
ಮಡಿಕೇರಿ: ನಾಲ್ವರು ಶಿಕ್ಷಕರಿಗೆ ರಾಷ್ಟ್ರ ನಿರ್ಮಾತೃ ಪ್ರಶಸ್ತಿ ಪ್ರದಾನ
ಮಡಿಕೇರಿ: ರೋಟರಿ ಮಿಸ್ಟಿ ಹಿಲ್ಸ್‌ನಿಂದ ನಾಲ್ವರು ಶಿಕ್ಷಕರಿಗೆ ರಾಷ್ಟ್ರ ನಿರ್ಮಾತೃ ಪ್ರಶಸ್ತಿ (ನೇಷನ್ ಬಿಲ್ಡರ್)ಯನ್ನು ಪ್ರದಾನ ಮಾಡಲಾಯಿತು.
ಇಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಸೇನೆ ಸೇರುವ ಯುವಪೀಳಿಗೆಗೆ ತರಬೇತಿ ನೀಡುತ್ತಿರುವ ಅಮ್ಮತ್ತಿ ಕಾರ್ಮಾಡು ಗ್ರಾಮದ ಕುಟ್ಟಂಡ ಲವ ಭೀಮಯ್ಯ, ಮಡಿಕೇರಿಯ ಚೆಸ್ ತರಬೇತುದಾರ ಎನ್.ಟಿ.ಶಂಕರನಾರಾಯಣ, ಅರೆಕಾಡುವಿನ ಮುಖ್ಯಶಿಕ್ಷಕಿ ಪಿ.ಎಂ.ಪದ್ಮಾವತಿ, ಮದೆನಾಡಿನ ನಿವೃತ್ತ ಪ್ರಾಂಶುಪಾಲ ಸಿದ್ದರಾಜು ಬೆಳ್ಳಯ್ಯ ಅವರಿಗೆ ಮಡಿಕೇರಿ ಆಕಾಶವಾಣಿ ಕೇಂದ್ರದ ಮುಖ್ಯಸ್ಥೆ ಸುಜಾತ ಎಫ್.ತಳವಾರ್ ಪ್ರಶಸ್ತಿ ಪ್ರದಾನ ಮಾಡಿದರು.
ನಂತರ ಮಾತನಾಡಿದ ಸುಜಾತ ಎಫ್.ತಳವಾರ್, ದಿನಕಳೆದಂತೆ ವಿದ್ಯಾರ್ಥಿಗಳಿಗೆ ಲಭಿಸುತ್ತಿರುವ ನವತಾಂತ್ರಿಕತೆಯ ಮಾಧ್ಯಮಗಳಿಂದಾಗಿ ಮೊದಲಿನಂತೆ ಪಾಠ ಹೇಳಲು ಸಾಧ್ಯವಿಲ್ಲದಂತಾಗಿ ಶಿಕ್ಷಕರ ವೃತ್ತಿಯೂ ಸವಾಲಾಗುತ್ತಲೇ ಇದೆ. ಶಿಕ್ಷಕರು ನಿತ್ಯವೂ ಜ್ಞಾನ ಮತ್ತು ಕೌಶಲ ಪರಿಷ್ಕರಿಸುತ್ತಾ ಪಾಠ ಮಾಡುವ ಅನಿವಾರ್ಯತೆ ಇದೆ ಎಂದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್.ರಾಜೇಶ್, ಶಿಕ್ಷಕರನ್ನು ಸನ್ಮಾನಿಸುವ ಮೂಲಕ ರೋಟರಿ ಸಂಸ್ಥೆಯು ದೇಶಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವವರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ರೋಟೋ ಮಿಸ್ಟ್ ವಾರ್ತಾ ಸಂಚಿಕೆ ಅನಾವರಣಗೊಳಿಸಲಾಯಿತು.
ರೋಟರಿ ವಲಯ 6ರ ಸಹಾಯಕ ಗವರ್ನರ್ ಎಚ್.ಎಸ್.ವಸಂತಕುಮಾರ್, ರೋಟರಿ ವಲಯ ಸೇನಾನಿ ಪೊನ್ನಚ್ಚನ ಮಧುಸೂಧನ್, ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಡಾ.ಜಿ.ಡಿ.ಚೇತನ್, ರೋಟರಿ ನಿರ್ದೇಶಕ ಎಚ್.ಟಿ.ಅನಿಲ್, ಅನಿತಾಪೂವಯ್ಯ, ಸತೀಶ್ ಸೋಮಣ್ಣ, ಡಾ.ತಾರಾನಂದ್, ಡಾ.ಕೃಷ್ಣದೀಪ್, ನಿಶಾಂತ್ ಬೆಳ್ಯಪ್ಪ ಭಾಗವಹಿಸಿದ್ದರು.
ಮಡಿಕೇರಿ: ಐವರು ಶಿಕ್ಷಕಿಯರಿಗೆ ನೇಷನ್ ಬಿಲ್ಡರ್ ಪ್ರಶಸ್ತಿ
ಮಡಿಕೇರಿ: ರೋಟರಿ ವುಡ್ಸ್‌ನಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಈಚೆಗೆ ಐವರು ಶಿಕ್ಷಕಿಯರಿಗೆ ನೇಷನ್ ಬಿಲ್ಡರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಕೆ.ಎಸ್.ಸುಮಿತ್ರಾ, ಕಡಗದಾಳು ಶಾಲಾ ಶಿಕ್ಷಕಿ ಎಚ್.ಎಸ್.ಭಾರತಿ, ಎಮ್ಮೆಮಾಡು ಶಾಲಾ ಶಿಕ್ಷಕಿ ರಮ್ಯಾ, ಕುಶಾಲನಗರ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಭಾರತೀ ಪ್ರಸನ್ನ, ಎ.ಎಲ್.ಜಿ. ಕ್ರೆಸೆಂಟ್ ಶಾಲೆ ಪ್ರಾಂಶುಪಾಲರಾದ ಜಾಯ್ಸಿ ವಿನಯ್ ಅವರಿಗೆ ಸಾಹಿತಿ ಬಾರಿಯಂಡ ಜೋಯಪ್ಪ ಪ್ರಶಸ್ತಿ ಪ್ರದಾನ ಮಾಡಿದರು.
ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ರೋಟರಿ ವುಡ್ಸ್ ನಿರ್ದೇಶಕ ಎಸ್.ಡಿ.ಪ್ರಶಾಂತ್ ಹಾಗೂ ಕೊಡಗು ಡೆಕೋರೇಟರ್ಸ್ ಅಸೋಸಿಯೇಷನ್ ಸ್ಫಾಪಕ ಅಧ್ಯಕ್ಷ ನಿರ್ದೇಶಕ ಅಜ್ಜೇಟಿರ ಲೋಕೇಶ್ ಅವರನ್ನು ಗೌರವಿಸಲಾಯಿತು.
ರೋಟರಿ ವುಡ್ಸ್‌ನ ವಾರ್ತಾ ಸಂಚಿಕೆಯನ್ನೂ ಸಂಪಾದಕ ವಿನು ಈರಪ್ಪ ಲೋಕಾರ್ಪಣೆಗೊಳಿಸಿದರು. ರೋಟರಿ ವುಡ್ಸ್ ಅಧ್ಯಕ್ಷೆ ಪ್ರಮೀಳಾ ಶೆಟ್ಟಿ, ಕಾರ್ಯದರ್ಶಿ ಸ್ಮಿತಾ ಚಂಗಪ್ಪ, ರೋಟರಿ ವಲಯ 6ರ ಸಹಾಯಕ ಗವರ್ನರ್ ಎಂ.ಡಿ.ರಂಗಸ್ವಾಮಿ, ರೋಟರಿ ವಲಯ ಸೇನಾನಿ ವಸಂತ್ ಕುಮಾರ್, ಜಿಲ್ಲಾ ನಿರ್ದೇಶಕ ಎಚ್.ಟಿ.ಅನಿಲ್, ಬಿ.ಜಿ.ಅನಂತಶಯನ, ಎಸ್.ಎಸ್.ಸಂಪತ್ ಕುಮಾರ್ ಇದ್ದರು.
ಮಡಿಕೇರಿ: ರೋಟರಿ ಮಡಿಕೇರಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ನ್ಯಾಷನಲ್ ಬಿಲ್ಡರ್ಸ್ ಅವಾರ್ಡ್ ಅನ್ನು ಎಂ.ವನಜಾ ಅವರಿಗೆ ಡಾ.ಪಾಟ್ಕರ್ ಹಾಗೂ ಮಲ್ಲಿಗೆ ಪೈ ಅವರು ಈಚೆಗೆ ಪ್ರಶಸ್ತಿ ಪ್ರದಾನ ಮಾಡಿದರು.
ವೀಣಾ ರೈ ಅವರಿಗೆ ಅನಂತ್ ಸುಬ್ಬರಾವ್ ಹಾಗೂ ಪಾರ್ವತಿ ಚೀಯಣ್ಣ ಪ್ರಶಸ್ತಿ ನೀಡಿದರು.
ಡಾ.ಎಂ.ಜಿ.ಪಾಟ್ಕರ್, ‘ನಮ್ಮ ಕಾಲದಲ್ಲಿ ಸೈಕಲ್‌ನಲ್ಲಿ ಶಾಲೆಗೆ ಹೋಗಿ ಶಿಕ್ಷಕರನ್ನು ಪೋಷಕರಂತೆ ಗೌರವಿಸಿ ಆತ್ಮೀಯತೆಯಿಂದ ಶಿಕ್ಷಣ ಪಡೆಯುತ್ತಿದ್ದೆವು. ಆದರೆ, ಇಂದು ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದ ಶಿಕ್ಷಣದ ಸ್ವರೂಪ ಬದಲಾಗಿದ್ದು, ಶಿಕ್ಷಕರ ಜವಾಬ್ದಾರಿ ಹಾಗೂ ಒತ್ತಡವೂ ಹೆಚ್ಚಾಗಿದೆ’ ಎಂದು ಅಭಿಪ್ರಾಯಪಟ್ಟರು.
ಪ್ರಶಸ್ತಿ ಸ್ವೀಕರಿಸಿದ ಶಿಕ್ಷಕಿ ಎಂ.ವನಜಾ, ಶಿಕ್ಷಣ ಪರಿಪೂರ್ಣ ವ್ಯಕ್ತಿತ್ವ ರೂಪಿಸಿ ಉತ್ತಮ ನಾಗರಿಕರನ್ನು ನಿರ್ಮಿಸುವ ಮಹತ್ತರ ಕಾರ್ಯ ಎಂದರು.
ಮಡಿಕೇರಿ ರೋಟರಿ ಅಧ್ಯಕ್ಷ ಮನೋಹರ್ ಕಾಮತ್ ಮಾತನಾಡಿದರು.
ಪ್ರಮುಖರಾದ ಡಾ.ರವಿ ಅಪ್ಪಾಜಿ, ಹರಿಣಿ ವಿಜಯ್, ಡಿ.ಎಂ.ಕಿರಣ್, ಬಿ.ಎಂ.ಸೋಮಣ್ಣ, ಲಲಿತಾ ರಾಘವನ್ ಭಾಗವಹಿಸಿದ್ದರು.