ಕೆ ತಕ್ಕ ಸಾಫ್ಟ್‌ವೇರ್‌ಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.
ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ವ್ಯವಸ್ಥಿತ ಕಸ ನಿರ್ವಹಣೆಗೆ ನಾಗರಿಕರು ಹಾಗೂ ಪೌರಕಾರ್ಮಿಕರ ನಡುವೆ ಸಮನ್ವಯ ಕಲ್ಪಿಸುವ ‘ನಗರಸೇವಾ’ ಮೊಬೈಲ್ ಆಪ್ ಅನ್ನೂ ಅಭಿವೃದ್ಧಿಪಡಿಸಿದ್ದಾರೆ.
ಇದೀಗ ಸ್ವಂತ ಕಂಪನಿ ನೋಂದಾಯಿಸಿಕೊಂಡಿದ್ದು, ಸಾಫ್ಟ್‌ವೇರ್ ಕ್ಷೇತ್ರದಲ್ಲಿನ ಹೊಸ ಸಾಧ್ಯತೆ ಅನ್ವೇಷಿಸುವುದರ ಜತೆಗೆ, ಬಣ್ಣ, ರೇಖೆ ಮತ್ತು ಭಾವಗಳ ಮೂಲಕ ತಮ್ಮ ಕಲಾ ಪಯಣವನ್ನೂ ಮುಂದುವರಿಸುತ್ತಿದ್ದಾರೆ.
‘ನನ್ನ ಕಲಾ ಜೀವನದಲ್ಲಿ ನನ್ನ ಗುರು ಕಲಾವಿದ ಅಬ್ದುಲ್ಲಾ ಪಠಾಣ್ ಅವರ ಪಾತ್ರ ಬಹಳ ಮುಖ್ಯವಾಗಿದೆ. ಅವರಿಂದ ಸಾಕಷ್ಟು ಕಲಿತಿದ್ದೇನೆ. ಅವರ ಕಲಾಕೃತಿಗಳು, ವಿಶೇಷವಾಗಿ ಅವರ ಅಮೂರ್ತ ಚಿತ್ರಕಲೆ, ನನಗೆ ವಿಭಿನ್ನ ರೀತಿಯಲ್ಲಿ ಯೋಚಿಸಲು ಮತ್ತು ಹೊಸ ಪ್ರಯೋಗ ಮಾಡಲು ಪ್ರೇರಣೆ ನೀಡಿದೆ’ ಎಂದು ಧನಂಜಯ್ ಪವನ್ ತಿಳಿಸಿದರು.
‘ಮುಂದಿನ ದಿನಗಳಲ್ಲಿ ಕಲಾ ಶಾಲಾ ಆರಂಭಿಸುವ ಯೋಜನೆ ಇದೆ. ಮಕ್ಕಳಿಗಾಗಿ ಕಾರ್ಯಾಗಾರ ಆಯೋಜಿಸಿ, ಕಲೆಯ ಬಗ್ಗೆ ಆಸಕ್ತಿ ಮೂಡಿಸಲಾಗುವುದು. ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ, ಮಕ್ಕಳಿಗೆ ಚಿತ್ರಕಲೆ ಮತ್ತು ಕಲಾ ಚಟುವಟಿಕೆಗಳ ಕುರಿತು ತರಗತಿ ನಡೆಸುತ್ತಿದ್ದೇನೆ. ಮಕ್ಕಳಲ್ಲಿ ಅಡಗಿರುವ ಸೃಜನಶೀಲತೆ ಹೊರತರುವುದರ ಜೊತೆಗೆ, ಕಲೆಯ ಮೂಲಕ ಅವರ ಆತ್ಮವಿಶ್ವಾಸ ಮತ್ತು ಕಲ್ಪನಾ ಶಕ್ತಿಯನ್ನು ಬೆಳೆಸುವ ಪ್ರಯತ್ನ ಮಾಡುತ್ತಿದ್ದೇನೆ’ ಎನ್ನುತ್ತಾರೆ ಧನಂಜಯ್.