ಹೋರಾಟ, ಒತ್ತಡಕ್ಕೆ ಬೆದರಿದ ಸರ್ಕಾರ: ಉದ್ಯಾನ ಭೂಮಿ ಬಳಕೆ ಮಸೂದೆ ವಾಪಸ್

ಹೋರಾಟ, ಒತ್ತಡಕ್ಕೆ ಬೆದರಿದ ಸರ್ಕಾರ:  ಉದ್ಯಾನ ಭೂಮಿ ಬಳಕೆ ಮಸೂದೆ ವಾಪಸ್

ಹೋರಾಟ, ಒತ್ತಡಕ್ಕೆ ಬೆದರಿದ ಸರ್ಕಾರ: ಉದ್ಯಾನ ಭೂಮಿ ಬಳಕೆ ಮಸೂದೆ ವಾಪಸ್

ಬೆಂಗಳೂರು: ರಾಜ್ಯದಾದ್ಯಂತ ಇರುವ ಉದ್ಯಾನಗಳ ಶೇ 5ರಷ್ಟು ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಸುವ ನಿರ್ಧಾರಕ್ಕೆ ವ್ಯಕ್ತವಾದ ತೀವ್ರ ಆಕ್ರೋಶಕ್ಕೆ ಬೆದರಿದ ಸರ್ಕಾರ, ವಿಧಾನಮಂಡಲದಲ್ಲಿ ಅಂಗೀಕೃತಗೊಂಡ ಮಸೂದೆಯನ್ನೇ ವಾಪಸ್‌ ಪಡೆದಿದೆ.

ಉದ್ಯಾನ ಜಾಗವನ್ನು ಬಳಸಲು ಮುಂದಾಗಿದ್ದ ಸರ್ಕಾರ ಇದಕ್ಕಾಗಿ, ‘ಕರ್ನಾಟಕ ಸರ್ಕಾರಿ‌ ಉದ್ಯಾನವನಗಳ (ಸಂರಕ್ಷಣೆ) (ತಿದ್ದುಪಡಿ) ಮಸೂದೆ -2026’ನ್ನು ರೂಪಿಸಿತ್ತು. ಉದ್ಯಾನ ಮತ್ತು ತೋಟಗಾರಿಕೆ ಇಲಾಖೆ ಭೂಮಿಯಲ್ಲಿ ಗರಿಷ್ಠ ಶೇ 5ರಷ್ಟನ್ನು ಮಾರಾಟ, ಗುತ್ತಿಗೆ, ಕೊಡುಗೆ, ವಿನಿಮಯ ಅಥವಾ ಅಡಮಾನದ ಮೂಲಕ ಸಾರ್ವಜನಿಕ ಮೂಲಸೌಕರ್ಯ ಮತ್ತು ನಾಗರಿಕರ ಉಪಯೋಗಕ್ಕೆ ಬಳಸಿಕೊಳ್ಳುವುದಾಗಿ ಮಸೂದೆಯಲ್ಲಿ ಪ್ರತಿಪಾದಿಸಲಾಗಿತ್ತು. 

ಈಚೆಗೆ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದರು. ಈ ಗದ್ದಲದ ಮಧ್ಯೆಯೇ, ಉಭಯ ಸದನಗಳಲ್ಲೂ ಮಸೂದೆಗೆ ಸರ್ಕಾರ ಅಂಗೀಕಾರ ಪಡೆದಿತ್ತು. 

ಸರ್ಕಾರದ ನಡೆಯ ಬಗ್ಗೆ ‘ಪ್ರಜಾವಾಣಿ’ಯು 10 ದಿನ ನಿರಂತರವಾಗಿ ಸಾರ್ವಜನಿಕರ ಅಭಿಪ್ರಾಯವನ್ನು ಪ್ರಕಟಿಸಿತ್ತು. ಪರಿಸರಪ್ರೇಮಿಗಳು, ಸಾರ್ವಜನಿಕರು ಹಾಗೂ ವಿಪಕ್ಷ ಸದಸ್ಯರೂ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ‌

ಗುರುವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ, ಮಸೂದೆ ವಾಪಸ್ ಪಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದರು.

