ಕದ್ರಾ ಜಲಾಶಯದ ನೀರಿಗೆ ವಿರೋಧ; ಕುಡಿಯುವ ನೀರು ಪೂರೈಕೆ ಸವಾಲು

ಕದ್ರಾ ಜಲಾಶಯದ ನೀರಿಗೆ ವಿರೋಧ; ಕುಡಿಯುವ ನೀರು ಪೂರೈಕೆ ಸವಾಲು

ಕದ್ರಾ ಜಲಾಶಯದ ನೀರಿಗೆ ವಿರೋಧ; ಕುಡಿಯುವ ನೀರು ಪೂರೈಕೆ ಸವಾಲು

ಕಾರವಾರ: ಬೇಸಿಗೆ ಆರಂಭವಾಯಿತೆಂದರೆ ತಾಲ್ಲೂಕಿನ 15 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಕುಡಿಯುವ ನೀರು ಪೂರೈಸುವುದೇ ದೊಡ್ಡ ಸವಾಲಾಗುತ್ತದೆ. ಕಾಳಿ ನದಿ ಪಕ್ಕದಲ್ಲೇ ಹರಿಯುತ್ತಿದ್ದರೂ ಅದರಲ್ಲಿ ಸೇರಿಕೊಳ್ಳುವ ಅರಬ್ಬಿ ಸಮುದ್ರದ ಉಪ್ಪು ನೀರಿನಿಂದ ಶುದ್ಧ ನೀರು ಕೊಡಲು ಕಷ್ಟ. ಈ ಕಾರಣಕ್ಕೆ ಕದ್ರಾ ಜಲಾಶಯದಿಂದ ನೀರು ಪೂರೈಸಲು ಯೋಜನೆ ಕೈಗೆತ್ತಿಕೊಂಡರೆ ಅದಕ್ಕೆ ಜನರಿಂದ ವಿರೋಧ ವ್ಯಕ್ತವಾಗುತ್ತಿದೆ.

ಕಾಳಿ ನದಿಯ ಬಲ ಮತ್ತು ಎಡ ದಂಡೆಗಳಲ್ಲಿನ 41 ಗ್ರಾಮಗಳಿಗೆ ಕುಡಿಯಲು ಕಾಳಿ ನದಿಯ ನೀರು ಆಧಾರವಾಗಿದೆ. ನದಿಯ ಬಲಭಾಗದಲ್ಲಿನ ಕದ್ರಾದಿಂದ ಚಿತ್ತಾಕುಲಾ ಗ್ರಾಮ ಪಂಚಾಯಿತಿವರೆಗಿನ ಗ್ರಾಮಗಳಿಗೆ ಗೋಟೆಗಾಳಿ ಬಹುಗ್ರಾಮ ಕುಡಿಯುವ ನೀರಿನ ಘಟಕ, ಎಡ ಭಾಗದಲ್ಲಿನ ಮಲ್ಲಾಪುರದಿಂದ ಶಿರವಾಡದವರೆಗೆ ಕೆರವಡಿ ಬಹುಗ್ರಾಮ ಕುಡಿಯುವ ನೀರಿನ ಘಟಕದಿಂದ ನೀರು ಪೂರೈಸಲಾಗುತ್ತಿದೆ.

ಎರಡು ಘಟಕಗಳು ಕಾಳಿ ನದಿಯಿಂದ ಪಂಪ್‌ಗಳ ಮೂಲಕ ನೀರು ಮೇಲೆತ್ತಿ, ಶುದ್ಧೀಕರಿಸಿ ನಂತರ ಗ್ರಾಮಗಳಿಗೆ ಪೈಪ್‌ಲೈನ್ ಮೂಲಕ ಪೂರೈಸುತ್ತಿವೆ. ಅರಬ್ಬಿ ಸಮುದ್ರದ ಉಬ್ಬರದ ಸಮಯದಲ್ಲಿ ಉಪ್ಪು ನೀರು ಕದ್ರಾ ಜಲಾಶಯದ ಸಮೀಪದವರೆಗೂ ನುಗ್ಗುತ್ತದೆ. ಇದರಿಂದ ನದಿಯ ನೀರು ಉಪ್ಪು ಮಿಶ್ರಣದಿಂದ ಸವುಳಾಗುತ್ತದೆ. ಹೀಗೆ ಸವುಳಾಗುವ ನೀರು ಮೇಲೆತ್ತುವುದನ್ನು ತಪ್ಪಿಸಲು ಬೇಸಿಗೆಯಲ್ಲಿ ಬಹುಗ್ರಾಮ ನೀರಿನ ಘಟಕಗಳಿಗೆ ಸಾಧ್ಯವಾಗುತ್ತಿಲ್ಲ.

