ಚಿಂಚೋಳಿ| ಐನಾಪುರ ಏತನೀರಾವರಿ ಯೋಜನೆಗೆ ಸರ್ಕಾರದಿಂದ ಮೀನಮೇಷ; ರೈತರಲ್ಲಿ ನಿರಾಸೆ

ಚಿಂಚೋಳಿ| ಐನಾಪುರ ಏತನೀರಾವರಿ ಯೋಜನೆಗೆ ಸರ್ಕಾರದಿಂದ ಮೀನಮೇಷ; ರೈತರಲ್ಲಿ ನಿರಾಸೆ

ಚಿಂಚೋಳಿ| ಐನಾಪುರ ಏತನೀರಾವರಿ ಯೋಜನೆಗೆ ಸರ್ಕಾರದಿಂದ ಮೀನಮೇಷ; ರೈತರಲ್ಲಿ ನಿರಾಸೆ

ಚಿಂಚೋಳಿ: ತಾಲ್ಲೂಕಿನ ಐನಾಪುರ ಏತನೀರಾವರಿ ಯೋಜನೆಯ ಕಾಮಗಾರಿ ಪ್ರಾರಂಭಕ್ಕೆ ಸರ್ಕಾರ ಮೀನಮೇಷ ಎಣಿಸುತ್ತಿದೆ. ಅಂದಾಜು ₹204 ಕೋಟಿ ವೆಚ್ಚದ 17 ಗ್ರಾಮ ಮತ್ತು ತಾಂಡಾಗಳ ರೈತರ ಜಮೀನುಗಳಿಗೆ ನೀರುಣಿಸುವ ಮಹತ್ವಾಕಾಂಕ್ಷೆಯ ಯೋಜನೆ ದಿನದಿಂದ ದಿನಕ್ಕೆ ನನೆಗುದಿಗೆ ಬೀಳುತ್ತಿರುವದು ರೈತರ ನಿರಾಸೆಗೆ ಕಾರಣವಾಗಿದೆ.

ಅಂದಾಜು ₹204 ಕೋಟಿಯಲ್ಲಿ ₹95 ಕೋಟಿ (ಜಿಎಸ್‌ಟಿ ಸೇರಿ ₹111 ಕೋಟಿ) ಮೊತ್ತದ ಕಾಮಗಾರಿಗೆ ಹಲವು ವರ್ಷಗಳ ಹಿಂದೆಯೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಕಾಮಗಾರಿ ಕೈಗೊಳ್ಳಲು 2025ರ ಆಗಸ್ಟ್‌ನಲ್ಲಿ ಗುತ್ತಿಗೆ ಕಂಪೆನಿ ಜತೆಗೆ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಒಪ್ಪಂದ ಮಾಡಿಕೊಂಡಿದ್ದಾರೆ. ಇದಾಗಿ ಸುಮಾರು 13 ತಿಂಗಳು ಕಳೆದರೂ ಕಾಮಗಾರಿ ಪ್ರಾರಂಭವಾಗಿಲ್ಲ. ಹೀಗಾಗಿ ರೈತರು, ಜನಪ್ರತಿನಿಧಿಗಳು ಚಾತಕಪಕ್ಷಿಯಂತೆ ಕಾಯುವಂತಾಗಿದೆ.

ಸುಮಾರು 3,710 ಹೆಕ್ಟೇರ್ ಭೂಮಿಗೆ ನೀರುಣಿಸುವ ಯೋಜನೆಯ ಮೊದಲ ಹಂತದ ಕಾಮಗಾರಿ ಕೈಗೆತ್ತಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಆದರೆ, ಕಾಮಗಾರಿ ಪ್ರಾರಂಭಕ್ಕೆ ಶುಭ ಮೂಹೂರ್ತಕ್ಕಾಗಿ ಕಾಯಲಾಗುತ್ತಿದೆ.

