
ಖಾಸಗೀಕರಣದಿಂದ ಉದ್ಯೋಗ ನಷ್ಟ: ಯುವಜನರ ಸಮ್ಮೇಳನದಲ್ಲಿ ಅನಿಲ್ ಕುಮಾರ್
ಬಾಗೇಪಲ್ಲಿ: ತಾಲ್ಲೂಕಿನ ಕೊಂಡಂವಾರಿಪಲ್ಲಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಡಿವೈಎಫ್ಐನ ರಾಜ್ಯ ಯುವಜನರ 13ನೇ ಸಮ್ಮೇಳನಕ್ಕೆ ‘ಹಳೆ ಬೇರು, ಹೊಸ ಚಿಗುರು’ ಎಂಬ ಆಶಯದೊಂದಿಗೆ ತೆರೆ ಬಿತ್ತು.
ಸಮ್ಮೇಳನದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ‘ದೇಶದಲ್ಲಿ ಕೋಟ್ಯಂತರ ಮಂದಿ ಯುವ ಸಮೂಹವು ನಿರುದ್ಯೋಗಿಗಳಾಗಿದ್ದಾರೆ. ದುಡಿಯುವ ಶಕ್ತಿ ಇದ್ದರೂ, ಅವರು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯುವ ಜನಾಂಗಕ್ಕೆ ಉದ್ಯೋಗಾವಕಾಶ ಕಲ್ಪಿಸುವ ಕಾರ್ಯಕ್ಕೆ ಮುಂದಾಗಬೇಕು. ಖಾಸಗಿಕರಣದಿಂದ ಕೋಟ್ಯಂತರ ಮಂದಿ ಕೆಲಸ ಕಳೆದುಕೊಂಡು, ನಿರುದ್ಯೋಗಿಗಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ದುಡಿಯುವ ಕೃಷಿ ಕೂಲಿ ಕಾರ್ಮಿಕರು, ಮಹಿಳೆಯರು, ಯುವಕರ ಪರ ಹೋರಾಟದ ರೂಪುರೇಷೆಗಳನ್ನು ರೂಪಿಸಬೇಕಿದೆ’ ಎಂದು ಹೇಳಿದರು.
‘ದಲಿತ, ಹಿಂದುಳಿದ, ಅಲ್ಪಸಂಖ್ಯಾತರು, ಶೋಷಿತರು ಸೇರಿದಂತೆ ಎಲ್ಲ ವರ್ಗದವರ ಪರ ಯುವಶಕ್ತಿ ಗಟ್ಟಿಯಾಗಿ ಧ್ವನಿ ಎತ್ತಬೇಕು. ಆರ್ಥಿಕ, ಸಾಮಾಜಿಕ ಅಸಮಾನತೆ ತೊಲಗಿಸಬೇಕು. ಶಿಕ್ಷಣದ ಕೇಸರೀಕರಣ, ಖಾಸಗೀಕರಣದ ವಿರುದ್ಧ ಹೋರಾಟ ಮಾಡಬೇಕು. ಡಿವೈಎಫ್‍ಐ ಸ್ಥಳೀಯ ಸಮಸ್ಯೆಗಳ ಪರ ಮತ್ತು ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸುವ ಮೂಲಕ ಯುವಶಕ್ತಿಯ ಮನಸ್ಸುಗಳನ್ನು ಸಂಘಟಿಸಲು ಸಮ್ಮೇಳನದ ನೂತನ ಪದಾಧಿಕಾರಿಗಳು, ಯುವ ಕಾರ್ಯಕರ್ತರು ಮುಂದಾಗಬೇಕು. ನವ ಸಮಾಜ ನಿರ್ಮಾಣ ಮಾಡಬೇಕು’ ಎಂದು ಕರೆ ನೀಡಿದರು.
ಹಳೆಯ ಡಿವೈಎಫ್ಐ ಮುಖಂಡ ಎಸ್.ವೈ. ಗುರುಶಾಂತ್, ಕೆ. ಮಹಾಂತೇಶ್, ಬಿ. ರಾಜಶೇಖರಮೂರ್ತಿ, ಎಂ.ಪಿ. ಮುನಿವೆಂಕಟಪ್ಪ, ಚನ್ನರಾಯಪ್ಪ, ಸುನೀಲ್ ಕುಮಾರ್ ಜಜಾಲ್, ಜನಗಾನ ವೆಂಕಟರಾಂ ಅವರು ಡಿವೈಎಫ್ಐ ಸಂಘಟನೆ ನಡೆದು ಬಂದ ಹಾದಿ ಹಾಗೂ ಸ್ಥಳೀಯ ಸಮಸ್ಯೆಗಳ ವಿರುದ್ಧ ತಾವು ನಡೆಸಿದ ಹೋರಾಟಗಳನ್ನು ನೆನಪಿಸಿಕೊಂಡರು.
