ಸೈಬರ್‌ ಅಪರಾಧ: ‘ಇ–ಶೂನ್ಯ ಎಫ್‌ಐಆರ್‌’ ಜಾರಿಗೆ ತಯಾರಿ

ಸೈಬರ್‌ ಅಪರಾಧ: ‘ಇ–ಶೂನ್ಯ ಎಫ್‌ಐಆರ್‌’ ಜಾರಿಗೆ ತಯಾರಿ

ಸೈಬರ್‌ ಅಪರಾಧ: ‘ಇ–ಶೂನ್ಯ ಎಫ್‌ಐಆರ್‌’ ಜಾರಿಗೆ ತಯಾರಿ

ಬೆಂಗಳೂರು: ಸೈಬರ್ ಅಪರಾಧ ಪ್ರಕರಣಗಳನ್ನು ದಾಖಲಿಸಲು ಕರ್ನಾಟಕವೂ ಸೇರಿ ದೇಶದ ಹಲವು ರಾಜ್ಯಗಳಲ್ಲಿ ‘ಇ–ಶೂನ್ಯ ಎಫ್‌ಐಆರ್‌’ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲು ತಯಾರಿಗಳು ಆರಂಭವಾಗಿದೆ.

‘ಇ–ಶೂನ್ಯ ಎಫ್‌ಐಆರ್’ ಜಾರಿಗೆ ಬಂದರೆ, ಸಾವಿರಾರು ದೂರುಗಳು ಅಧಿಕೃತ ಎಫ್‌ಐಆರ್‌ ವ್ಯಾಪ್ತಿಯೊಳಗೆ ಬರಲಿವೆ. ಆಗ ವರದಿಯಾಗುವ ಸೈಬರ್ ಅಪರಾಧ ಹಾಗೂ ವಂಚನೆ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಏರಿಕೆ ಆಗಲಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಗೃಹ ಸಚಿವಾಲಯದ ಅಡಿ ಕಾರ್ಯ ನಿರ್ವಹಿಸುತ್ತಿರುವ ‘ಇಂಡಿಯನ್‌ ಸೈಬರ್‌ ಕ್ರೈಂ ಕೋ–ಆರ್ಡಿನೇಷನ್‌ ಸೆಂಟರ್‌’ (ಐ4ಸಿ) ‘ಇ–ಶೂನ್ಯ ಎಫ್‌ಐಆರ್’ ಅನ್ನು ದೇಶದಾದ್ಯಂತ ಅನುಷ್ಠಾನಕ್ಕೆ ತರುವಂತೆ ಸೂಚಿಸಿದೆ. ದೆಹಲಿಯಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲಾಗಿತ್ತು. 

ರಾಜ್ಯದ ಸೈಬರ್ ಅಪರಾಧ ಪೊಲೀಸ್ ಠಾಣೆಗಳಲ್ಲಿ ಪ್ರಸ್ತುತ ಸಿಬ್ಬಂದಿ ಕೊರತೆ ಇದೆ. ಈಗಾಗಲೇ ಹೆಚ್ಚಿನ ಕೆಲಸದ ಒತ್ತಡದಲ್ಲಿರುವ ಸೈಬರ್ ಅಪರಾಧ ಠಾಣೆಗಳ ತನಿಖಾಧಿಕಾರಿಗಳ ಮೇಲಿನ ಕೆಲಸದ ಹೊರೆ ಮತ್ತಷ್ಟು ಹೆಚ್ಚಾಗಬಹುದು ಎಂದು ಹಿರಿಯ ಅಧಿಕಾರಿಗಳು ಅಂದಾಜಿಸಿದ್ದಾರೆ.

ಹಿಂದಿನ ನಿಮಯದಂತೆ ದೂರು ನೀಡಲು ಹಣ ಕಳೆದುಕೊಂಡವರು ತಮ್ಮ ವ್ಯಾಪ್ತಿಯ ಠಾಣೆಗೇ ತೆರಳಬೇಕಿತ್ತು. ಹೊಸ ವ್ಯವಸ್ಥೆಯಲ್ಲಿ ಎಫ್‌ಐಆರ್ ನೋಂದಣಿ ಪ್ರಕ್ರಿಯೆ ಸರಳ ಆಗಲಿದೆ. ‘ಇ–ಶೂನ್ಯ ಎಫ್‌ಐಆರ್‌’ನಿಂದ ಸಂತ್ರಸ್ತರಿಗೆ ಹೆಚ್ಚಿನ ಸಹಾಯವಾಗಲಿದೆ ಎಂದು ವಿದ್ಯಾರಣ್ಯಪುರದ ನಿವಾಸಿ ನವೀನ್‌ ರೆಡ್ಡಿ ಹೇಳಿದರು.

