ಅಕ್ಷರ ದಾಮ್ಲೆ ಅಂತರಂಗ ಅಂಕಣ|ಜೀವನೋತ್ಸಾಹ ಕುಗ್ಗದಿರಲಿ, ಚೈತನ್ಯ ಚಿಮ್ಮುತ್ತಿರಲಿ
ಓದಿನಲ್ಲಿ ನಾನು ವಿಪರೀತ ಚುರುಕಾಗಿದ್ದೆ. ಪಠ್ಯೇತರ ಚಟುವಟಿಕೆಗಳಲ್ಲಿಯೂ ಕ್ರಿಯಾಶೀಲಳಾಗಿದ್ದೆ. ಮದುವೆ ಆಗಿ ಎರಡು ಮಕ್ಕಳಾದ ಮೇಲೆ ಬದುಕಿನ ಜಂಜಾಟದಲ್ಲಿ ನನ್ನೊಳಗಿನ ಆ ತುಂಟ, ತರಲೆ, ಬಲು ಧಿಮಾಕಿನ ಅಷ್ಟೇ ಸಕಾರಾತ್ಮಕ ಧೋರಣೆಯ ಹುಡುಗಿ ಕಾಣೆಯಾಗಿದ್ದಾಳೆ. ಈಗೀಗ ಯಾವುದರಲ್ಲಿಯೂ ಆಸಕ್ತಿಯೇ ಇಲ್ಲದಂತಾಗಿದೆ. ಬದುಕಿನಲ್ಲಿ ಚಂದಕ್ಕೆ ಪ್ರೀತಿಸುವ ಗಂಡ, ಮುದ್ದಾದ ಮಕ್ಕಳು, ಇರಲು ಮನೆ, ಹೊತ್ತುಕೊಂಡು ಹೋಗದ ಆಸ್ತಿ ಎಲ್ಲವೂ ಇದೆ. ಆದರೆ, ಪುಟಿದೇಳುವ ಆ ಜೀವನಪ್ರೀತಿಯ ಸೆಲೆ ಬತ್ತಿಹೋಗಿದೆ. ಬದುಕು ಕ್ಷಣಿಕ ಅನ್ನಿಸಿದೆ. ಯಾವುದರಲ್ಲಿಯೂ ಆಸಕ್ತಿ ಇಲ್ಲ. ಇದನ್ನು ಸರಿ ಮಾಡುವುದು ಹೇಗೆ?
ಉತ್ತರ: ಜೀವನ ಒಂದು ನಾಟಕ ರಂಗ ಅಂತ ಅದಕ್ಕೇ ಹಿರಿಯರು ಹೇಳಿರುವುದು. ಜೀವನದಲ್ಲಿ ಬೇರೆ ಬೇರೆ ಘಟ್ಟಗಳಲ್ಲಿ, ಸಂದರ್ಭಗಳಲ್ಲಿ, ಬೇರೆ ಬೇರೆ ರೀತಿಯ ಪಾತ್ರಗಳನ್ನು ನಾವು ನಿರ್ವಹಿಸಬೇಕಾಗುತ್ತದೆ. ಆಯಾ ಪಾತ್ರಕ್ಕೆ ಅದರದ್ದೇ ಆದಂತಹ ಜವಾಬ್ದಾರಿಗಳು, ಕೆಲಸ ಕಾರ್ಯಗಳು, ಸ್ಥಾನಮಾನಗಳೂ ಇರುತ್ತವೆ. ಪ್ರತಿಯೊಂದು ಘಟ್ಟದಲ್ಲೂ ಅದು ಬದಲಾಗುತ್ತಾ ಹೋಗುತ್ತದೆ. ಹಾಗಾಗಿಯೇ ಮದುವೆಯ ಮೊದಲು ನೀವು ಇದ್ದ ಹಾಗೆಯೇ ಮದುವೆಯಾದ ಮೇಲೆ ಇರುವುದಕ್ಕೆ ಸಾಧ್ಯವಿಲ್ಲ. ಮಕ್ಕಳಾಗುವ ಮುಂಚೆ ಇದ್ದ ಹಾಗೆ ಮಕ್ಕಳಾದ ಮೇಲೆ ಇರುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ, ಪ್ರತಿಯೊಂದು ಹಂತದಲ್ಲೂ ನಿಮ್ಮ ಜವಾಬ್ದಾರಿ ಹೆಚ್ಚಾಗುತ್ತಲೇ ಹೋಗುತ್ತದೆ. ಹಾಗಾಗಿ ಮೊದಲಿದ್ದ ತುಂಟತನ ಅಥವಾ ತರಲೆತನಗಳನ್ನು ಕಾಪಿಡುವುದು ಅಷ್ಟೊಂದು ಸುಲಭವಾಗದೇ ಇರಬಹುದು. ಕೆಲವರು ಅದನ್ನು ಉಳಿಸಿಕೊಳ್ಳುತ್ತಾರೆ. ಅದು ಬಹಳ ಅಪರೂಪ.