ಈ ಕಾರಣಕ್ಕೆ ಕದ್ರಾ ಜಲಾಶಯದಿಂದ ನೀರನ್ನು ಬಳಸಿಕೊಂಡು, ಅವುಗಳನ್ನು ಈಗಿರುವ ಘಟಕಗಳ ಪಕ್ಕದಲ್ಲೇ ನಿರ್ಮಿಸುವ ಜಲಸಂಗ್ರಹಾಗಾರಕ್ಕೆ ಪೂರೈಸಿಕೊಂಡು, ಅಲ್ಲಿಂದ ಗ್ರಾಮಗಳಿಗೆ ಪೂರೈಸಲು ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಯೋಜನೆ ರೂಪಿಸಲಾಗಿದೆ.

‘ಕದ್ರಾ ಜಲಾಶಯದ ಹಿಂಭಾಗದಲ್ಲಿ ಕೈಗಾದ ಅಣು ವಿದ್ಯುತ್ ಸ್ಥಾವರವಿದೆ. ಕೊಡಸಳ್ಳಿ ಜಲಾಶಯದಿಂದ ಹರಿದು ಬರುವ ಕಾಳಿ ನದಿಯ ಹಿನ್ನೀರು ಅಣು ಸ್ಥಾವರದ ರಿಯಾಕ್ಟರ್‌ಗಳನ್ನು ತಂಪಾಗಿಸಲು ಬಳಕೆ ಆಗುತ್ತದೆ. ಹೀಗೆ ಬಳಕೆ ಆದ ನೀರು ಕದ್ರಾ ಜಲಾಶಯ ಸೇರಿಕೊಳ್ಳುತ್ತದೆ. ಈ ನೀರಿನಲ್ಲಿ ಅಣು ವಿಕಿರಣದ ಅಂಶಗಳಿರುವ ಶಂಕೆ ಇದ್ದು, ಇದೇ ಕಾರಣಕ್ಕೆ ಕುಡಿಯಲು ಕದ್ರಾ ಜಲಾಶಯದ ನೀರು ಪೂರೈಕೆ ಮಾಡುವುದೇ ಬೇಡ’ ಎಂಬುದು ಬಹುತೇಕ ಗ್ರಾಮಸ್ಥರ ಒತ್ತಾಯ.

‘ಕದ್ರಾ ಜಲಾಶಯದಿಂದ ನೀರು ಪೂರೈಸುವ ಯೋಜನೆ ರೂಪಿಸುವ ಮೊದಲು ಗ್ರಾಮಸಭೆಗಳನ್ನು ನಡೆಸಿ, ಜನರಿಂದ ಅಭಿಪ್ರಾಯ ಸಂಗ್ರಹಿಸಬೇಕಿತ್ತು. ಹಾಗೆ ಮಾಡದೆ ಯೋಜನೆ ರೂಪಿಸಿ, ಕದ್ರಾದಿಂದ ಚಿತ್ತಾಕುಲ, ಮಾಜಾಳಿ, ಕಡವಾಡದವರೆಗೆ ಪೈಪ್‌ಲೈನ್ ಅಳವಡಿಕೆ ಮಾಡಲಾಗಿದೆ. ಅಣು ವಿಕಿರಣದ ಭಯ ಜನರಿಂದ ದೂರ ಮಾಡುವ ಕೆಲಸ ನಡೆದಿಲ್ಲ. ಅಂತದ್ದರಲ್ಲಿ ಅಣು ಸ್ಥಾವರದಿಂದ ಹರಿದು ಬಂದ ನೀರು ಕುಡಿಯಲು ಪೂರೈಸುವ ಯೋಜನೆಯನ್ನು ಜನರು ಒಪ್ಪಲಾಗದು’ ಎನ್ನುತ್ತಾರೆ ಸೂರಜ್ ನಾಯ್ಕ ಅಂಬ್ರಾಯಿ.