ದೆಹಲಿ, ಮಹಾರಾಷ್ಟ್ರ, ಬಿಹಾರ, ಕರ್ನಾಟಕದಲ್ಲಿ ಹೆಚ್ಚಿನ ಸೈಬರ್ ವಂಚನೆ ಪ್ರಕರಣಗಳು ವರದಿ ಆಗುತ್ತಿವೆ. ಕರ್ನಾಟಕದಲ್ಲಿ ವಿವಿಧ ಮಾದರಿಯ 22,253 ಸೈಬರ್ ಅಪರಾಧ ಪ್ರಕರಣಗಳು 2023ರಲ್ಲಿ ವರದಿ ಆಗಿದ್ದವು. ಬ್ಯಾಂಕ್‌ನಲ್ಲಿ ನಕಲಿ ಖಾತೆಗಳನ್ನು ತೆರೆದು ಜನರಿಗೆ ವಂಚಿಸುತ್ತಿದ್ದ ಸೈಬರ್‌ ಜಾಲದ ವಿರುದ್ಧ ‘ಸೈಬರ್ ಕಮಾಂಡ್‌ ಘಟಕ’ ವು ಕಾರ್ಯಾಚರಣೆ ಬಿರುಸು ಮಾಡಿದ್ದರ ಪರಿಣಾಮ, 2025ರಲ್ಲಿ ಪ್ರಕರಣಗಳ ಸಂಖ್ಯೆ 14 ಸಾವಿರಕ್ಕೆ ಇಳಿಕೆಯಾಗಿತ್ತು ಎಂದು ಅಧಿಕಾರಿಯೊಬ್ಬರು ಹೇಳಿದರು.

ಕೋವಿಡ್ ಬಳಿಕ ಆನ್‌ಲೈನ್‌ನಲ್ಲಿ ವ್ಯವಹಾರ ನಡೆಸುವವರ ಸಂಖ್ಯೆ ಹೆಚ್ಚಾಯಿತು. ಅಷ್ಟೇ ವೇಗದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಏರಿಕೆಯಾಗಿದ್ದವು. ಅದರ ಬೆನ್ನಲ್ಲೇ 2021ರಲ್ಲಿ ಪ್ರತ್ಯೇಕವಾಗಿ ‘ಸೈಬರ್‌ ಕ್ರೈಂ ಸಹಾಯವಾಣಿ’ ಸ್ಥಾಪಿಸಲಾಗಿತ್ತು. ಸಂತ್ರಸ್ತರು, ‘ಗೋಲ್ಡನ್ ಅವರ್‌’ನಲ್ಲಿ (ಕೃತ್ಯ ನಡೆದ ಒಂದು ತಾಸಿನ ಒಳಗಾಗಿ) ಸಹಾಯವಾಣಿ 1930 ಕ್ಕೆ ಕರೆ ಮಾಡಿ ವಂಚನೆ ಬಗ್ಗೆ ಮಾಹಿತಿ ನೀಡುತ್ತಿದ್ದರು. ಆಗ ಬ್ಯಾಂಕ್‌ಗಳಲ್ಲಿಯೇ ಹಣದ ವಹಿವಾಟು ತಡೆ (ಫ್ರೀಜ್‌) ಹಿಡಿಯಲಾಗುತ್ತಿತ್ತು. ಅದಾದ ಮೇಲೆ ಸಂತ್ರಸ್ತರಿಗೆ ಸ್ವಲ್ಪ ಹಣ ಲಭಿಸುತ್ತಿತ್ತು.