ಸೆ.17ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಲಬುರಗಿ ನಗರದಲ್ಲಿ ಆಯೋಜಿಸಿರುವ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಿಂದ ಐನಾಪುರ ಏತ ನೀರಾವರಿ ಯೋಜನೆ ಕುರಿತು ಮಾಹಿತಿ ಕೇಳಲಾಗಿದೆ. ಅದರಂತೆ ಅಗತ್ಯ ಮಾಹಿತಿ ಸಲ್ಲಿಸಲಾಗಿದೆ ಎಂದು ಯೋಜನೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ಸೂಚನೆಯಂತೆ ಕೆಳದಂಡೆ ಮುಲ್ಲಾಮಾರಿ ಯೋಜನೆ ವಿಸ್ತೃತ ಯೋಜನಾ ವರದಿ ತಯಾರಿಸಿದಾಗ ಯೋಜನೆಯ ಎಡದಂಡೆ ಮತ್ತು ಬಲದಂಡೆ ಪ್ರಸ್ತಾಪಿಸಲಾಗಿತ್ತು. ಆದರೆ ಬಲದಂಡೆ ಕಾಮಗಾರಿ ಕೈಬಿಟ್ಟು ಕೇವಲ ಎಡದಂಡೆ ಕಾಲುವೆ ಮಾತ್ರ ಕೈಗೊಳ್ಳಲಾಯಿತು. ಇದರಿಂದ ಯೋಜನೆ ವ್ಯಾಪ್ತಿಯ ಸುಮಾರು 25 ಗ್ರಾಮಗಳ 80 ಕಿ.ಮೀ ಉದ್ದದವರೆಗೆ ರೈತರ ಜಮೀನಿಗೆ ನೀರುಣಿಸಲು ಕಾಲುವೆ ನಿರ್ಮಿಸಲಾಗಿದೆ. ನಂತರ ನವಿಕರಣವೂ ಆಗಿದೆ. ವಿತರಣಾ ನಾಲೆ ಹಾಗೂ ಹೊಲಗಾಲುವೆಗಳ ಕೊರತೆ ರೈತರಲ್ಲಿ ಅರಿವಿನ ಕೊರತೆಯಿಂದ ಯೋಜನೆಯ ನೀರು ಸದುಪಯೋಗವಾಗಿಲ್ಲ.

ಎಡದಂಡೆ ನಾಲೆ ಆದಮೇಲೆ ಐನಾಪುರ ಸುತ್ತಲಿನ ಭಾಗಕ್ಕೆ ನೀರಾವರಿ ಕಲ್ಪಿಸಬೇಕು. ಶಾಶ್ವತ ಬರಪೀಡಿತ ಪ್ರದೇಶ ಇದಾಗಿದ್ದು, ರೈತರ ಹಿತ ಕಾಪಾಡುವಂತೆ ಐನಾಪುರ ಏತ ನೀರಾವರಿ ಅಭಿವೃದ್ಧಿ ಸಮಿತಿ ರಚಿಸಿ ರೈತರು ಹಲವು ದಶಕಗಳಿಂದ ಹೋರಾಟ ನಡೆಸಿದ್ದಾರೆ. ಹಿಂದಿನ ಶಾಸಕ ಡಾ.ಉಮೇಶ ಜಾಧವ, ಹಾಲಿ ಶಾಸಕ ಡಾ.ಅವಿನಾಶ ಜಾಧವ ಅವರು ಹಲವು ಬಾರಿ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಿದ್ದರಿಂದ ಕೊನೆಗೂ ಸರ್ಕಾರ ಸ್ಪಂದಿಸಿದೆ.

