
ವಿಜಯಪುರ ಪುರಸಭೆ ಜೆಡಿಎಸ್ ಅನರ್ಹ ಸದಸ್ಯರ ನಡೆ ಯಾವ ಕಡೆ?
ವಿಜಯಪುರ (ದೇವನಹಳ್ಳಿ): ಪಕ್ಷದ ನಿರ್ದೇಶನ (ವಿಪ್) ಉಲ್ಲಂಘಿಸಿ ಅನರ್ಹಗೊಂಡ ವಿಜಯಪುರ ಪುರಸಭೆ ಜೆಡಿಎಸ್‌ನ ಏಳು ಸದಸ್ಯರ ಮುಂದಿನ ನಡೆಯೂ ಸಾರ್ವಜನಿಕ ವಲಯದಲ್ಲಿ ಕೂತಹಲ ಕೆರಳಿಸಿದೆ.
ಪುರಸಭೆ ಚುನಾಯಿತ ಸದಸ್ಯರ ಸದಸ್ಯತ್ವದ ಅಧಿಕಾರವಧಿ ಸೆ.19 (ಶನಿವಾರ) ಮುಕ್ತಾಯಗೊಂಡಿದೆ. ಇದರ ಬೆನ್ನಲ್ಲೇ ಜೆಡಿಎಸ್ ಅನರ್ಹ ಸದಸ್ಯರ ಯಾವ ಪಕ್ಷಕ್ಕೆ ಸೇರಲಿದ್ದಾರೆ ಎಂಬ ಚರ್ಚೆ ಶುರುವಾಗಿದೆ.
ಹಿಂದಿನಿಂದಲೂ ವಿಜಯಪುರ ಪಟ್ಟಣ ಜೆಡಿಎಸ್ ಭದ್ರಕೋಟೆ. ಅನರ್ಹ ಸದಸ್ಯರು ಗೆದ್ದಿದ್ದ ವಾರ್ಡ್‍ಗಳಲ್ಲಿ ಜೆಡಿಎಸ್ ಪ್ರಾಬಲ್ಯ ಇದೆ. ಹೀಗಾಗಿಯೇ 2021ರಲ್ಲಿ ನಡೆದ ಪುರಸಭೆ ಚುನಾವಣೆಯಲ್ಲಿ 23 ಚುನಾಯಿತ ಪ್ರತಿನಿಧಿಗಳ ಪೈಕಿ 13 ಮಂದಿ ಜೆಡಿಎಸ್ ಸದಸ್ಯರು ಗೆದ್ದಿದ್ದರು.
ಜೆಡಿಎಸ್‍ನ ಎಲ್ಲ ಸದಸ್ಯರಿಗೂ ಸೂಕ್ತ ಸ್ಥಾನಮಾನ ಸಿಗಬೇಕೆಂಬ ಕಾರಣಕ್ಕೆ ಸದಸ್ಯರ ಐದು ವರ್ಷ ಅಧಿಕಾರಾವಧಿಯನ್ನು ಒಂದು ಕಾಲು ವರ್ಷದಂತೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಹಂಚಿಕೆಗೆ ತೀರ್ಮಾನಿಸಲಾಗಿತ್ತು.
ಮೊದಲ ಅವಧಿ ಅಧ್ಯಕ್ಷರಾಗಿ ರಾಜೇಶ್ವರಿ ಭಾಸ್ಕರ್, ಉಪಾಧ್ಯಕ್ಷರಾಗಿ ಕೇಶವಪ್ಪ ಆಯ್ಕೆಯಾದರು. ಎರಡನೇ ಅವಧಿಗೆ ಅಧ್ಯಕ್ಷರಾಗಿ ವಿಮಲಾ ಬಸವರಾಜು, ಉಪಾಧ್ಯಕ್ಷರಾಗಿ ಕೇಶವಪ್ಪ ಆಯ್ಕೆ ಮಾಡಲಾಗಿತ್ತು. ಮೂರನೇ ಅವಧಿಗೆ ಪುನಃ ಅಧ್ಯಕ್ಷರ ಸ್ಥಾನಕ್ಕೆ ಅವರೇ ಆಕಾಂಕ್ಷಿಯಾಗಿದ್ದರು.
ಈ ಕಾರಣಕ್ಕೆ ಬೇಸತ್ತ ಜೆಡಿಎಸ್ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಏಳು ಸದಸ್ಯರು 2025 ಮಾರ್ಚ್ 10 ರಂದು ಪುರಸಭೆ 3ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಮತ ಚಲಾಯಿಸಿದ್ದರು. ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್‍ಗೆ, ಉಪಾಧ್ಯಕ್ಷ ಸ್ಥಾನವನ್ನು ಜೆಡಿಎಸ್ ಸದಸ್ಯರೊಬ್ಬರು ಅಧಿಕಾರ ವಹಿಸಿಕೊಂಡಿದ್ದರು.