ಸಹಾಯವಾಣಿ ನಿರ್ವಹಣೆ, ‘ಫ್ರೀಜ್‌’ ವ್ಯವಸ್ಥೆಯಲ್ಲಿ ಕಾನೂನು ತೊಡಕುಗಳು ಎದುರಾಗಿವೆ. ಸಹಾಯವಾಣಿಗೆ ಕರೆ ಮಾಡಿದಾಗ ಗ್ರಾಹಕರ ಬ್ಯಾಂಕ್‌ ಖಾತೆಗಳನ್ನೇ ಸ್ಥಗಿತಗೊಳಿಸಲಾಗುತ್ತಿದೆ. ಇದರಿಂದ ಗ್ರಾಹಕರು ತೊಂದರೆ ಎದುರಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಎಲ್ಲಿ ಬೇಕಾದರೂ ದೂರು ನೀಡಬಹುದು

ಅತ್ಯಾಚಾರ, ಅತ್ಯಾಚಾರ ಯತ್ನ ಸೇರಿದಂತೆ ಇತರೆ ಅಪರಾಧ ಪ್ರಕರಣಗಳಲ್ಲಿ ಸಂತ್ರಸ್ತರು ಸಮೀಪದ ಠಾಣೆಗೆ ತೆರಳಿ ಭಾರತೀಯ ನ್ಯಾಯ ಸಂಹಿತೆ ಕಾಯ್ದೆ ಅಡಿ ದೂರು ನೀಡಬಹುದಾಗಿದೆ. ಆ ಪೊಲೀಸ್ ಠಾಣೆಯ ಠಾಣಾಧಿಕಾರಿ ದೂರನ್ನು ನಿರಾಕರಿಸದೇ ‘ಶೂನ್ಯ ಎಫ್‌ಐಆರ್’ ದಾಖಲಿಸಿಕೊಂಡು ಕೃತ್ಯ ನಡೆದ ವ್ಯಾಪ್ತಿಯ ಠಾಣೆಗೆ ಎಫ್‌ಐಆರ್ ಪ್ರತಿ ರವಾನೆ ಮಾಡುತ್ತಾರೆ. ಅಲ್ಲಿನ ಠಾಣೆಯ ಅಧಿಕಾರಿಗಳು ಎಫ್‌ಐಆರ್ ಸಂಖ್ಯೆ ನಮೂದಿಸಿಕೊಂಡು ತನಿಖೆ ಮುಂದುವರಿಸುತ್ತಾರೆ. ಅದೇ ಮಾದರಿಯಲ್ಲಿ ಸೈಬರ್ ಅಪರಾಧ ಪ್ರಕರಣಗಳ ನೋಂದಣಿಗೂ ‘ಇ–ಶೂನ್ಯ ಎಫ್‌ಐಆರ್’ ಜಾರಿಗೆ ಸಿದ್ಧತೆಗಳು ನಡೆದಿವೆ.

ಇದು ಜಾರಿಯಾದರೆ ಸಂತ್ರಸ್ತರು ಯಾವ ಠಾಣೆಗೆ ಬೇಕಾದರೂ ತೆರಳಿ ದೂರು ನೀಡಬಹುದಾಗಿದೆ. ಬಳಿಕ ಸಂಬಂಧಪಟ್ಟ ಠಾಣೆಗೆ ಎಫ್‌ಐಆರ್ ವರ್ಗಾವಣೆ ಆಗಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು. ₹50 ಸಾವಿರಕ್ಕಿಂತ ಹೆಚ್ಚಿನ ವಂಚನೆಯಾದರೆ ಎಫ್‌ಐಆರ್ ದಾಖಲಿಸಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ ಕರ್ನಾಟಕವು ₹1 ಲಕ್ಷಕ್ಕಿಂತ ಹೆಚ್ಚು ವಂಚನೆ ನಡೆದಿದ್ದರೆ ಪ್ರಕರಣ ದಾಖಲಿಸುವುದಕ್ಕೆ ಒಪ್ಪಿದೆ. ಕಡಿಮೆ ಮೊತ್ತದ ವಂಚನೆ ಆಗಿದ್ದರೆ ಸಂತ್ರಸ್ತರಿಗೆ ಕಾನೂನಿನಲ್ಲಿ ಹೇಗೆ ನೆರವು ಸಿಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಹೇಳಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