ರಾಜ್ಯ ಕಾಂಗ್ರೆಸ್ ಸರ್ಕಾರ ಮೊದಲ ಹಂತದಲ್ಲಿ ಜಾಕ್‌ವೆಲ್, ರೈಜಿಂಗ್ ಮೇನ್ 1, 2, 3 ಹಾಗೂ ಮುಖ್ಯ ಕಾಲುವೆ 1, 3 ಕಾಮಗಾರಿ ಕೈಗೊಳ್ಳಲು ಉದ್ದೇಶಿಸಲಾಗಿದೆ. ಅಡಿಗಲ್ಲು ಸಮಾರಂಭಕ್ಕಾಗಿ ನಿಗದಿತ ನಮೂನೆಯಲ್ಲಿ ನಿಗಮದ ಕಾಮಗಾರಿಗಳ ಮಾಹಿತಿಯನ್ನು ಜಿಲ್ಲಾಧಿಕಾರಿಗಳ ಕಚೇರಿಯಿಂದ ಕೇಳಿದ್ದು, ಅಗತ್ಯ ಮಾಹಿತಿ ಒದಗಿಸಲಾಗಿದೆ ಎಂದು ಕರ್ನಾಟಕ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಸತ್ಯಪ್ರಕಾಶ ಮೂಲಗೆ ತಿಳಿಸಿದ್ದಾರೆ.

ತಾಲ್ಲೂಕಿಗೆ ಮಂತ್ರಿಗಳು, ಸಂಸದರು, ಅಧಿಕಾರಿಗಳು ಯಾರೇ ಬಂದರೂ ಅಲ್ಲಿಗೆ ಹೋಗಿ ಮನವಿ ಸಲ್ಲಿಸುವುದು, ಜನ ಸ್ಪಂದನ, ಪ್ರಜಾಸೇವಾ ಆಂದೋಲನ ಹೀಗೆ ಎಲ್ಲೆಡೆ ನಿರಂತರ ಹೋರಾಟ ನಡೆಸಿದ ಸಮಿತಿ ಅಧ್ಯಕ್ಷ ಶಿವಾನಂದ ಪಾಟೀಲರು ಮನವಿ ಸಲ್ಲಿಸಿದ್ದರು. ರೈತರ ಒತ್ತಡ ಹೆಚ್ಚಿದ್ದರಿಂದ ಯೋಜನೆಗೆ ಚಾಲನೆ ದೊರೆಯುವ ಸಾಧ್ಯತೆಯಿದೆ.

ಹಿಂದಿನ ಬಿಜೆಪಿ ಸರ್ಕಾರದಲ್ಲಿಯೇ ಟೆಂಡರ್ ಕರೆಯಲಾಗಿತ್ತು. ಕ್ರೆಡಿಟ್‌ಗಾಗಿ ಕೆಲ ಕಾಣದ ಕೈಗಳು ತಡೆ ಒಡ್ಡಿದ್ದರಿಂದ ಕಾಮಗಾರಿಗೆ ಶಿಲಾನ್ಯಾಸ ನೆರವೇರದಂತೆ ನೋಡಿಕೊಂಡ ಪರಿಣಾಮ 3 ವರ್ಷ ಅನಗತ್ಯ ವಿಳಂಬವಾಗಿದೆ. ಈಗಲಾದರೂ ಯೋಜನೆಗೆ ಚಾಲನೆ ಸಿಕ್ಕರೂ ರೈತರಿಗೆ ಸಂತಸವಾಗಲಿದೆ.

ಶಾಶ್ವತ ಬರದ ನಾಡಿಗೆ ಹಸಿರು ತರುವ ಐನಾಪುರ ಏತ ನೀರಾವರಿ ಯೋಜನೆಗೆ ಹಲವು ದಶಕಗಳಿಂದ ಹೋರಾಟ ನಡೆಸುತ್ತಿದ್ದೇವೆ. ಈಗ ಯೋಜನೆಯ ಕಾಮಗಾರಿಗೆ ಚಾಲನೆ ನೀಡುವಂತೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದೇನೆ. ಶೀಘ್ರವೇ ಚಾಲನೆ ದೊರೆಯುವ ವಿಶ್ವಾಸವಿದೆ

ಶಿವಾನಂದ ಮಾಲಿಪಾಟೀಲ ಅಧ್ಯಕ್ಷ ಐನಾಪುರ ಏತ ನೀರಾವರಿ ಅಭಿವೃದ್ಧಿ ಸಮಿತಿ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