
ಎಸ್.ಎಸ್.ಕೂಡ್ಲಮಠ ಶಾಲೆಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ
ಲಕ್ಷ್ಮೇಶ್ವರ: ತಾಲ್ಲೂಕಿನ ಒಡೆಯರಮಲ್ಲಾಪುರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಶಿಗ್ಲಿ ಗ್ರೂಪ್ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟದಲ್ಲಿ ತಾಲ್ಲೂಕಿನ ಶಿಗ್ಲಿಯ ಎಸ್.ಎಸ್. ಕೂಡ್ಲಮಠ ಮಾಧ್ಯಮಿಕ ಶಾಲೆಯ ಕ್ರೀಡಾಳುಗಳು ಉತ್ತಮ ಸಾಧನೆ ಮಾಡುವ ಮೂಲಕ ಸಮಗ್ರ ವೀರಾಗ್ರಣಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವಾಲಿಬಾಲ್, 400X4 ಮಿ. ರಿಲೆ, 100X4 ಮೀ. ರೀಲೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಕಿರಣ ಉಂಡಿ 100 ಮೀ, 200 ಮೀ. ಹಾಗೂ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ಬಾಚಿಕೊಂಡಿದ್ದಾನೆ.
ಸರಪಳಿ ಗುಂಡು ಹಾಗೂ ಗುಂಡು ಎಸೆತದಲ್ಲಿ ಅಝಾದ್ ಸೂರಣಗಿ ಪ್ರಥಮ ಸ್ಥಾನ, ಅಡೆತಡೆ ಓಟ ಹಾಗೂ ತ್ರಿವಿಧ ಜಿಗಿತದಲ್ಲಿ ಅಲ್ತಾಫ್ ಸುಂಕದ ಪ್ರಥಮ, ಭರ್ಚಿ ಎಸೆತದಲ್ಲಿ ಶಿವರಾಜ್ ವಾಲಿಕರ ಪ್ರಥಮ, 3000 ಮೀ. ಓಟದಲ್ಲಿ ವಿವೇಕ್ ಬಾರ್ಕಿ ಪ್ರಥಮ, 400 ಮೀ ಓಟದಲ್ಲಿ ಮನೋಜ್ ಹೊನ್ನಿಕೊಪ್ಪ ಪ್ರಥಮ ಸ್ಥಾನ ಪಡೆದು ತಾಲ್ಲೂಕುಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಕೊಕ್ಕೊ, 4X100 ಮೀ, 4X400ಮೀ, ರಿಲೇಯಲ್ಲಿ ಪ್ರಥಮ ಸ್ಥಾನವನ್ನು ಹಾಗೂ ಥ್ರೋಬಾಲ್‍ನಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಗೆ ವೀರಾಗ್ರಣಿ ಪ್ರಶಸ್ತಿಯನ್ನು ತಂದುಕೊಟಿದ್ದಾರೆ.
ವೈಯಕ್ತಿಕ ವಿಭಾಗದಲ್ಲಿ ಕಲ್ಪನಾ ಲಮಾಣಿ 800 ಮೀ, 1,500 ಮೀ. ತ್ರಿವಿಧ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾಳೆ.
200ಮೀ ಹಾಗೂ ಎತ್ತರ ಜಿಗಿತದಲ್ಲಿ ಸರಸ್ವತಿ ನಾಯಕ ಪ್ರಥಮ, ಸರಪಳಿ ಗುಂಡು ಎಸೆದಲ್ಲಿ ರೇಣುಕಾ ಹುಳ್ಳಿಕೊಪ್ಪಿ ಪ್ರಥಮ, ಚಕ್ರ ಎಸೆತದಲ್ಲಿ ಸುಮಯ್ಯ ಮತ್ತೂರ್ ಪ್ರಥಮ, 400 ಮೀ ಓಟದಲ್ಲಿ ಗಂಗವ್ವ ಕೊಪ್ಪಳ ಪ್ರಥಮ, 100ಮೀ ಓಟ ಮತ್ತು ಉದ್ದ ಜಿಗಿತದಲ್ಲಿ ವರ್ಷಾ ಮಟ್ಟಿ ಪ್ರಥಮ, ಅಡೆತಡೆ ಓಟದಲ್ಲಿ ಅಪ್ಸಾನ ನದಾಫ್ ಪ್ರಥಮ ಸ್ಥಾನ ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.