‘ಕಾಳಿ ನದಿಯ ನೀರು ಪೂರೈಕೆಗೆ ಸಮಸ್ಯೆ ಇದ್ದರೆ ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಸಾರ್ವಜನಿಕ ಬಾವಿ ತೆಗೆಸಿ, ಅದರಿಂದ ನೀರು ಪೂರೈಸುವ ಕೆಲಸವಾದರೂ ಆಗಲಿ. ಚಿತ್ತಾಕುಲಾದಲ್ಲಿ ಜಲಮೂಲ ಸೃಷ್ಟಿಗೆ ಜಾಗದ ಅಗತ್ಯವಿದ್ದರೆ ದಾನ ನೀಡಲು ಹಲವು ಜನರು ಸಿದ್ಧರಿದ್ದಾರೆ’ ಎಂಬುದಾಗಿ ಸದಾಶಿವಗಡದ ಅಶೋಕ ರಾಣೆ ಹೇಳುತ್ತಾರೆ.

‘ಕೈಗಾ ಟೌನ್‌ಶಿಪ್‌ಗೆ ಕದ್ರಾ ಜಲಾಶಯದಿಂದಲೇ ಕುಡಿಯುವ ನೀರು ಪೂರೈಕೆ ಆಗುತ್ತಿದೆ. ಟೌನ್‌ಶಿಪ್‌ನಲ್ಲಿ ವಾಸ ಇರುವವರು ಎನ್‌ಪಿಸಿಐಎಲ್ ಅಧಿಕಾರಿಗಳು, ಉದ್ಯೋಗಿಗಳು. ವಿಕಿರಣದ ಅಂಶ ಜಲಾಶಯದ ನೀರಿನಲ್ಲಿದ್ದರೆ ಅವರು ಬಳಸುತ್ತಿರಲಿಲ್ಲ. ಜಲಾಶಯದ ನೀರಿನಲ್ಲಿ ವಿಕಿರಣದ ಅಂಶವಿದೆ ಎಂಬುದಕ್ಕೆ ಪುರಾವೆ ಇಲ್ಲ. ಅಣು ಸ್ಥಾವರದಿಂದ ನೀರು ಹೊರಬಿಡುವ ಮುನ್ನ ಹಲವು ಹಂತದಲ್ಲಿ ಶುದ್ಧೀಕರಣಗೊಂಡೇ ಬರುತ್ತಿದೆ’ ಎಂಬುದಾಗಿ ಹಿರಿಯ ಅಧಿಕಾರಿಯೊಬ್ಬರು ಸಮರ್ಥಿಸಿಕೊಳ್ಳುತ್ತಾರೆ.

ಕೊಡಸಳ್ಳಿಯಿಂದ ನೀರು ಕೊಡಿ

‘ಕದ್ರಾ ಜಲಾಶಯದ ನೀರಿನ ಬಗ್ಗೆ ಜನರಿಗೆ ಅನುಮಾನವಿದೆ. ಆ ನೀರು ಕೈಗಾ ಅಣು ಸ್ಥಾವರದಿಂದ ಹರಿದು ಬರುವುದರಿಂದ ವಿಕಿರಣದ ಅಂಶಗಳಿರಬಹುದು ಎಂಬ ಶಂಕೆ ಇದಕ್ಕೆ ಕಾರಣ. ಕೈಗಾ ಅಣು ಸ್ಥಾವರದಿಂದ ಎಷ್ಟು ಪ್ರಮಾಣದ ನೀರು ನದಿಗೆ ಹರಿಯುತ್ತಿದೆ? ವಿಕಿರಣ ಪ್ರಮಾಣ ಎಷ್ಟಿದೆ? ಎಂಬುದರ ಕುರಿತು ಪರಿಶೀಲನೆಗೆ ಸಮಿತಿ ರಚಿಸಲು ಅಣು ವಿದ್ಯುತ್ ಉತ್ಪಾದನಾ ನಿಗಮಕ್ಕೆ (ಎನ್‌ಪಿಸಿಐಎಲ್‌) ನಿರ್ದೇಶನವಿದೆ. ಈವರೆಗೆ ಸಮಿತಿ ರಚಿಸಿಲ್ಲ. ಜನರ ಗೊಂದಲಕ್ಕೆ ಉತ್ತರ ನೀಡಿಲ್ಲ’ ಎನ್ನುತ್ತಾರೆ ಹಿರಿಯ ವಕೀಲ ಕೆ.ಆರ್.ದೇಸಾಯಿ. ‘ಕದ್ರಾ ಜಲಾಶಯದ ಬದಲು ಅಲ್ಲಿಂದ ಕೇವಲ 18 ಕಿ.ಮೀ ದೂರದಲ್ಲಿನ ಕೊಡಸಳ್ಳಿ ಜಲಾಶಯದಿಂದ ನೀರು ಪೂರೈಸಿದರೆ ಜನರ ವಿರೋಧ ಇರದು. ಆ ಜಲಾಶಯದಿಂದ ನೀರು ಪೂರೈಕೆಗೆ ಯೋಜನೆ ರೂಪಿಸುವುದು ಉತ್ತಮ’ ಎಂಬುದು ಅವರ ಸಲಹೆ.