ಆದರೆ ಸಕಾರಾತ್ಮಕ ಧೋರಣೆ, ಜೀವನೋತ್ಸಾಹ ಮುಂತಾದವು ಏಕೆ ಕಡಿಮೆ ಆಗಿವೆ ಎಂಬುದನ್ನು ಸ್ವಲ್ಪ ಹೆಚ್ಚು ಆಳವಾಗಿ ಗಮನಿಸಬೇಕು. ಅನೇಕರು ಈ ಜೀವನದ ಬೇರೆ ಬೇರೆ ಸ್ತರಗಳನ್ನು ಏರುತ್ತಾ ಹೋದಂತೆ, ತಮ್ಮ ಮೂಲಸತ್ವವನ್ನು ಬಿಟ್ಟು ಬೇರೆಯವರಿಗೋಸ್ಕರ, ಅಥವಾ ಬೇರೆಯವರಿಗನುಗುಣವಾಗಿ ಬದುಕುವುದಕ್ಕೆ ಆರಂಭಿಸುತ್ತಾರೆ. ಮದುವೆಗೆ ಮೊದಲು ಅಪ್ಪ- ಅಮ್ಮನ ಜೊತೆಗೆ ಇರುವಂತಹ ಸಲುಗೆ ಮದುವೆಯಾಗಿ ಹೋದ ಗಂಡನ ಮನೆಯಲ್ಲಿ ಇರುವುದಿಲ್ಲ. ಅಲ್ಲಿನ ಕ್ರಮಗಳು, ರೀತಿ- ನೀತಿಗಳು ಅಂತ ಅನೇಕ ವಿಚಾರಗಳಲ್ಲಿ ಬದಲಾವಣೆಗಳಾಗುತ್ತವೆ. ಅನೇಕರು ಅಂತಹ ಬದಲಾವಣೆಗಳಿಗೆ ಹೊಂದಿಕೊಳ್ಳುತ್ತಾ, ತಮ್ಮದಾದ ಮೂಲ ಜೀವನಶೈಲಿಯ ಹೊಸ ವಿಚಾರಗಳನ್ನು ಸರಿಯಾದ ರೀತಿಯಲ್ಲಿ ಬೆರೆಸುತ್ತಾ ಮುಂದುವರಿಯುತ್ತಾರೆ. ಆಗ ಅದು ಋಣಾತ್ಮಕವಾಗಿ ಪರಿಣಮಿಸುವುದಿಲ್ಲ. ಆದರೆ ಯಾವಾಗ ನಮ್ಮತನವನ್ನು ಸಂಪೂರ್ಣವಾಗಿ ಬಿಟ್ಟು, ಹೊಸತನಕ್ಕೇ ಒಗ್ಗಿಕೊಳ್ಳುತ್ತಾರೋ ಆಗ ಇದು ನಾನಲ್ಲ ಅಥವಾ ನನ್ನದಲ್ಲ ಅನ್ನುವಂತಹ ಪರಿಸ್ಥಿತಿಗೆ ತಲುಪಬಹುದು. ಅದೂ ಮಕ್ಕಳಾದ ಮೇಲೆ, ಎಲ್ಲರ ಗಮನವೂ ಮಕ್ಕಳ ಮೇಲೆ ಹರಿಯುತ್ತದೆಯೇ ಹೊರತು ತಾಯಿಯ ಮೇಲೆ ಜಾಸ್ತಿ ಇರುವುದಿಲ್ಲ. ಮನೆಗೆ ಬಂದವರಿಗೆಲ್ಲರಿಗೂ ಮಕ್ಕಳನ್ನು ಭೇಟಿ ಮಾಡುವುದರಲ್ಲಿ ಆಸಕ್ತಿ, ಎಷ್ಟೋ ಸಲ ಗಂಡನಿಗೂ ಮಗುವಿನ ಅಥವಾ ಮಕ್ಕಳ ಕುರಿತು ಇರುವಂತಹ ಆಸಕ್ತಿ ತಮ್ಮ ಮೇಲೆ ತೋರ್ಪಡಿಸದೇ ಇದ್ದಾಗ ಅದು ಕೂಡ ಬೇಸರಕ್ಕೆ ಕಾರಣವಾಗುತ್ತದೆ. ಇನ್ನೂ ಒಂದಷ್ಟು ಸಂದರ್ಭಗಳಲ್ಲಿ ತಾಯಂದಿರು ಮಕ್ಕಳಾದ ಮೇಲೆ ತಮ್ಮ ಗಮನವನ್ನೆಲ್ಲಾ ಮಕ್ಕಳ ಮೇಲೆಯೇ ಹರಿಸಿ ತಮ್ಮ ಕುರಿತು ಯಾವುದೇ ಕಾಳಜಿ ತೆಗೆದುಕೊಳ್ಳುವುದಿಲ್ಲ. ನಿಧಾನವಾಗಿ ಮಕ್ಕಳು ಸ್ವತಂತ್ರರಾಗುತ್ತಾ ಹೋದಂತೆ, ತಾಯಿಗೆ ತನ್ನ ಅನಿವಾರ್ಯತೆ ಕಡಿಮೆ ಇದೆ ಅಂತ ಅನ್ನಿಸಿ, ಜೀವನದ ಅರ್ಥವೇನು ಎಂಬಂತಹ ಪ್ರಶ್ನೆಗಳು ಮೂಡುತ್ತವೆ.