ಪಕ್ಷದ ವಿಪ್ ಉಲ್ಲಂಘಿಸಿದ 7 ಸದಸ್ಯರ ವಿರುದ್ಧ ಅಂದಿನ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಮುನೇಗೌಡ 2025 ಮಾರ್ಚ್ 27ರಂದು ಪುರಸಭೆ ಮುಖ್ಯಾಧಿಕಾರಿಗೆ ದೂರು ಸಲ್ಲಿಸಿದ್ದರು.
ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ ನ್ಯಾಯಾಲಯವು, ಕರ್ನಾಟಕ ಸ್ಥಳೀಯ ಸಂಸ್ಥೆಗಳ ಪಕ್ಷಾಂತರ ನಿಷೇಧ ಕಾಯ್ದೆಯಡಿ ಫೆಬ್ರವರಿ 26ರಂದು ಇವರ ಸದಸ್ಯತ್ವವನ್ನು ರದ್ದುಗೊಳಿಸಿ ತೀರ್ಪು ನೀಡಿತು. ಈಗಲೂ ಪ್ರಕರಣ ನ್ಯಾಯಾಲಯದಲ್ಲಿದೆ.
ಸದ್ಯ ಸೆ.19ಕ್ಕೆ ಪುರಸಭೆ ಚುನಾಯಿತ ಪ್ರತಿನಿಧಿಗಳ ಅಧಿಕಾರವಾಧಿ ಮುಕ್ತಾಯಗೊಂಡ ಬಳಿಕ ಜೆಡಿಎಸ್‍ನ ಅನರ್ಹ ಸದಸ್ಯರ ನಡೆ ಬಗ್ಗೆ ಸಾರ್ವಜನಿಕ ವಲಯದಲ್ಲದೇ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಾಳಯದಲ್ಲೂ ಇದೀಗ ಸಂಚಲನಕ್ಕೆ ಕಾರಣವಾಗಿದೆ.
ಈಗಾಗಲೇ ಜೆಡಿಎಸ್ ಪಕ್ಷದಲ್ಲಿನ ನಾಯಕರ ಭಿನ್ನಾಭಿಪ್ರಾಯ ಕಳೆದ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ಗೆ ಲಾಭ ಮಾಡಿಕೊಟ್ಟಿದೆ. ಇದೀಗ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸಮೀಪಿಸುತ್ತಿರುವ ಕಾರಣ ಈಗಾಗಲೇ ಜೆಡಿಎಸ್‌ನ ನಾಯಕರು ಹೊಸ ಹುರುಪಿನೊಂದಿಗೆ ಪಕ್ಷ ಸಂಘಟನೆಗೆ ಇಳಿದಿದ್ದಾರೆ.
ಮೂರನೇ ಅವಧಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವಿಚಾರವಾಗಿ ಜೆಡಿಎಸ್‍ನಲ್ಲಿ ಭಿನ್ನಾಭಿಪ್ರಾಯ ಉಂಟಾದವು. ಅಂದು ಈ ಬಗ್ಗೆ ಜೆಡಿಎಸ್‍ನ ವರಿಷ್ಠರ ಗಮನಕ್ಕೆ ತಂದು ಅವರ ಮಾತಿಗೆ ಬದ್ಧರಾಗಿ, ಅವರು ಸೂಚಿಸಿದ ವ್ಯಕ್ತಿಗೆ ಮತ ಚಲಾಯಿಸಿದೆವು ಎಂದು ಅನರ್ಹ ಸದಸ್ಯರೊಬ್ಬರು ತಿಳಿಸಿದರು.
ಜೆಡಿಎಸ್ ನಾಯಕರು ಈವರೆಗೂ ಏಳು ಅನರ್ಹ ಸದಸ್ಯರನ್ನು ಸಂಪರ್ಕಿಸಿಲ್ಲ. ಹೀಗಾಗಿ ಅನರ್ಹ ಸದಸ್ಯರೇ ಮುಂದಿನ ನಡೆಯ ಬಗ್ಗೆ ವಾರ್ಡ್‍ಗಳಲ್ಲಿ ಸಾರ್ವಜನಿಕರು, ಮುಖಂಡರೊಂದಿಗೆ ಶೀಘ್ರ ಸಭೆ ಕರೆದು ಚರ್ಚಿಸಿ ತೀರ್ಮಾನಿಸಲಿದ್ದಾರೆ ಎಂದು ಅನರ್ಹ ಸದಸ್ಯರೊಬ್ಬರು ತಿಳಿಸಿದ್ದಾರೆ.