‘ಬಹುಗ್ರಾಮ ಕುಡಿಯುವ ನೀರಿನ ಘಟಕಗಳಿಂದ ಬೇಸಿಗೆಯಲ್ಲಿ ನೀರು ಎತ್ತಲು ತೊಂದರೆಯಾಗುತ್ತಿರುವ ಜೊತೆಗೆ ಉಪ್ಪು ನೀರಿನ ಸಮಸ್ಯೆ ಹೆಚ್ಚುತ್ತಿರುವುದರಿಂದ ಕದ್ರಾ ಜಲಾಶಯದಿಂದ 15 ಗ್ರಾಮ ಪಂಚಾಯಿತಿ ವ್ಯಾಪ್ತಿಯ 41 ಗ್ರಾಮಗಳ 22 ಸಾವಿರಕ್ಕೂ ಹೆಚ್ಚು ಮನೆಗಳಿಗೆ ನೀರು ಪೂರೈಸಲು ₹85 ಕೋಟಿ ವೆಚ್ಚದ ಯೋಜನೆ ಕೈಗೆತ್ತಿಕೊಳ್ಳಲಾಗಿದೆ’ ಎನ್ನುತ್ತಾರೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ವಿ.ಡಿ.ಕೊಳಂಬಕರ್.

‘ಕದ್ರಾ ಜಲಾಶಯದಿಂದ ದಿನವೊಂದಕ್ಕೆ 6 ದಶಲಕ್ಷ ಲೀಟರ್ ನೀರನ್ನು ಪಂಪ್‌ ಮೂಲಕ ಎತ್ತಿ ವಿರ್ಜೆ ಗ್ರಾಮದಲ್ಲಿ ಸ್ಥಾಪಿಸಿದ ಶುದ್ಧೀಕರಣ ಘಟಕಕ್ಕೆ ಹರಿಸಲಾಗುತ್ತದೆ. ಅಲ್ಲಿಂದ ಕೆರವಡಿ ಮತ್ತು ಗೋಟೆಗಾಳಿಯಲ್ಲಿ ಹೊಸದಾಗಿ ನಿರ್ಮಾಣಗೊಳ್ಳಲಿರುವ ಜಲಸಂಗ್ರಹಾಗಾರಗಳಿಗೆ ಪೂರೈಸಲಾಗುತ್ತದೆ. ಅಲ್ಲಿಂದ ಪೈಪ್‌ಲೈನ್ ಮೂಲಕ ಪ್ರತಿ ಗ್ರಾಮಗಳಿಗೆ ನೀರು ಸರಬರಾಜು ಆಗಲಿದೆ. ಗ್ರಾಮಗಳಿಗೆ ಸರಬರಾಜು ಮಾಡಲು ಬಹುತೇಕ ಪೈಪ್‌ಲೈನ್ ಅಳವಡಿಕೆ ಪೂರ್ಣಗೊಂಡಿದೆ. 4.6 ಎಕರೆಯಷ್ಟು ಅರಣ್ಯ ಭೂಮಿ ಯೋಜನೆಗೆ ಬಳಕೆ ಆಗಬೇಕಿದ್ದು, ಅದಕ್ಕೆ ಅರಣ್ಯ ಇಲಾಖೆಯಿಂದ ಅನುಮತಿಗೆ ಕಾಯಲಾಗುತ್ತಿದೆ’ ಎಂದು ವಿವರಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