
ಗದಗದಲ್ಲಿ ಮಳೆ ಕೊರತೆಯಿಂದ ಮೀನುಗಾರರಿಗೆ ಬದುಕು ದುರ್ಬರ
ಗದಗ: ಜಿಲ್ಲೆಯಲ್ಲಿ ಮಳೆಯ ತೀವ್ರ ಕೊರತೆ ಉಂಟಾಗಿರುವುದು ಎಲ್ಲ ವರ್ಗಗಳ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕೆರೆ–ಕಟ್ಟೆಗಳು ಬರಿದಾಗಿರುವುದರಿಂದ ಮೀನುಗಾರರು ಸಹ ತೊಂದರೆಗೀಡಾಗಿದ್ದಾರೆ.
ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ 32, ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 242 ಕೆರೆಗಳಿವೆ. ಒಟ್ಟು ಒಂಬತ್ತು ಮೀನುಗಾರಿಕಾ ಸಹಕಾರ ಸಂಘಗಳು ವಿವಿಧ ಕೆರೆಗಳಲ್ಲಿ ಮೀನುಗಾರಿಕೆಯಲ್ಲಿ ತೊಡಗಿವೆ. ಮೀನುಗಾರರ ಪೈಕಿ ರೈತರೂ ಇದ್ದಾರೆ. ಮೀನುಗಾರಿಕೆಯಿಂದಾದರೂ ಜೀವನ ನಿರ್ವಹಣೆ ಮಾಡಬಹುದೆಂಬ ಅವರ ನಿರೀಕ್ಷೆ ಹುಸಿಯಾಗಿದೆ.
ತುಂಗಭದ್ರಾ, ಮಲಪ್ರಭಾ ನದಿಯಿಂದ ಕಾಲುವೆ ಮೂಲಕ ಹರಿಯುವ ನೀರು, ಆ ಮಾರ್ಗದ ಕೆರೆಗಳ ಒಡಲು ತಣಿಸುತ್ತಿತ್ತು. ಉತ್ತಮವಾಗಿ ಮಳೆಯಾಗಿದ್ದರೆ ಇನ್ನುಳಿದ ಕೆರೆಗಳು ಭರ್ತಿಯಾಗುತ್ತಿದ್ದವು. ಇದು ಮೀನುಗಾರಿಕೆಗೆ ವರದಾನವಾಗುತ್ತಿತ್ತು. ಮಳೆ ಕೊರತೆ ಹಾಗೂ ಕಾಲುವೆಗಳಿಂದ ಸಮರ್ಪಕವಾಗಿ ನೀರು ಹರಿಯದಿರುವುದರಿಂದ ಮೀನು ಕೃಷಿಗೆ ಹಿನ್ನಡೆ ಉಂಟಾಗಿದೆ.
‘ಮುಂಡರಗಿ ತಾಲ್ಲೂಕಿನ ಡಂಬಳ ಕೆರೆಗೆ ಈ ಮೊದಲು ಜೂನ್, ಜುಲೈನಲ್ಲೇ ನೀರು ಹರಿಸಿ ತುಂಬಿಸುತ್ತಿದ್ದರು. ಮೂರು ವರ್ಷದಿಂದ ಡಿಸೆಂಬರ್‌ನಲ್ಲಿ ಭರ್ತಿ ಮಾಡಲಾಗುತ್ತಿದೆ. ಈ ವರ್ಷ ಮಳೆ ಇಲ್ಲದೆ ಕೆರೆಯಲ್ಲಿ ನೀರಿನ ಮಟ್ಟ 4ರಿಂದ 5 ಅಡಿಗೆ ಕುಸಿದಿದೆ. ಹೆಚ್ಚು ನೀರಿಲ್ಲದ ಕಾರಣ ಮೀನಿನ ಗಾತ್ರ ವೃದ್ಧಿಸುತ್ತಿಲ್ಲ. ಇದರಿಂದ ಮಾರುಕಟ್ಟೆಯಲ್ಲಿ ಉತ್ತಮ ದರ ಸಿಗುತ್ತಿಲ್ಲ’ ಎಂದು ವಿಕ್ಟೋರಿಯಾ ಮಹಾರಾಣಿ ಮೀನುಗಾರರ ಸಹಕಾರ ಸಂಘದ ಮಲ್ಲಪ್ಪ ಒಂಟಲಬೋವಿ ತಿಳಿಸಿದರು.