‘ಜೆಡಿಎಸ್ ಪಕ್ಷಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಅನರ್ಹ ಸದಸ್ಯರಾದ ಬಳಿಕ ಪಕ್ಷದ ನಾಯಕರು ಯಾವುದೇ ಕಾರ್ಯಕ್ರಮಗಳಿಗೆ ಕರೆದಿಲ್ಲ. ಈಗ ಅವಧಿ ಮುಗಿದಿದೆ. ಬೇರೆ ಪಕ್ಷಗಳಿಂದ ಆಮಿಷ ಬರುತ್ತಿದೆ. ಸ್ಥಳೀಯರೊಂದಿಗೆ ಚರ್ಚಿಸಿ ಮುಂದಿನ ನಡೆ ಬಗ್ಗೆ ತಿಳಿಸುತ್ತೇವೆ’ ಎಂದು ಹೆಸರು ಹೇಳಲು ಇಚ್ಛಿಸಿದ ಅನರ್ಹ ಸದಸ್ಯರೊಬ್ಬರು ಹೇಳಿದರು.
ಕರೆ ಸ್ವೀಕರಿಸದ ಜಿಲ್ಲಾ ಘಟಕದ ಅಧ್ಯಕ್ಷ, ಮಾಜಿ ಶಾಸಕ: ಅನರ್ಹರ ಸದಸ್ಯರ ಸಂಬಂಧ ಮಾಹಿತಿ ಪಡೆಯಲು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೊಡಗುರ್ಕಿ ಮಂಜುನಾಥ್ ಹಾಗೂ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರಿಗೆ ದೂರವಾಣಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಸಾದಹಳ್ಳಿ ಮಹೇಶ್‍ಗೆ ಕರೆ ಮಾಡಿದರೆ, ‘ಅನರ್ಹ ಸದಸ್ಯರ ವಿಚಾರದ ಕುರಿತು ಏನೂ ಮಾತನಾಡುವುದಿಲ್ಲ, ಭಾನುವಾರ ಸಭೆ ಇದೆ. ಬಳಿಕ ಮಾತನಾಡುವೆ’ ಎಂದರು.
ಪಕ್ಷಕ್ಕಲ್ಲ, ವ್ಯಕ್ತಿಗೆ ವಿರೋಧ
‘ಏಳು ಮಂದಿಯೂ ಜೆಡಿಎಸ್ ಸಂಘಟನೆಯಲ್ಲಿ ನಿಷ್ಠಾವಂತರಾಗಿ ಕೆಲಸ ಮಾಡಿದ್ದೇವೆ. ಪಕ್ಷದಲ್ಲಿದ್ದ ಕೆಲ ಸ್ವಾರ್ಥಿಗಳು ಆಡಿದ ಮಾತಿನಂತೆ ನಡೆಯಲಿಲ್ಲ. ಇದರಿಂದಲೇ ಪಕ್ಷದ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಮೂಡಿತು. ನಾವು ವ್ಯಕ್ತಿಯನ್ನು ವಿರೋಧಿಸಿದ್ದೇವೆ; ಹೊರತು ಪಕ್ಷವನ್ನು ಎಂದಿಗೂ ವಿರೋಧಿಸಿಲ್ಲ’ ಎಂದು ಅನರ್ಹ ಸದಸ್ಯ ಬೈರೇಗೌಡ ತಿಳಿಸಿದರು.
ಮಾಜಿ ಶಾಸಕರ ವಿರುದ್ಧ ಬೇಸರ
ಈಚೆಗಷ್ಟೇ ಗಣೇಶ ಹಬ್ಬಕ್ಕೆ ವಾರ್ಡ್‍ಗಳಲ್ಲಿ ಪ್ರತಿಷ್ಠಾಪಿಸುವ ಗಣೇಶೋತ್ಸವ ಸಮಿತಿಗಳಿಗೆ ಜೆಡಿಎಸ್‌ನ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹಣ ಸಹಾಯ ಮಾಡಿದ್ದಾರೆ. ಅನರ್ಹ ಸದಸ್ಯರ ವಾರ್ಡ್‍ಗಳಲ್ಲಿ ಬೇರೆ ವ್ಯಕ್ತಿಗಳಿಂದ ಹಣ ಸಹಾಯ ಮಾಡಿಸಿರುವುದಕ್ಕೆ ಅನರ್ಹ ಸದಸ್ಯರು ಮಾಜಿ ಶಾಸಕರ ವಿರುದ್ಧ ಬೇಸರ ಹೊರ ಹಾಕಿದ್ದಾರೆ.