ದೇಶದಲ್ಲಿನ ಕೋಮುವಾದ, ಅನಕ್ಷರತೆ, ಅಸ್ಪಶ್ಯತೆ, ನಿರುದ್ಯೋಗ, ಶೋಷಣೆ, ಆಳುವ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಡಿವೈಎಫ್‍ಐ ಸಂಘಟನೆ ರಾಜ್ಯದಾದ್ಯಂತ ಹೋರಾಟ ಮಾಡಬೇಕು. ಕೃಷಿಕೂಲಿ ಕಾರ್ಮಿಕರು, ಯುವಜನರು, ಮಹಿಳೆಯರು, ವಿದ್ಯಾರ್ಥಿಗಳ ಸಮಸ್ಯೆಗಳು ಬಗೆಹರಿಯುವವರೆಗೆ ಸಂಘಟನಾತ್ಮಕ ಹೋರಾಟ ರೂಪಿಸಬೇಕು. ಕರಾವಳಿ, ಉತ್ತರ ಕರ್ನಾಟಕ, ಬಯಲುಸೀಮೆ ಪ್ರದೇಶಗಳ ಸ್ಥಳೀಯ ಸಮಸ್ಯೆಗಳನ್ನು ಇಟ್ಟುಕೊಂಡು, ಯುವಜನರು, ಕೃಷಿಕೂಲಿಕಾರ್ಮಿಕರ ಜೊತೆ ಸೇರಿ ಬೀದಿಗಿಳಿದು ಹೋರಾಟ ಮಾಡಬೇಕಿದೆ ಎಂದು ಹೇಳಿದರು.
‘ಜಂತರ್‌ಮಂತರ್‌ನಲ್ಲಿ ನಡೆದ ಯುವಶಕ್ತಿ ಹೋರಾಟದ ಪರಿಣಾಮ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವಂತಾಯಿತು. ಇದೇ ಮಾದರಿಯಲ್ಲಿ ಯುವಕರು ಸಂಘಟಿತರಾಗಬೇಕು. ರಾಜ್ಯದ ಉದ್ದಗಲಕ್ಕೂ ಡಿವೈಎಫ್ಐ ಸಂಘಟನೆಯ ಸದಸ್ಯತ್ವ ಹೆಚ್ಚಿಸಬೇಕು. ಜನವಿರೋಧಿ ಹೋರಾಟಗಳಲ್ಲಿ ಭಾಗವಹಿಸಬೇಕು’ ಎಂದು ಮುಖಂಡರು ತಿಳಿಸಿದರು.
ಡಿವೈಎಫ್‍ಐ ಸಂಘಟನೆಯ ಜನಪರ ಹೋರಾಟಗಳಲ್ಲಿ ಭಾಗಿಯಾದ ಮತ್ತು ಸಂಘಟನೆ ಬೆಳೆಸಿದವರನ್ನು ಕೆಂಪು ವಂದನೆಗಳ ಘೋಷಣೆಗಳೊಂದಿಗೆ ಶಾಲು ಹೊದಿಸಿ ಗೌರವಿಸಲಾಯಿತು.
ಅಖಿಲ ಭಾರತ ಡಿವೈಎಫ್ಐ ಸಮಿತಿಯ ಥಾಮಸ್ ಹಿಮಂಗ್‍ನಾರಾಜ್ ಭಟ್ಟಾಚಾರ್ಯ, ರಾಜ್ಯ ಸಮಿತಿ ಅಧ್ಯಕ್ಷ ಲವಿತ್ರ ವಸ್ತ್ರದ್, ಕಾರ್ಯದರ್ಶಿ ಬಸವರಾಜ್ ಪೂಜಾರ್, ಸಂತೋಷ್ ಬಜಾಲ್, ದಿಲೀಪ್, ಜಿಲ್ಲಾ ಸಮಿತಿ ಕಾರ್ಯದರ್ಶಿ ವೈ.ಎನ್.ಹರೀಶ್, ಖಜಾಂಚಿ ಸುರೇಶ್, ಸಿದ್ದಗಂಗಪ್ಪ, ಎಂ.ಪಿ.ಮುನಿವೆಂಕಟಪ್ಪ, ಎಂ.ಎನ್.ರಘುರಾಮರೆಡ್ಡಿ, ಚನ್ನರಾಯಪ್ಪ, ದೇವಿಕುಂಟೆಶ್ರೀನಿವಾಸ್, ಡಿ.ಟಿ.ಮುನಿಸ್ವಾಮಿ, ಬೈರೆಡ್ಡಿ ಪಾಲ್ಗೊಂಡಿದ್ದರು.