‘ಪ್ರತಿ ವರ್ಷ 3 ಲಕ್ಷದಷ್ಟು ಮೀನು ಮರಿಗಳನ್ನು ಕೆರೆಗೆ ಬಿಡುತ್ತಿದ್ದೆವು. 3ರಿಂದ 4 ಟನ್‌ವರೆಗೆ ಇಳುವರಿ ಸಿಗುತ್ತಿತ್ತು. ಈ ವರ್ಷ ಕೆರೆಗೆ ನೀರು ಹರಿಸುವುದು ತಡವಾಗಿದ್ದರಿಂದ ಈಚೆಗಷ್ಟೇ ಮೀನು ಮರಿಗಳನ್ನು ಬಿಟ್ಟಿದ್ದೇವೆ. ಮೀನು ಮರಿಯೊಂದು 1 ಕೆ.ಜಿ.ವರೆಗೆ ತೂಕ ಬರಲು ಒಂದು ವರ್ಷ ಬೇಕಾಗುತ್ತದೆ. ಬಿಸಿಲು ಹೀಗೇ ಹೆಚ್ಚಿದ್ದರೆ ವ್ಯಾಪಾರ ಕಡಿಮೆಯಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ಕನಿಷ್ಠ 10 ತಿಂಗಳು ನೀರು ಅವಶ್ಯ’
‘ಗದಗ ಜಿಲ್ಲೆಯಲ್ಲಿ ಕೆರೆಗಳ ಸಂಖ್ಯೆ ಕಡಿಮೆ. ನೀರಾವರಿ ಸೌಲಭ್ಯ ಎಲ್ಲೆಡೆ ಇಲ್ಲದ ಕಾರಣ ಮಳೆಯಾಶ್ರಿತವಾಗಿ ಮೀನು ಕೃಷಿ ಮಾಡಲಾಗುತ್ತದೆ. ಉತ್ತಮವಾಗಿ ಮಳೆಯಾದರೆ ಮೀನುಮರಿಗಳ ಬಿತ್ತನೆಯೂ ಸಮರ್ಪಕವಾಗಿ ಆಗುತ್ತದೆ. ಕನಿಷ್ಠ 10 ತಿಂಗಳವರೆಗೆ ನೀರಿದ್ದರಷ್ಟೇ ಮೀನುಗಾರರು ಬಿತ್ತನೆಗೆ ಮುಂದಾಗುತ್ತಾರೆ. ಈ ವರ್ಷ ಮಳೆ ಇಲ್ಲದ ಕಾರಣ ಹೆಚ್ಚಿನವರು ಬಿತ್ತನೆಗೆ ಮುಂದಾಗಿಲ್ಲ’ ಎಂದು ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ನಾಗರಾಜ ಸಿ. ತಿಳಿಸಿದರು.
‘ಜಿಲ್ಲೆಯಲ್ಲಿ ಮೀನು ಮರಿ ಉತ್ಪಾದನಾ ಕೇಂದ್ರ ಇಲ್ಲದ ಕಾರಣ ಪಕ್ಕದ ಜಿಲ್ಲೆಗಳಿಂದ ತಂದು ಮೀನುಗಾರರಿಗೆ ವಿತರಣೆ ಮಾಡಲಾಗುತ್ತಿದೆ. ಮೀನುಗಾರಿಕೆ ಕಿಟ್, ಮಾರಾಟ ವಾಹನ ಖರೀದಿ, ಮೀನು ಖರೀದಿಗೆ ಸಹಾಯಧನವನ್ನೂ ನೀಡಲಾಗುತ್ತಿದೆ. ಐದು ವರ್ಷಗಳವರೆಗೆ ಗುತ್ತಿಗೆ ನೀಡುವ ಪದ್ಧತಿ ಇದೆ. ಗ್ರಾಮ ಪಂಚಾಯಿತಿ ಹಂತದಲ್ಲೇ ಮೀನುಗಾರಿಕೆಗೆ ಕೆರೆಯ ಗುತ್ತಿಗೆ ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ’ ಎಂದು ಮಾಹಿತಿ ನೀಡಿದರು.