
ಮಂಗಳೂರು ಬಂದರಿನಲ್ಲಿ ವ್ಯವಹಾರ ಸ್ಥಗಿತಗೊಳಿಸಿದ್ದಕ್ಕೆ ತನಿಖೆಗೆ ಸಿಎಂ ಆದೇಶ
ಮಂಗಳೂರು: ಮೀನುಗಾರಿಕಾ ದಕ್ಕೆಗೆ ತಾವು ಭೇಟಿ ನೀಡಿದ ಸಂದರ್ಭದಲ್ಲಿ ಬಂದರಿನಲ್ಲಿ ವ್ಯವಹಾರವನ್ನು ಸ್ಥಗಿತಗೊಳಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ತನಿಖೆ ಮಾಡುವಂತೆ ಜಿಲ್ಲಾಧಿಕಾರಿ ಮತ್ತು ನಗರ ಪೊಲೀಸ್ ಕಮಿಷನರ್‌ಗೆ ಆದೇಶ ನೀಡಿದ್ದಾರೆ.
ಶುಕ್ರವಾರ ನಡೆದ ಸಚಿವ ಸಂಪುಟ ಸಭೆಗಾಗಿ ಮಂಗಳೂರಿಗೆ ಬಂದಿದ್ದ ಮುಖ್ಯಮಂತ್ರಿ ಶನಿವಾರ ಬೆಳಿಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಅವರೊದಿಗೆ ದಕ್ಕೆಗೆ ತೆರಳಿ ಮೀನುಗಾರರ ಸಮಸ್ಯೆಗಳನ್ನು ಆಲಿಸಿದ್ದರು. ‘ನಾನಿಲ್ಲಿಗೆ ಬಂದಾಗ ವ್ಯವಹಾರ ಸಂಪೂರ್ಣ ಸ್ಥಗಿತ ಗೊಂಡಿತ್ತು. ಇದಕ್ಕೆ ಅಧಿಕಾರಿಗಳು ಕಾರಣರಾಗಿದ್ದರೆ ಅವರನ್ನು ಅಮಾನತು ಮಾಡಲಾಗುವುದು’ ಎಂದು ಶಿವಕುಮಾರ್ ತಿಳಿಸಿದರು.
‘ಮೀನುಗಾರರ ಸಮಸ್ಯೆಗಳನ್ನುಆಲಿಸಲು ಬಂದಿದ್ದೇನೆ. ನನಗೆ ಭದ್ರತೆ ಏನೂ ಬೇಕಾಗಿರಲಿಲ್ಲ’ ಎಂದರು.
ಮೀನು ಮಾರಾಟಗಾರರ ಬೇಸರ: ಬಂದರಿನಿಂದ ಸಗಟು ಮೀನು ಖರೀದಿಸಿ ಜಿಲ್ಲೆಯ ಬೇರೆ ಬೇರೆ ಊರುಗಳಲ್ಲಿ ಮಾರಾಟ ಮಾಡುವವರು ಮುಂಜಾನೆ 3 ಗಂಟೆಯಿಂದಲೇ ಬರುತ್ತಾರೆ. ಹಾಗೆ ಬಂದವರು ಶನಿವಾರ ಎರಡರಿಂದ ಮೂರು ತಾಸು ಬಂದರಿನ ಹೊರಗೆ ಕಾಯಬೇಕಾಗಿ ಬಂದಿತ್ತು. ಇದಕ್ಕೆ ಹಲವರು ಬೇಸರ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ವಾಪಸ್ ಹೋದ ನಂತರ ವ್ಯವಹಾರ ಅರಂಭವಾಯಿತು. ನಂತರ ಮೀನು ಹೇರಿಕೊಂಡು ತಮ್ಮ ಊರುಗಳಿಗೆ ತೆರಳಲು ತಡವಾಯಿತು. ಹೀಗಾಗಿ ಜಿಲ್ಲೆಯ ಹೋಟೆಲ್‌ಗಳು ಮತ್ತು ಮನೆಗಳಿಗೆ ಮೀನು ತಲುಪಲು ತಡವಾಯಿತು.