‘ಮಸೂದೆಯ ಕುರಿತು ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಅಂತಿಮವಾಗಿ ಮಸೂದೆಯನ್ನು ಹಿಂಪಡೆದು, ಸಾರ್ವಜನಿಕರ ಅಭಿಪ್ರಾಯ, ಸಲಹೆ ಹಾಗೂ ಆಕ್ಷೇಪ ಆಹ್ವಾನಿಸಲು ತೀರ್ಮಾನಿಸಲಾಗಿದೆ. ಕೆಲವು ಪರಿಷ್ಕರಣೆಗಳೊಂದಿಗೆ ಮುಂದಿನ ಅಧಿವೇಶನದಲ್ಲಿ ಮತ್ತೆ ಈ ಮಸೂದೆಯನ್ನು ಮಂಡಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ. ಈ ಕುರಿತು ರಾಜ್ಯಪಾಲರಿಗೂ ಮಾಹಿತಿ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ’ ಎಂದೂ ಅವರು ಹೇಳಿದರು.

‘ಈ ಮಸೂದೆಯ ಬಗ್ಗೆ ಇತ್ತೀಚೆಗೆ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ವಿರೋಧ ಪಕ್ಷಗಳ ಸದಸ್ಯರು ಚರ್ಚೆಯನ್ನೇ ಮಾಡಿಲ್ಲ. ಅದರ ಬದಲು ವಿಷಯವನ್ನು ರಾಜಕೀಯವಾಗಿ ಬಳಸಿಕೊಂಡು, ಸಾರ್ವಜನಿಕರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಜನರ ಭಾವನೆಗಳಿಗೆ ಮನ್ನಣೆ ನೀಡಿ ಮಸೂದೆ ವಾಪಸ್‌ ಪಡೆಯಲು ನಿರ್ಧರಿಸಲಾಗಿದೆ. ಮಸೂದೆಯಲ್ಲಿರುವ ಮಾರಾಟ, ಗುತ್ತಿಗೆ, ಉಡುಗೊರೆ ಈ ಅಂಶಗಳನ್ನು ಪುನರ್ ಪರಿಶೀಲನೆ ಮಾಡುತ್ತೇವೆ’ ಎಂದರು.

‘ಗರಿಷ್ಠ ಶೇ 5ರಷ್ಟು ಜಾಗ ಎಂದರೆ, 100 ಎಕರೆ ವಿಸ್ತೀರ್ಣದ ಉದ್ಯಾನದಲ್ಲಿ ಐದು ಎಕರೆಯಷ್ಟು ಮಾರಾಟ ಎಂಬ ತಪ್ಪು ಅಭಿಪ್ರಾಯ ಉಂಟಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಲಾಗುವುದು’ ಎಂದರು.

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ, ‘ವಿರೋಧ ಪಕ್ಷಗಳ ಆರೋಪಕ್ಕೆ ಅಲ್ಲ; ಸಾರ್ವಜನಿಕ ವಲಯ, ಪರಿಸರಪ್ರೇಮಿಗಳು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಮನ್ನಣೆ ನೀಡಿದ್ದೇವೆ’ ಎಂದರು.

ನೈಸ್‌ಗೆ ಭೂಮಿ ಕೊಟ್ಟ ರೈತರಿಗೆ ನಿವೇಶನ

‘ನೈಸ್‌ ಕಂಪನಿಯ ಬೆಂಗಳೂರು–ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ (ಬಿಎಂಐಸಿ) ಯೋಜನೆಗೆ ಸ್ವಯಂ ಪ್ರೇರಿತವಾಗಿ ಭೂಮಿ ಕೊಟ್ಟವರಿಗೆ ನೈಸ್ ಟೌನ್ ಶಿಪ್‌ನಲ್ಲಿ ನಿವೇಶನ ನೀಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ’ ಎಂದು ಪರಮೇಶ್ವರ ತಿಳಿಸಿದರು.

