
ಜನೌಷಧಿ ಕೇಂದ್ರಗಳು ಜನರ ಆರ್ಥಿಕ ಹೊರೆ ತಗ್ಗಿಸಿವೆ: ಸಂಸದ ಡಾ. ಸಿ.ಎನ್. ಮಂಜುನಾಥ್
ಮಾಗಡಿ: ‘ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಗೆ ದೀರ್ಘಕಾಲ ಔಷಧ ಸೇವಿಸಬೇಕಾಗಿರುವುದರಿಂದ ಕಡಿಮೆ ದರದಲ್ಲಿ ಗುಣಮಟ್ಟದ ಔಷಧ ಒದಗಿಸುವ ಜನೌಷಧಿ ಕೇಂದ್ರಗಳು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ದೊಡ್ಡ ಆರ್ಥಿಕ ನೆರವಾಗಿದೆ’ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದರು.
ಪಟ್ಟಣದ ಕಲ್ಯಾಗೇಟ್ ವೃತ್ತದ ಬಳಿ ಜನೌಷಧ ಕೇಂದ್ರಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.
‘ದುಬಾರಿ ಔಷಧ ಬದಲಿಗೆ ಜನೌಷಧಿ ಕೇಂದ್ರಗಳು ರೋಗಿಗಳ ಆರ್ಥಿಕ ಹೊರೆ ಕಡಿಮೆ ಮಾಡುತ್ತವೆ. ದೇಶದಲ್ಲಿ 2026ರ ಜೂನ್ 30ಕ್ಕೆ 20,149 ಜನೌಷಧ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಯೋಜನೆಯಿಂದ ನಾಗರಿಕರಿಗೆ ಅಂದಾಜು ₹45 ಸಾವಿರ ಕೋಟಿ ಉಳಿತಾಯವಾಗಿದೆ. ಈ ಬಗ್ಗೆ ಅನುಮಾನ ಬೇಡ. ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಪರೀಕ್ಷಿಸ ಲಾಗುತ್ತದೆ’ ಎಂದರು.
‘ರೋಗಿಗಳು ವೈದ್ಯರ ಸಲಹೆಯಂತೆ ಮಾತ್ರ ಔಷಧ ಸೇವಿಸಬೇಕು. ಕೆಲವು ಕೇಂದ್ರಗಳಲ್ಲಿ ಅಗತ್ಯ ಔಷಧ ಕೊರತೆ ಇದೆ. ಪೂರೈಕೆ ವ್ಯವಸ್ಥೆ ಬಲಪಡಿಸುವ ಅಗತ್ಯವಿದೆ. ನಕಲಿ ಔಷಧ ತಡೆಗಟ್ಟಲು ಆರೋಗ್ಯ ಇಲಾಖೆ ನಿಯಮಿತವಾಗಿ ತಪಾಸಣೆ ನಡೆಸಬೇಕು. ರೈತರಿಗೆ ಅನುಕೂಲವಾಗುವಂತೆ ಪಶು ಔಷಧ ಹಾಗೂ ಕೃಷಿ ಔಷಧಗಳಿಗೂ ಪ್ರತ್ಯೇಕ ವ್ಯವಸ್ಥೆ ರೂಪಿಸಬೇಕು. ಈ ಕುರಿತು ಸಂಸತ್ತಿನಲ್ಲಿಯೂ ಪ್ರಸ್ತಾಪ ಮಾಡಿದ್ದೇನೆ’ ಎಂದರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಸಾದ್‌ಗೌಡ, ಗೌತಮ್‌ಗೌಡ, ಮೊಬೈಲ್ ವಿಜಯ್, ಜನೌಷಧ ಕೇಂದ್ರದ ಶ್ರೀನಿವಾಸ್, ಕೆಂಚನಹಳ್ಳಿ ಕಿರಣ್‌ಕುಮಾರ್, ವೀರಾಪುರ ಧನುಷ್, ರಾಜೇಶ್, ಆಟೋ ಧರ್ಮೇಶ್ ಮತ್ತಿತರರು ಇದ್ದರು.