
ಹನೂರು| ಜನ, ಅಧಿಕಾರಿಗಳ ನಡುವೆ ಬೆಸೆಯದ ಬಾಂಧವ್ಯ; ಹೆಚ್ಚಿದ ಕಳ್ಳಬೇಟೆ!
ಹನೂರು: ಮಾದಪ್ಪನ ಕಾಡಿನಲ್ಲಿ ಕಾಡಂಚಿನ ಜನರು ಹಾಗೂ ಅರಣ್ಯ ಇಲಾಖೆಯ ನಡುವಿನ ಸಮನ್ವಯವು ಲಯ ತಪ್ಪಿರುವುದು ಕಳ್ಳಬೇಟೆಯಂತಹ ಪ್ರಕರಣಗಳ ಹೆಚ್ಚಳಕ್ಕೆ ಪರೋಕ್ಷ ಕಾರಣವಾಗಿದೆ.
ಏಳು ಮಲೆಗಳಲ್ಲಿ ಹರಡಿಕೊಂಡಿರುವ ವನ್ಯಧಾಮದ ಆಸುಪಾಸಿನಲ್ಲಿ ಶತಮಾನಗಳಿಂದ ಜನರು ವನ್ಯಜೀವಿಗಳೊಡನೆ ಸಹಬಾಳ್ವೆಯಿಂದ ಬದುಕುತ್ತ ಬಂದಿದ್ದಾರೆ. ಜೀವನದಿ ಕಾವೇರಿ ಹರಿಯುವ ಈ ಕಾನನದ ಒಂದು ಭಾಗವನ್ನು ಕಾವೇರಿ ವನ್ಯಜೀವಿ ಧಾಮ ಹಾಗೂ ಮತ್ತೊಂದು ಭಾಗವನ್ನು ಮಲೆಮಹದೇಶ್ವರ ವನ್ಯಜೀವಿ ಧಾಮ ಎಂದು ವಿಂಗಡಿಸಲಾಗಿದೆ. ಆದರೆ ಎರಡರಲ್ಲಿನ ಸಂಘರ್ಷ ಒಂದೇ ರೀತಿಯದ್ದಾಗಿವೆ.
ಕಾಡಿಗೆ ಮೇಯಲು ಹೋಗಿದ್ದ ಜಾನುವಾರನ್ನು ತಿಂದು ಹಾಕಿದ್ದ ಕಾರಣಕ್ಕೆ ಸಿಟ್ಟಿಗೆದ್ದ ಸ್ಥಳೀಯರು ಒಂದು ಹುಲಿ ಹಾಗೂ ಅದರ ನಾಲ್ಕು ಮರಿಗಳಿಗೆ ವಿಷವಿಕ್ಕಿ ಕೊಂದ ಪ್ರಕರಣ ಕಳೆದ ವರ್ಷವಷ್ಟೇ ಮಲೆ ಮಹದೇಶ್ವರ ಅರಣ್ಯದಲ್ಲಿ ನಡೆತ್ತು. ಅದು ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿತ್ತು. ಪ್ರಕರಣದಲ್ಲಿ ಆರೋಪಿಗಳ ಬಂಧನವಾಯಿತಾದರೂ ನಂತರದಲ್ಲಿ ಅಧಿಕಾರಿಗಳು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅರಿವು ಮೂಡಿಸುವ ಪ್ರಯತ್ನ ಮಾಡಲಿಲ್ಲ ಎಂಬ ಆರೋಪವಿದೆ.
