ಬಳ್ಳಾರಿ: ಈ ಬಾರಿಯೂ ಧ್ವಜಾರೋಹಣಕ್ಕಷ್ಟೇ ಉಸ್ತುವಾರಿ ಸಚಿವ

ಬಳ್ಳಾರಿ: ಈ ಬಾರಿಯೂ ಧ್ವಜಾರೋಹಣಕ್ಕಷ್ಟೇ ಉಸ್ತುವಾರಿ ಸಚಿವ

ಬಳ್ಳಾರಿ: ಈ ಬಾರಿಯೂ ಧ್ವಜಾರೋಹಣಕ್ಕಷ್ಟೇ ಉಸ್ತುವಾರಿ ಸಚಿವ

ಬಳ್ಳಾರಿ: ಬಳ್ಳಾರಿ ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವರೇ ಇಲ್ಲವಾಗಿದ್ದು, ಅಭಿವೃದ್ಧಿ ಕಾಮಗಾರಿಗಳು ಹಾಗೂ ಜನಸೇವೆಯ ಮೇಲ್ವಿಚಾರಣೆಯ ಉಸ್ತುವಾರಿ ವಹಿಸುವ ನಾಯಕನೇ ಇಲ್ಲವಾಗಿದೆ.

ಈ ಮಧ್ಯೆ ಸೆ. 17ರಂದು ಕಲ್ಯಾಣ ಕರ್ನಾಟಕ ಉತ್ಸವ ಬರುತ್ತಿದ್ದು, ಎಂದಿನಂತೆ ಈ ಬಾರಿಯೂ ಧ್ವಜಾರೋಹಣಕ್ಕೆ ಮಾತ್ರ ಸಚಿವರು ಬರುತ್ತಿದ್ದಾರೆ. ಎರಡು ವರ್ಷಗಳಿಂದ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ, ಹೈದರಾಬಾದ್‌ ಕರ್ನಾಟಕ ವಿಮೋಚನಾ ದಿನಕ್ಕೆ ಉಸ್ತುವಾರಿ ಸಚಿವರಿಲ್ಲದೇ, ನಿಯೋಜನೆ ಮೇರೆಗೆ ಸಚಿವರು ಧ್ವಜಾರೋಣಕ್ಕಷ್ಟೇ ಸೀಮಿತರಾಗಿ ಬರುತ್ತಿರುವುದು ಪರಿಪಾಠವಾಗಿದೆ.

2018ರ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಸ್ವತಃ ಡಿ.ಕೆ. ಶಿವಕುಮಾರ್ ಅವರೇ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು. ಆದರೆ, ಇಂದಿನ ಅವರದ್ದೇ ಸರ್ಕಾರದಲ್ಲಿ ಬಳ್ಳಾರಿಗೆ ಸಮರ್ಥ ಉಸ್ತುವಾರಿ ಸಚಿವರಿಲ್ಲ ಎಂಬಂತಾಗಿದೆ.

ಜಿಲ್ಲೆಯಲ್ಲಿ ಆಡಳಿತದ ಚುಕ್ಕಾಣಿ ಹಿಡಿದು, ಸರ್ಕಾರಿ ಯೋಜನೆಗಳು ತಳಮಟ್ಟದ ಜನರಿಗೆ ತಲುಪುವಂತೆ ನೋಡಿಕೊಳ್ಳುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಪಾತ್ರ ಅತ್ಯಂತ ಪ್ರಮುಖವಾದುದು. ಜಿಲ್ಲೆಯ ಪ್ರಕೃತಿ ವಿಕೋಪ ನಿರ್ವಹಣೆ, ಶಾಸಕರು ಮತ್ತು ಅಧಿಕಾರಿಗಳ ನಡುವಿನ ಸಮನ್ವಯ, ಅಭಿವೃದ್ಧಿ ಪರಾಮರ್ಶೆ ಸಭೆಗಳನ್ನು ನಡೆಸುವುದು ಹಾಗೂ ತುರ್ತು ಸಂದರ್ಭಗಳಲ್ಲಿ ಸ್ಥಳದಲ್ಲೇ ನಿರ್ಧಾರ ಕೈಗೊಳ್ಳಲು ಉಸ್ತುವಾರಿ ಸಚಿವರ ಅಗತ್ಯವಿರುತ್ತದೆ. ಆದರೆ ಬಳ್ಳಾರಿಯಲ್ಲಿ ಈ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ.