ನಿಮ್ಮ ಕುಟುಂಬದ ಸದಸ್ಯರನ್ನು ಈಗ ಹೇಗೆ ನೋಡಿಕೊಳ್ಳುತ್ತಿದ್ದೀರೋ ಅದೇ ರೀತಿ ಚೆನ್ನಾಗಿ ನೋಡಿಕೊಳ್ಳುತ್ತಲೇ, ಒಂದಷ್ಟು ಸಮಯವನ್ನು ನಿಮಗೋಸ್ಕರ ಕೊಟ್ಟುಕೊಳ್ಳಿ. ನಿಮ್ಮ ಆಸಕ್ತಿಯ ಹವ್ಯಾಸಗಳನ್ನು, ಚಟುವಟಿಕೆಗಳನ್ನು ಮಾಡುವುದರಲ್ಲಿ ತೊಡಗಿಸಿಕೊಳ್ಳಿ. ಒಂದಷ್ಟು ಪುಸ್ತಕಗಳನ್ನು ಓದಿ. ಸಾಧ್ಯವಾದರೆ ನಿಮ್ಮ ಯೋಚನೆಗಳನ್ನು ಬರಹದ ಅಥವಾ ಚಿತ್ರದ ರೂಪದಲ್ಲಿ ಹೊರತನ್ನಿ. ನಿಮ್ಮದೇ ಆದಂತಹ ಸ್ನೇಹಿತರ ವರ್ಗವನ್ನು ಸೃಷ್ಟಿಸಿ. ನಿಮ್ಮ ಮನೆಯ ಪಕ್ಕದಲ್ಲಿ ಯಾವುದಾದರೂ ಬಾಲವಾಡಿ ಅಥವಾ ಅಂಗನವಾಡಿ ಇದ್ದರೆ ಅಲ್ಲಿ ಹೋಗಿ ಮಕ್ಕಳ ಜೊತೆಗೆ ಬೆರೆಯಿರಿ. ಆಗ ನಿಮಗೆ ನಿಮ್ಮದೇ ಆದ ರೀತಿಯಲ್ಲಿ ಸ್ವಚ್ಛಂದವಾಗಿ ಹಾರಾಡಲು ಸ್ವಲ್ಪ ಅವಕಾಶ ಸಿಗುತ್ತದೆ. ಬಹುಶಃ ನೀವು ನಿಮ್ಮ ಮನೆಯವರು ಮತ್ತು ಮಕ್ಕಳನ್ನಷ್ಟೇ ನಿಮ್ಮ ಪ್ರಪಂಚವನ್ನಾಗಿ ಮಾಡಿಕೊಂಡಿದ್ದೀರಿ, ತಪ್ಪೇನಿಲ್ಲ. ಆದರೆ ಆ ಪ್ರಪಂಚದ ಜೊತೆಗೆ ಇನ್ನೊಂದಷ್ಟು ವಿಷಯಗಳೂ ಜೀವನದಲ್ಲಿ ಇವೆ ಎಂಬುದನ್ನು ಮನಗಂಡಾಗ ಬತ್ತಿ ಹೋಗಿರುವ ಜೀವನ ಪ್ರೀತಿ ಮರಳಿ ಚಿಗುರೊಡೆಯುತ್ತದೆ. ನವಚೈತನ್ಯ ಮತ್ತು ಉಲ್ಲಾಸ ಬೊಗಸೆಯನ್ನು ತುಂಬುತ್ತವೆ. v
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260905-51-780734663