ಯುವಕರಲ್ಲಿ ಮೊಬೈಲ್ ಗೀಳು
ಹಿಂದಿನ 20 ವರ್ಷಗಳಿಗೆ ಹೋಲಿಸಿದರೆ, ಇಂದಿನ ಯುವ ಜನಾಂಗದವರಲ್ಲಿ ಆಲೋಚನಾ ಕ್ರಮಗಳು ಬದಲಾಗಬೇಕು. ಈಗಿನ ಯುವಕರು ಮೊಬೈಲ್, ಸಿನಿಮಾ ಗೀಳಿಗೆ ಸಿಲುಕಿದ್ದು, ಅದರಿಂದ ಹೊರಬರಬೇಕು ಎಂದು ಹಿರಿಯ ವಕೀಲ ಎ.ಜಿ. ಸುಧಾಕರ್ ಮನವಿ ಮಾಡಿದರು.
ಇಂದಿನ ಯುವಕರು ಸಾಮಾಜಿಕ ಕಳಿಕಳಿ ಇಲ್ಲದಂತೆ ವರ್ತಿಸುತ್ತಿದ್ದಾರೆ. ಜನರ ಸಮಸ್ಯೆಗಳ ಬಗ್ಗೆ ಪರಿವೇ ಇಲ್ಲ. ಕೆಲಸವಿಲ್ಲದೆ, ಅನೇಕ ಸಮಾಜಘಾತುಕ ಕೃತ್ಯಗಳಲ್ಲಿ ತೊಡಗುತ್ತಿದ್ದು, ದುಶ್ಚಟಗಳಿಗೆ ಬಲಿಯಾಗಿದ್ದಾರೆ. ಅನೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಯುವಕರು ಸೆರೆಮನೆ ವಾಸ ಅನುಭವಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಭಗತ್‍ಸಿಂಗ್ ಹೆಸರಿನ ಡಿವೈಎಫ್‍ಐ ಸಂಘಟನೆಯಲ್ಲಿ ಶಿಸ್ತು, ಹೋರಾಟದ ಕಿಚ್ಚು ಇದೆ. ಸಾಮಾಜಿಕ ಕ್ರಾಂತಿ, ನವ ಸಮಾಜದ ಕನಸು ಕಂಡ ಯುವ ಜನರು, ಮುಂದಿನ ದಿನಗಳಲ್ಲಿ ಎಲ್ಲ ವರ್ಗದ ಜನರನ್ನು ಸಂಘಟಿಸಬೇಕು. ತಮ್ಮ ಹಕ್ಕುಗಳಿಗೆ ಹೋರಾಟ ಮಾಡಬೇಕು. ಸಾಮಾಜಿಕ ಕಳಿ ಕಳಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜನವಿರೋಧಿ ವಿರುದ್ಧ ಹೋರಾಟಕ್ಕೆ ಸಿದ್ಧ
‘ಬಯಲುಸೀಮೆಯ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಡಿವೈಎಫ್‍ಐ ರಾಜ್ಯ ಸಮ್ಮೇಳನ ಹಮ್ಮಿಕೊಂಡಿರುವುದು ಸಂತಸ ತಂದಿದೆ. ಸಮ್ಮೇಳನದಲ್ಲಿ ಯುವಜನರು ಮತ್ತು ಎಲ್ಲಾ ವರ್ಗದ ಜನರ ಹಕ್ಕುಗಳು ಮತ್ತು ಸ್ಥಳೀಯ ಸಮಸ್ಯೆಗಳ ಬಗ್ಗೆ ಪ್ರತಿನಿಧಿಗಳು ಚರ್ಚೆ ಮಾಡಿದ್ದಾರೆ’ ಎಂದು ಡಿವೈಎಫ್‍ಐ ಜಿಲ್ಲಾ ಅಧ್ಯಕ್ಷ ಎಸ್.ರಾಜಶೇಖರ್ ತಿಳಿಸಿದರು.
ಮುಂದಿನ ದಿನಗಳಲ್ಲಿ ಡಿವೈಎಫ್‍ಐ ಸಂಘಟನೆಯಿಂದ ಜನಪರ ಹಕ್ಕುಗಳಿಗಾಗಿ ಮತ್ತು ಜನವಿರೋಧಿ ನೀತಿ ಅನುಸರಿಸುತ್ತಿರುವ ಕೇಂದ್ರ ಮತ್ತು‘ ರಾಜ್ಯ ಸರ್ಕಾರಗಳ ವಿರುದ್ಧ ಡಿವೈಎಫ್‍ಐ ಸಂಘಟನೆ ಧ್ವನಿ ಎತ್ತಲಿದೆ. ಜಿಲ್ಲೆಯಲ್ಲೂ ಡಿವೈಎಫ್‍ಐ ಸಂಘಟನೆಯು ಬಲಿಷ್ಠ ಚಳವಳಿಗಳು ನಡೆಯಲಿವೆ’ ಎಂದರು.