
ಉತ್ತರ ಕನ್ನಡ: ಮಂಕಿ ಬಂದರು, ದ್ವೀಪ ಅಭಿವೃದ್ಧಿಗೆ ಖಾಸಗಿ ‘ಹಸ್ತ’
ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಮಂಕಿ ಬಂದರನ್ನು ₹6,925 ಕೋಟಿ ಮತ್ತು ಕರಾವಳಿಯ ಮೂರು ಜಿಲ್ಲೆಗಳ 11 ದ್ವೀಪಗಳನ್ನು ಒಟ್ಟು ₹712 ಕೋಟಿ ವೆಚ್ಚದಲ್ಲಿ ಖಾಸಗಿ ಸಾರ್ವಜನಿಕ ಸಹಭಾಗಿತ್ವದಡಿ (ಪಿಪಿಪಿ) ಅಭಿವೃದ್ಧಿಪಡಿಸುವತ್ತ ರಾಜ್ಯ ಸರ್ಕಾರ ಆಸಕ್ತಿ ತೋರಿದೆ.
ಮಂಗಳೂರಿನ ಪಡೀಲ್‌ನಲ್ಲಿರುವ ಪ್ರಜಾಸೌಧದಲ್ಲಿ ಶುಕ್ರವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗಳಿಗೆ ಅನುಮೋದನೆ ನೀಡುವ ಸಾಧ್ಯತೆ ಇದೆ.
ಮೂಲಸೌಕರ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯು ಸಚಿವ ಸಂಪುಟ ಸಭೆಗೆ ಸಿದ್ಧಪಡಿಸಿರುವ ಕಾರ್ಯಸೂಚಿಯಲ್ಲಿ ಈ ವಿಷಯಗಳನ್ನು ಉಲ್ಲೇಖಿಸಲಾಗಿದೆ.
‘ಮಂಕಿ ಬಂದರನ್ನು ಬಹೂಪಯೋಗಿ ಬಂದರು ಮತ್ತು ಹಡಗು ನಿರ್ಮಾಣಕಟ್ಟೆಯಾಗಿ ಅಭಿವೃದ್ಧಿಪಡಿಸಬೇಕಿದೆ. ವಿನ್ಯಾಸ, ನಿರ್ಮಾಣ, ಹೂಡಿಕೆ, ನಿರ್ವಹಣೆ ಮತ್ತು ವರ್ಗಾವಣೆ (ಡಿಬಿಒಎಫ್‌ಟಿ) ಮಾದರಿಯಲ್ಲಿ ಬಂದರಿನ ಅಭಿವೃದ್ಧಿಗಾಗಿ ಖಾಸಗಿಯವರಿಗೆ ಒಪ್ಪಿಸುವ ಪ್ರಸ್ತಾವ ಸಭೆಯಲ್ಲಿ ಚರ್ಚೆಗೆ ಬರಲಿದೆ’ ಎಂದು ಮೂಲಗಳು ತಿಳಿಸಿವೆ.
‘ಮಂಗಳೂರಿನ ಗುರುಪುರ ನದಿಯ ದ್ವೀಪಗಳನ್ನು ₹125.43 ಕೋಟಿ, ಉತ್ತರ ಕನ್ನಡದ ಭಟ್ಕಳ ಮತ್ತು ಅಂಕೋಲಾದ ಏಳು ದ್ವೀಪಗಳನ್ನು ₹307.71 ಕೋಟಿ, ಉಡುಪಿಯ ಅಯಬಾ, ದರಿಯಾ ಬಹದ್ದೂರ್‌ಗಢ ಮತ್ತು ಮಲ್ಪೆ ದ್ವೀಪಗಳನ್ನು ₹279.03 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸಚಿವ ಸಂಪುಟ ಸಭೆಯ ಮುಂದೆ ಪ್ರಸ್ತಾವ ಮಂಡಿಸಲಾಗುವುದು’ ಎಂದು ವಿವರಿಸಿವೆ.
‘ಇಷ್ಟೂ ಬಂದರುಗಳನ್ನು ಜಾಗತಿಕ ಮಟ್ಟದ ಪರಿಸರಸ್ನೇಹಿ ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿಪಡಿಸಬೇಕಿದೆ. ಡಿಬಿಒಎಫ್‌ಟಿ ಮಾದರಿಯಲ್ಲಿಯೇ ಈ ದ್ವೀಪಗಳನ್ನು ಖಾಸಗಿಯವರಿಗೆ ನೀಡಲಾಗುತ್ತದೆ. ಮಂಗಳೂರು ದೀಪಸ್ತಂಭ (ಲೈಟ್‌ಹೌಸ್) ಪ್ರದೇಶವನ್ನೂ ಇದೇ ಮಾದರಿಯಲ್ಲಿ ಒಟ್ಟು ₹60.34 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ’ ಎಂದು ಮಾಹಿತಿ ನೀಡಿವೆ.
ಕಡಲತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಿ, ಉದ್ಯೋಗ ಸೃಷ್ಟಿಸಲು ಸಾಕಷ್ಟು ಅವಕಾಶ ಇದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಹಿಂದೆ ಪ್ರತಿಪಾದಿಸಿದ್ದರು. ಮಂಗಳೂರಿನಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ಈ ವಿಷಯಗಳ ಜತೆಗೆ ಇನ್ನಷ್ಟು ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡುವ ಸಂಭವ ಇದೆ.