ಜಿಲ್ಲೆಯಲ್ಲಿ ಬಿ.ಕೆ. ಸಿಂಗ್, ಕುಮಾರ್ ಪುಷ್ಕರ್ ಅವರಂತಹ ಹಿರಿಯ ಅಧಿಕಾರಿಗಳ ಸಾರಥ್ಯದಲ್ಲಿ ಅರಣ್ಯ ಇಲಾಖೆಯು ಕಾಡಂಚಿನ ಜನರ ನಡುವೆ ಸಮನ್ವಯ ಸಾಧಿಸುವ ಕೆಲಸ ನಡೆದಿತ್ತು. ಏಳುಕೊಂಡಲು ಅಂತಹವರೂ ಜನರ ನಡುವೆ ಬೆರೆತು ಕೆಲಸ ಮಾಡಿದ್ದರಿಂದ ಈ ಬಾಂಧವ್ಯ ಹೆಚ್ಚಿತ್ತು. ಆದರೆ, ನಂತರದ ಬೆಳವಣಿಗೆಗಳು ಅಷ್ಟು ಆಶಾದಾಯಕವಾಗಿಲ್ಲ. ಸೇವೆಯಿಂದ ವಜಾಗೊಂಡಿದ್ದ ಅಧಿಕಾರಿ ಯನ್ನೇ ಇಲ್ಲಿ ತಂದು ಕೂರಿಸಿದ್ದು ಇದಕ್ಕೊಂದು ಉದಾಹರಣೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.
ಉತ್ತಮವಾಗಿ ಕೆಲಸ ಮಾಡುವ ಅಧಿಕಾರಿಗಳನ್ನು ಒಂದು ವರ್ಷ ಸಹ ಉಳಿಸುವುದಿಲ್ಲ. ಜೊತೆಗೆ ನೈತಿಕ ಬೆಂಬಲವೂ ಸಿಗುವುದಿಲ್ಲ. ರಾಜಕೀಯ ಹಸ್ತಕ್ಷೇಪ ಹೆಚ್ಚು. ಹೀಗಾಗಿ ಅಧಿಕಾರಿಗಳೂ ಸುಮ್ಮನಾಗುತ್ತಾರೆ ಎನ್ನುತ್ತಾರೆ ಅವರು.
ಮರಿ ವೀರಪ್ಪನ್‌ನಂತಹ ಹಲವು ಗ್ಯಾಂಗ್‌ಗಳು ಈಗಾಗಲೇ ಸಕ್ರಿಯವಾಗಿದ್ದು ಅವುಗಳನ್ನು ನಿಯಂತ್ರಿಸುವ ಕೆಲಸ ತುರ್ತಾಗಿ ಆಗಬೇಕು. ಸ್ಥಳೀಯ ಮಾಹಿತಿದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಕೆಲಸ ಮಾಡಬಹುದು ಎನ್ನುವುದು ಅವರ ಸಲಹೆ.
ವಿಶ್ವಾಸಕ್ಕೆ ತೆಗೆದುಕೊಳ್ಳಿ:
ಕಾಡಂಚಿನಲ್ಲಿ ಯಾರ್‍ಯಾರು ಏನೇನು ಮಾಡುತ್ತಾರೆ ಎಂಬುದು ಅರಣ್ಯ ಇಲಾಖೆ ಸಿಬ್ಬಂದಿಗೆ ಚೆನ್ನಾಗಿ ಗೊತ್ತು. ಎಲ್ಲವನ್ನೂ ಬೆಳೆಯಲು ಬಿಟ್ಟು ನಂತರ ಕ್ರಮದ ಮಾತನಾಡುತ್ತಾರೆ ಎಂದು ದೂರುತ್ತಾರೆ ಚಾಮರಾಜನಗರದ ರೈತ ಮುಖಂಡ ಹೊನ್ನೂರು ಪ್ರಕಾಶ್.
ವಾಚರ್‌ಗಳು ಸ್ಥಳೀಯರಾಗಿದ್ದು ಅವರ ಪಾತ್ರ ಪ್ರಮುಖ. ಸ್ಥಳೀಯ ರೈತರಿಗೆ ಕಿರುಕುಳ ನೀಡುವ ಬದಲು ವಿಶ್ವಾಸಕ್ಕೆ ತೆಗೆದುಕೊಂಡರೆ ಅವರೇ ಮಾಹಿತಿ ನೀಡುತ್ತಾರೆ. ಜೊತೆಗೆ ಗಡಿ ಭಾಗಗಳಲ್ಲಿ ದಕ್ಷ ಐಎಫ್ಎಸ್ ಅಧಿಕಾರಿಗಳನ್ನು ನೇಮಿಸುವುದರಿಂದ ಅಕ್ರಮಗಳನ್ನು ನಿಯಂತ್ರಿಸಬಹುದು ಎನ್ನುತ್ತಾರೆ ಅವರು.