‘ನೈಸ್ ಸಂಸ್ಥೆಗೆ ರೈತರು ಜಮೀನು ಕೊಡುವ ವೇಳೆ ಕೆಲವರು ಸ್ವಯಂಪ್ರೇರಿತವಾಗಿ ತಮ್ಮ ಭೂಮಿಯನ್ನು ಕೊಟ್ಟಿದ್ದರು. ಅಂದಿನ‌ ಜಿಲ್ಲಾಧಿಕಾರಿ, ಸಮಿತಿ ಜಮೀನು ಕೊಟ್ಟವರಿಗೆ ನೈಸ್ ಟೌನ್ ಶಿಪ್‌ನಲ್ಲಿ ನಿವೇಶನ ನೀಡಲು ತೀರ್ಮಾನಿಸಿದ್ದರು. ಅದರಂತೆ ಒಂದು ಎಕರೆ ಒಳಗೆ ಜಮೀನು ಕೊಟ್ಟವರಿಗೆ 30X40 ನಿವೇಶನ, ಒಂದು ಎಕರೆಗಿಂತ ಹೆಚ್ಚಿನ‌ ಜಮೀನು ನೀಡಿದವರಿಗೆ 60X40 ನಿವೇಶನ ನೀಡಲು ತೀರ್ಮಾನಿಸಲಾಗಿತ್ತು. ಅದಕ್ಕೆ ನೈಸ್ ಕಂಪನಿಯೂ ಒಪ್ಪಿಕೊಂಡಿತ್ತು. ಈ ಅಂಶ ‘ಫ್ರೇಮ್ ವರ್ಕ್ ಅಗ್ರಿಮೆಂಟ್’ನಲ್ಲಿ (ಕ್ರಿಯಾ ಒಪ್ಪಂದ) ಇಲ್ಲ. ಆದರೆ, ಜಮೀನು ಕಳೆದುಕೊಂಡವರು ನಿವೇಶನ ನೀಡುವಂತೆ ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದರು’ ಎಂದು ವಿವರಿಸಿದರು.

‘ಸ್ವಯಂ ಪ್ರೇರಿತವಾಗಿ ಭೂಮಿ ಕೊಟ್ಟ 1,453 ರೈತರು ಇದ್ದಾರೆ. ಅವರಿಗೆ ನಾಲ್ಕು ಜಾಗಗಳಲ್ಲಿ ನಿವೇಶನ ನೀಡಲು ತೀರ್ಮಾನಿಸಲಾಗಿದೆ. ಸದ್ಯ 570 ನಿವೇಶನಗಳು ಲಭ್ಯ ಇದೆ. 30X40 ವಿಸ್ತೀರ್ಣದ 231 ಹಾಗೂ 40X60 ವಿಸ್ತೀರ್ಣದ 243 ನಿವೇಶನಗಳು ಲಭ್ಯವಿದೆ. ಇನ್ನೂ 579 ನಿವೇಶನಗಳು ಬೇಕಾಗಿದೆ. ನೈಸ್ ಕಂಪನಿಯವರು ವರಾಹಸಂದ್ರ, ಮಾದಾವರ, ಶ್ರೀಕಂಠಪುರ, ಗಂಗೊಂಡನಹಳ್ಳಿಯಲ್ಲಿ ಜಮೀನು ಸ್ವಾಧೀನಪಡಿಸಿಕೊಂಡಿದ್ದರು. ಅಲ್ಲಿ ಜಮೀನುಗಳು ಇವೆ. ಅವರು ಅದನ್ನು ನಿವೇಶನ ಮಾಡಿ ರೈತರಿಗೆ ಕೊಡಬೇಕು.‌ ಟೌನ್ ಶಿಪ್‌ನಲ್ಲೇ ನೈಸ್ ಸಂಸ್ಥೆ ಎರಡು ತಿಂಗಳ ಒಳಗೆ ರೈತರಿಗೆ ನಿವೇಶನಗಳನ್ನು ಕೊಡಬೇಕು ಎಂದು ಸೂಚನೆ ನೀಡಲಾಗಿದೆ’ ಎಂದೂ ತಿಳಿಸಿದರು.