ಈ ಹಿಂದೆ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಬಿ. ನಾಗೇಂದ್ರ ಅವರು, ವಾಲ್ಮೀಕಿ ನಿಗಮದ ಹಗರಣದ ಹಿನ್ನೆಲೆಯಲ್ಲಿ 2024ರ ಜೂನ್ 6ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಬಳಿಕ ಸಚಿವ ಜಮೀರ್‌ ಅಹಮದ್‌ ಅವರಿಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿಯ ಹೆಚ್ಚುವರಿ ಹೊಣೆ ನೀಡಲಾಯಿತಾದರೂ, ಅವರು ಎರಡು ವರ್ಷಗಳಲ್ಲಿ ಜಿಲ್ಲೆಗೆ ಬಂದಿದ್ದು ಕೇವಲ ಎರಡು-ಮೂರು ಬಾರಿ ಮಾತ್ರ! ಜಿಲ್ಲೆಯಲ್ಲಿ ಬಾಣಂತಿಯರ ಸರಣಿ ಸಾವು ಸಂಭವಿಸಿದಾಗಲೂ ಜಮೀರ್‌ ಬಳ್ಳಾರಿಗೆ ಭೇಟಿ ನೀಡಲಿಲ್ಲ. ಹೀಗಾಗಿ ಜಿಲ್ಲಾ ಉಸ್ತುವಾರಿಯಾಗಿ ಜಮೀರ್ ಸಂಪೂರ್ಣ ವಿಫಲರಾಗಿದ್ದಾರೆ ಎಂದು ವಿವಿಧ ರಾಜಕೀಯ ಪಕ್ಷಗಳು ಹಾಗೂ ನಾಗರಿಕ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಅವರ ಬದಲಾವಣೆಗೆ ಆಗ್ರಹಿಸಿದ್ದವು.

ತದನಂತರ, ಡಿ.ಕೆ. ಶಿವಕುಮಾರ್‌ ಸಂಪುಟದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾಗಿದ್ದ ಬಿ. ನಾಗೇಂದ್ರ ಅವರು ಆ. 28ರಂದು ಮತ್ತೆ ರಾಜೀನಾಮೆ ನೀಡಿದ್ದರು. ಅವರು ರಾಜೀನಾಮೆ ನೀಡಿ 15 ದಿನಗಳು ಕಳೆದರೂ ಸರ್ಕಾರ ಈವರೆಗೆ ಬಳ್ಳಾರಿಗೆ ನೂತನ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಿಲ್ಲ.

ಇನ್ನೊಂದೆಡೆ ಸರ್ಕಾರವು ಸಾರ್ವಜನಿಕರ ಕುಂದುಕೊರತೆ ಆಲಿಸಲು ‘ಪ್ರಜಾಸೇವೆ’ ಎಂಬ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು, ನಾಗರಿಕರು ನೇರವಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ಸಲ್ಲಿಸಬಹುದು ಎಂದು ಪ್ರಚಾರ ಮಾಡುತ್ತಿದೆ. ಆದರೆ, ಉಸ್ತುವಾರಿ ಸಚಿವರೇ ಇಲ್ಲದ ಬಳ್ಳಾರಿಯಲ್ಲಿ ಜನರು ತಮ್ಮ ಅಹವಾಲುಗಳನ್ನು ಯಾರಿಗೆ ಸಲ್ಲಿಸಬೇಕು ಎಂಬ ಪ್ರಶ್ನೆ ಮೂಡಿದೆ.

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲೂ ನಿರ್ಲಕ್ಷ್ಯಕ್ಕೊಳಗಾಗಿದ್ದ ಬಳ್ಳಾರಿ, ಈಗ ಡಿ.ಕೆ. ಶಿವಕುಮಾರ್ ಸರ್ಕಾರದಲ್ಲೂ ಅದೇ ನಿರ್ಲಕ್ಷ್ಯ ಎದುರಿಸುತ್ತಿದೆ. ಸರ್ಕಾರ ತಕ್ಷಣವೇ ಸಮರ್ಥ ಉಸ್ತುವಾರಿ ಸಚಿವರನ್ನು ನೇಮಿಸಿ ಜಿಲ್ಲೆಯ ಆಡಳಿತಕ್ಕೆ ಮರುಜೀವ ನೀಡಬೇಕಿದೆ.

ರಘುಮೂರ್ತಿಯಿಂದ ಧ್ವಜಾರೋಹಣ

ಸೆ. 17ರಂದು ನಡೆಯಲಿರುವ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಧ್ವಜಾರೋಹಣ ನೆರವೇರಿಸಲು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಟಿ. ರಘುಮೂರ್ತಿ ಅವರನ್ನು ಸರ್ಕಾರ ಮಂಗಳವಾರ ನಿಯೋಜನೆ ಮಾಡಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