ಇದೇ 21ರಿಂದ ವಿಶೇಷ ಅಧಿವೇಶನ

ಇದೇ 21ರಿಂದ 23ರವರೆಗೆ ಮೂರು ದಿನ ವಿಧಾನ ಮಂಡಲದ ವಿಶೇಷ ಅಧಿವೇಶನ ನಡೆಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

‘ರಾಜ್ಯದಲ್ಲಿ ಈ ವರ್ಷ ಭೀಕರ ಬರಗಾಲ ಇದೆ. ಬರಗಾಲವೂ ಸೇರಿದಂತೆ ಅನೇಕ ಜ್ವಲಂತ ಸಮಸ್ಯೆಗಳು, ಅದರ ಪರಿಣಾಮಗಳು, ಬರ ತಾಲ್ಲೂಕುಗಳು, ಸರ್ಕಾರ ತೆಗೆದುಕೊಂಡ ಕ್ರಮಗಳು, ಕೇಂದ್ರದಿಂದ ಕೋರುತ್ತಿರುವ ಪರಿಹಾರ, ಮಳೆ ಕೊರತೆ, ಕುಡಿಯುವ ನೀರಿನ ನಿರ್ವಹಣೆ, ಬೆಳೆ ನಷ್ಟ, ಮೇವು ಪೂರೈಕೆ, ರೈತರಿಗೆ ಬರ ಪರಿಹಾರ ಮುಂತಾದ ವಿಷಯಗಳ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ನಡೆಸಲು ನಿರ್ಣಯ ತೆಗೆದುಕೊಳ್ಳಲಾಗಿದೆ’ ಎಂದು ಪರಮೇಶ್ವರ ತಿಳಿಸಿದರು.

‘ಜೊತೆಗೆ, ಪಶ್ಚಿಮ ಘಟ್ಟಕ್ಕೆ ಸಂಬಂಧಿಸಿದಂತೆ ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆ ಕುರಿತು ಕೂಡಾ ಈ ಅಧಿವೇಶನದಲ್ಲಿ ಸಮಗ್ರವಾಗಿ ಚರ್ಚೆ ನಡೆಸಲಾಗುವುದು’ ಎಂದರು.

ಗಣಿ: ‘ಸ್ಥಾಯಿ ಸಮಿತಿ’ ರಚನೆ

ಗಣಿ ಚಟುವಟಿಕೆ ನಡೆಯುವ ಜಿಲ್ಲೆಗಳಲ್ಲಿ ಕ್ರಿಯಾಯೋಜನೆ ಕುರಿತಂತೆ ಅಂತಿಮ ತೀರ್ಮಾನ ತೆಗೆದುಕೊಳ್ಳಲು ‘ಸ್ಥಾಯಿ ಸಮಿತಿ’ ರಚನೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ‘ಜಿಲ್ಲಾ ಖನಿಜ ಪ್ರತಿಷ್ಠಾನ ತಿದ್ದುಪಡಿ ನಿಯಮಗಳು– 2026ಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ.

ಈ ಸ್ಥಾಯಿ ಸಮಿತಿಗೆ ಮುಖ್ಯಮಂತ್ರಿ ಅಧ್ಯಕ್ಷರು, ಉಪ ಮುಖ್ಯಮಂತ್ರಿ ಉಪಾಧ್ಯಕ್ಷ ಆಗಿರುತ್ತಾರೆ. ಉಳಿದಂತೆ, ಗಣಿ ಇಲಾಖೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಸದಸ್ಯರಾಗಿ ಇರಲಿದ್ದಾರೆ. ಜಿಲ್ಲಾಧಿಕಾರಿ ಕ್ರಿಯಾ ಯೋಜನೆ ತಯಾರಿಸಿ ಸ್ಥಾಯಿ ಸಮಿತಿಗೆ ಕಳುಹಿಸಿ ಕೊಡಬೇಕು’ ಎಂದು ಪರಮೆಶ್ವರ ಹೇಳಿದರು.

‘ಸದ್ಯ ಇರುವ ನಿಯಮದಲ್ಲಿ ಪ್ರತಿಷ್ಠಾನಕ್ಕೆ ಜಿಲ್ಲಾಧಿಕಾರಿ ಅಧ್ಯಕ್ಷ, ಉಸ್ತುವಾರಿ ಸಚಿವರು ಸದಸ್ಯರು. ಅದನ್ನು ಬದಲಿಸಲು ನಿಯಮದಲ್ಲಿ ತಿದ್ದುಪಡಿಗೆ ಸಂಪುಟ ಅನುಮೋದನೆ ನೀಡಿದೆ’ ಎಂದರು. 

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